SHIVAMOGGA LIVE NEWS | SHIMOGA | 15 ಏಪ್ರಿಲ್ 2022
ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲು ಈಶ್ವರಪ್ಪ ಅವರು ಬೆಂಗಳೂರಿನತ್ತ ಪ್ರಯಾಣ ಬೆಳೆಸಿದರು. ಇದಕ್ಕೂ ಮೊದಲು ಅಭಿಮಾನಿಗಳು ರಾಜೀನಾಮೆ ಸಲ್ಲಿಸದಂತೆ ಈಶ್ವರಪ್ಪ ಅವರಿಗೆ ಆಗ್ರಹಿಸಿದರು. ಈ ವೇಳೆ ಕಾರ್ಯಕರ್ತರು, ಅಭಿಮಾನಿಗಳನ್ನು ಸಮಧಾನ ಪಡಿಸಿ ಬೆಂಗಳೂರಿತ್ತ ಪ್ರಯಾಣ ಆರಂಭಿಸಿದರು.
ಬಿಜೆಪಿ ಕಚೇರಿಯಿಂದ ಸಚಿವ ಈಶ್ವರಪ್ಪ ಅವರು ಬೆಂಗಳೂರಿಗೆ ಪ್ರಯಾಣ ಆರಂಭಿಸಿದರು. ಸಚಿವ ಈಶ್ವರಪ್ಪ ಅವರ ಬೆಂಬಲಿಗರು ದೊಡ್ಡ ಸಂಖ್ಯೆಯಲ್ಲಿ ಅವರೊಂದಿಗೆ ಬೆಂಗಳೂರಿಗೆ ತೆರಳಿದ್ದಾರೆ. ನಿಗದಿಯಂತೆ ಇವತ್ತು ಸಂಜೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಈಶ್ವರಪ್ಪ ಅವರು ರಾಜೀನಾಮೆ ಸಲ್ಲಿಸಲಿದ್ದಾರೆ.
ಕಣ್ಣೀರಿಟ್ಟ ಮಹಿಳೆಯರು
ಇದಕ್ಕೂ ಮುನ್ನ ಬಿಜೆಪಿ ಕಚೇರಿಗೆ ಆಗಮಿಸಿದ ಸಚಿವ ಈಶ್ವರಪ್ಪ ಅವರನ್ನು ಮಹಿಳಾ ಅಭಿಮಾನಿಗಳು ಸುತ್ತುವರೆದರು. ರಾಜೀನಾಮೆ ಕೊಡಬೇಡಿ ಎಂದು ಮನವಿ ಮಾಡಿದರು. ಕೆಲವು ಮಹಿಳೆಯರು ಈಶ್ವರಪ್ಪ ಅವರ ಮುಂದೆ ಕಣ್ಣೀರು ಹಾಕಿದರು. ರಾಜೀನಾಮೆ ಕೊಡಬಾರದು ಎಂದು ಘೋಷಣೆ ಕೂಗಿದರು.
ಮತ್ತೆ ಮಂತ್ರಿಯಾಗಿ ಬರುತ್ತೇನೆ
ಈ ಸಂದರ್ಭ ಮಾತನಾಡಿದ ಸಚಿವ ಕೆ.ಎಸ್.ಈಶ್ವರಪ್ಪ ಅವರು, ಈಗ ನನ್ನ ಮೇಲೆ ಒಂದು ಆರೋಪ ಹೊರೆಸಿದ್ದಾರೆ. ನಾನು ಮಂತ್ರಿಯಾಗಿದ್ದರೆ ತನಿಖೆ ಮೇಲೆ ಪ್ರಭಾವ ಉಂಟಾಗಲಿದೆ ಅನ್ನುವ ಭಾವನೆ ಇರುತ್ತದೆ. ಅದಕ್ಕಾಗಿ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ನಿರ್ದೋಷಿಯಾಗಿ ಬರುತ್ತೇನೆ. ಮತ್ತೆ ಮಂತ್ರಿ ಆಗಿಯೇ ಆಗುತ್ತೇನೆ ಎಂದು ತಿಳಿಸಿದರು.
ಮೆಲ್ಪಂಕ್ತಿ ಹಾಕಿಕೊಟ್ಟಿದ್ದಾನೆ ಅನಿಸಬೇಕು
ಪ್ರತಿ ವ್ಯಕ್ತಿಗೂ ಪರೀಕ್ಷೆಯ ಸಮಯ ಬರುತ್ತದೆ. ಷಡ್ಯಂತ್ರ ನಡೆಸಿದವರು ಇವತ್ತು ತಾವು ಯಶಸ್ವಿಯಾಗಿದ್ದೇವೆ ಅಂದುಕೊಂಡಿರಬಹುದು. ನನ್ನನ್ನು ಬೆಳೆಸಿದ್ದು ನಮ್ಮ ಸಂಘಟನೆ ಮತ್ತು ಪರಿವಾರದ ನಾಯಕರು. ಒಬ್ಬ ಕಾರ್ಯಕರ್ತ ತನ್ನ ಮೇಲೆ ಆರೋಪ ಬಂದಾಗ ಆ ಸ್ಥಾನದಲ್ಲಿ ಇರುವುದಿಲ್ಲ ಅಂತಾ ತೋರಿಸಿದ್ದೇನೆ. ಈ ಮೇಲ್ಪಂಕ್ತಿ ಹಾಕಿಕೊಟ್ಟು ಉಳಿದ ಕಾರ್ಯಕರ್ತರಿಗೆ ಮಾದರಿಯಾಗಬೇಕು ಎಂಬ ಕಾರಣಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಈಶ್ವರಪ್ಪ ತಿಳಿಸಿದರು.
ಹಿಂದೆಯು ರಾಜೀನಾಮೆ ಕೊಟ್ಟಿದ್ದೆ
ಈ ಹಿಂದೆ ಇಂಧನ ಖಾತೆ ಸಚಿವನಾಗಿದ್ದೆ. ರಾಜೀನಾಮೆ ನೀಡಬೇಕು ಎಂದು ಸಂಘಟನೆ ಸೂಚನೆ ನೀಡಿತು. ಒಂದು ನಿಮಿಷವು ಯೋಚನೆ ಮಾಡದೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದೆ. ಪರ್ವ ಕಾಲ ಪಕ್ಷದ ಅಧ್ಯಕ್ಷನಾಗು ಎಂದು ಹಿರಿಯರು ಸೂಚನೆ ನೀಡಿದರು. ಅದರಂತೆ ನಾನು ಬಿಜೆಪಿ ರಾಜ್ಯಾಧ್ಯಕ್ಷನಾದೆ. ನಾನು ರಾಜ್ಯದ ಹಿರಿಯರಿಗೆ, ಮಠಾಧೀಶರಿಗೆ, ಜನರಿಗೆ ಇಷ್ಟೊಂದು ಪ್ರೀತಿಪಾತ್ರನಾಗಿದ್ದೇನಾ ಎಂದು ಈ ನಾಲ್ಕೈದು ದಿನದಲ್ಲಿ ನನಗೆ ಆಶ್ಚರ್ಯವಾಯಿತು. ಅನೇಕ ಕಡೆಯಿಂದ ಕರೆಗಳು ಬರುತ್ತಿವೆ ಎಂದರು.
ಅಳುತ್ತಾ ಕಳಿಹಿಸಿಕೊಡಬೇಡಿ
ಇಲ್ಲಿರುವ ಮಹಿಳೆಯರು ಅಳುತ್ತಿದ್ದಾರೆ. ಹೀಗೆ ಅಳುತ್ತ ಕಳುಹಿಸಬೇಡಿ. ಸಂತೋಷದಿಂದ ಕಳುಹಿಸಬೇಕು. ನನ್ನ ಮೇಲೆ ಬಂದಿರುವ ಆರೋಪದಿಂದ ನಾನು ಮುಕ್ತವಾಗಿ ಬಂದರೆ ಎಲ್ಲರಿಗೂ ಸಂತೋವಾಗುತ್ತದೆ. ಮುಖ್ಯಮಂತ್ರಿಯವರು ತನಿಖೆಗೆ ಸೂಚಿಸಿದ್ದಾರೆ. ಆ ಪ್ರಕಾರವಾಗಿ ತನಿಖೆ ನಡೆಯುತ್ತಿದೆ ಎಂದು ಈಶ್ವರಪ್ಪ ತಿಳಿಸಿದರು.
ಪ್ರಕರಣದಿಂದ ಹೊರ ಬರುತ್ತೇನೆ
ಮೂರು ದಿನದ ಕೆಳಗೆ ರಾಜೀನಾಮೆ ಕೊಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕರೆ ತಿಳಿಸಿದೆ. ಆದರೆ ಸ್ವಲ್ಪ ತಾಳ್ಮೆ ವಹಿಸುವಂತೆ ಅವರು ಸೂಚಿಸಿದರು. ನಮ್ಮ ರಾಷ್ಟ್ರೀಯ ನಾಯಕರು, ಹಿರಿಯರ ಜೊತೆಗೆ ಮಾತನಾಡಿದೆ. ಒಂದೆರಡು ದಿನ ರಾಜೀನಾಮೆ ಕೊಡಬೇಡ ಎಂದು ಹೇಳಿದರು. ನಿನ್ನೆ ಕೇಳಿದಾಗ ಒಪ್ಪಿಗೆ ಸೂಚಿಸಿದರು. ಈ ಪ್ರಕರಣದಿಂದ ಹೊರ ಬರುತ್ತೇನೆ ಎಂಬ ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಅಗ್ನಿಪರೀಕ್ಷೆ ಬರುತ್ತೆ ಅಂದುಕೊಂಡಿರಲಿಲ್ಲ
ಇಂತಹ ಅಗ್ನಿಪರೀಕ್ಷೆಯನ್ನು ಎದುರಿಸಬೇಕಾಗುತ್ತದೆ ಎಂದು ನಾನು ಅಂದುಕೊಂಡಿರಲಿಲ್ಲ. ಈ ಅಗ್ನಿಪರೀಕ್ಷೆಯಲ್ಲಿ ಯಶಸ್ವಿಯಾಗಿ ಹೊರಗೆ ಬರುತ್ತೇನೆ. ಜೀವ ಇರುವ ತನಕ ಸಂಘಟನೆ ಮೂಲಕ ದೇಶದ ಕೆಲಸವನ್ನು ಮಾಡುತ್ತೇನೆ. ರಾಷ್ಟ್ರಭಕ್ತಿಯನ್ನು ಹೆಚ್ಚಿಸೋಣ, ಹಿಂದೂಗಳ ಮೇಲಿನ ದೌರ್ಜನ್ಯ ತಡೆಯೋಣ ಎಂದು ತಿಳಿಸಿದರು.
ಇದನ್ನೂ ಓದಿ | ಗೋಪಿ ಸರ್ಕಲ್’ನಲ್ಲಿ ಟೈರ್’ಗೆ ಬೆಂಕಿ ಹಚ್ಚಿ ಆಕ್ರೋಶ
ಸಭೆ ಬಳಿಕ ಸಚಿವ ಕೆ.ಎಸ್.ಈಶ್ವರಪ್ಪ ಅವರು ದೊಡ್ಡ ಸಂಖ್ಯೆ ಬೆಂಬಲಿಗರೊಂದಿಗೆ ಬೆಂಗಳೂರಿಗೆ ತೆರಳಿದರು. ಇಂದು ಸಂಜೆ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ.
ಇದನ್ನೂ ಓದಿ | ಕಣ್ಣೀರು ಹಾಕುತ್ತ ಈಶ್ವರಪ್ಪ ಸುತ್ತುವರಿದ ಮಹಿಳೆಯರು
ಈ ಮೇಲ್ – [email protected]
WhatsApp Number – 7411700200
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200