SHIVAMOGGA LIVE NEWS | SHIMOGA | 16 ಏಪ್ರಿಲ್ 2022
ಸಚಿವ ಸ್ಥಾನಕ್ಕೆ ಕೆ.ಎಸ್.ಈಶ್ವರಪ್ಪ ರಾಜೀನಾಮೆ ಸಲ್ಲಿಸಿದ್ದಾರೆ. ಈ ಮೂಲಕ ರಾಜ್ಯ ಬಿಜೆಪಿಯ ತ್ರಿಮೂರ್ತಿಗಳ ಸಕ್ರಿಯ ರಾಜಕಾರಣದ ಯುಗಾಂತ್ಯವಾಗುತ್ತಾ ಎಂಬ ಪ್ರಶ್ನೆ ಮುನ್ನಲೆಗೆ ಬಂದಿದೆ.
ಬಿ.ಎಸ್.ಯಡಿಯೂರಪ್ಪ, ಕೆ.ಎಸ್.ಈಶ್ವರಪ್ಪ ಮತ್ತು ಡಿ.ಹೆಚ್.ಶಂಕರಮೂರ್ತಿ ಅವರು ಬಿಜೆಪಿಯನ್ನು ಕಟ್ಟಿ ಬೆಳೆಸಿದ್ದ ತ್ರಿಮೂರ್ತಿಗಳು. ರಾಜ್ಯದಲ್ಲಿ ಬಿಜೆಪಿಗೆ ಸ್ಪಷ್ಟ ಮಾರ್ಗಸೂಚಿ ರೂಪಿಸಿದ ನಾಯಕರು ಈಗ ಮಾರ್ಗದರ್ಶಿ ಮಂಡಳಿ ಸೇರುವಂತಾಗಿದೆ. ಮಲೆನಾಡು ಭಾಗದ ರಾಜಕಾರಣದ ಮತ್ತೊಂದು ಅಧ್ಯಾಯ ಮುಗಿದಂತಾಯಿತಾ ಎಂದು ಬಿಜೆಪಿ ಕಾರ್ಯಕರ್ತರು ಯೋಚಿಸುವಂತಾಗಿದೆ.
ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ಸಂಬಂಧ ಸಚಿವ ಸ್ಥಾನಕ್ಕೆ ಈಶ್ವರಪ್ಪ ರಾಜೀನಾಮೆ ನೀಡಿದ್ದಾರೆ. ಇದು ಜಿಲ್ಲೆಯ ರಾಜಕೀಯ ವಲಯದಲ್ಲಿ ದೊಡ್ಡ ಚರ್ಚೆ ಹುಟ್ಟುಹಾಕಿದೆ. ಅಲ್ಲದೆ ಬಿಜೆಪಿ ಕಟ್ಟಿ ಬೆಳೆಸಿದ ತ್ರಿಮೂರ್ತಿಗಳ ರಾಜಕಾರಣದ ಯುಗಾಂತ್ಯವಾಗುತ್ತಾ ಎಂಬ ಸಂಶಯಕ್ಕೆ ಕಾರಣವಾಗಿದೆ.
75 ವರ್ಷ ಮೇಲ್ಪಟ್ಟವರಿಗಿಲ್ಲ ಸ್ಥಾನಮಾನ
ಬಿಜೆಪಿಯಲ್ಲಿ 75 ವರ್ಷ ಮೇಲ್ಪಟ್ಟವರಿಗೆ ಯಾವುದೇ ಸ್ಥಾನಮಾನ ನೀಡಬಾರದು ಎಂಬ ನಿಯಮವಿದೆ. ಈಗಾಗಲೆ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಡಿ.ಎಚ್.ಶಂಕರಮೂರ್ತಿ ಅವರು ಕೂಡ ಚುನಾವಣೆ ರಾಜಕಾರಣದಿಂದ ದೂರ ಉಳಿದಿದ್ದಾರೆ.
ಇದನ್ನೂ ಓದಿ | ಶಿವಮೊಗ್ಗದಲ್ಲೇ ಇದ್ದರು, ಒಂದೇ ಕಾರ್ಯಕ್ರಮಕ್ಕೆ ಬಂದಿದ್ದರು, ಮುಖಾಮುಖಿ ಆಗಲಿಲ್ಲ ಇಬ್ಬರು ನಾಯಕರು
ಈಗ ಸಚಿವ ಸ್ಥಾನದಿಂದ ಕೆಳಗಿಳಿದಿರುವ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ಈಗಾಗಲೇ 74 ವರ್ಷ. ಮುಂದಿನ ವಿಧಾನಸಭೆ ಚುನಾವಣೆ ಹೊತ್ತಿಗೆ 75 ವರ್ಷ ಪೂರೈಸುತ್ತಾರೆ. ಪಕ್ಷದ ನಿಯಮದ ಪ್ರಕಾರ ಟಿಕೆಟ್ ವಂಚಿತರಾಗುವ ಸಂಭವವಿದೆ.
ಬಸವರಾಜ ಬೊಮ್ಮಾಯಿ ಸಿಎಂ ಆದಾಗ ಕೆ.ಎಸ್.ಈಶ್ವರಪ್ಪ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂಬ ಚರ್ಚೆ ಜೋರಾಗಿತ್ತು. ಕೊನೆ ಕ್ಷಣದಲ್ಲಿ ಸಂಪುಟ ಸೇರಿ ಮತ್ತೆ ಗ್ರಾಮೀಣಾಭಿವೃದ್ಧಿ ಖಾತೆಗೆ ಸಚಿವರಾದರು. ಆದರೆ ಈಗ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ತಳಕು ಹಾಕಿಕೊಂಡಿರುವುದರಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಮುಂದಿನ ಚುನಾವಣೆಗೆ ಟಿಕೆಟ್ ಸಿಗುವುದು ಕಷ್ಟ ಎಂಬ ಮಾತುಗಳು ಪಕ್ಷದ ಪಡಸಾಲೆಯಲ್ಲಿ ಕೇಳಿಬರುತ್ತಿದೆ.
ರಾಜಕೀಯ ಮುನ್ನಲೆಗೆ ಮಕ್ಕಳು
ಬಿಜೆಪಿಯ ತ್ರಿಮೂರ್ತಿಗಳು ಸಕ್ರಿಯ ರಾಜಕಾರಣದಿಂದ ಹಿಂದೆ ಸರಿದರೂ ತಮ್ಮ ಮಕ್ಕಳನ್ನು ರಾಜಕೀಯವಾಗಿ ಉತ್ತಮ ಸ್ಥಾನದಲ್ಲಿ ಕೂರಿಸಲು ಯಶಸ್ವಿಯಾಗಿದ್ದಾರೆ. ಬಿ.ಎಸ್.ಯಡಿಯೂರಪ್ಪ ಪುತ್ರರಾದ ಬಿ.ವೈ.ರಾಘವೇಂದ್ರ ಅವರು ಸಂಸದರಾಗಿದ್ದು, ಬಿ.ವೈ.ವಿಜಯೇಂದ್ರ ಬಿಜೆಪಿಯ ಉಪಾಧ್ಯಕ್ಷರಾಗಿದ್ದಾರೆ. ಡಿ.ಎಚ್.ಶಂಕರಮೂರ್ತಿ ಅವರ ಮಗ ಡಿಎಸ್.ಅರುಣ್ ಆರ್ಯ ವೈಶ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದರು ಈಗ ವಿಧಾನ ಪರಿಷತ್ ಪ್ರವೇಶ ಮಾಡಿದ್ದಾರೆ.
ಕೆ.ಎಸ್.ಈಶ್ವರಪ್ಪ ಅವರ ಪುತ್ರ ಕೆ.ಇ.ಕಾಂತೇಶ್ ರಾಜಕೀಯವಾಗಿ ದೊಡ್ಡಮಟ್ಟದ ಸ್ಥಾನಮಾನ ಪಡೆಯಲು ಸಾಧ್ಯವಾಗಿಲ್ಲ. ಒಮ್ಮೆ ಹೊಳೂರು ಭಾಗದ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದರು. ಸದ್ಯ ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಆದರೆ ಕೆ.ಎಸ್.ಈಶ್ವರಪ್ಪ ನಂತರ ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ದೊಡ್ಡದಿದ್ದು ಕೆ.ಇ.ಕಾಂತೇಶ್ ಅವರ ಹಾದಿ ಅಷ್ಟು ಸಲೀಸಾಗಿಲ್ಲ.
ಮುಳ್ಳಿನ ಹಾದಿ
ಕಾಂಗ್ರೆಸ್‌ನಿಂದ ಬೇಲಿಗೂಟ ನಿಲ್ಲಿಸಿದರೂ ಮತ ಹಾಕುತ್ತಾರೆ ಎಂಬಂತಿದ್ದ ಕಾಲದಲ್ಲಿ ಶಿವಮೊಗ್ಗದ ತ್ರಿಮೂರ್ತಿಗಳು ಪಕ್ಷ ಸಂಘಟನೆ ಮಾಡಿದ್ದರು. ಇವರು ಸವೆಸಿರುವ ಹಾದಿ ಅಷ್ಟು ಸುಲಭವಾಗಿರಲಿಲ್ಲ. ಬಿಜೆಪಿ ಹೆಸರೇ ಗೊತ್ತಿಲ್ಲದಂತಹ ಸಂದರ್ಭದಲ್ಲಿ ಜನರ ಸಮಸ್ಯೆಗಳನ್ನು ಹೋರಾಟದ ಮೂಲಕ ಸರ್ಕಾರದ ಗಮನಕ್ಕೆ ತಂದು ಜನಮಾನಸಕ್ಕೆ ಹತ್ತಿರವಾದರು. ಸೈಕಲ್‌ನಲ್ಲಿ ಊರೂರು ಸುತ್ತಿ ಪಕ್ಷ ಸಂಘಟನೆ ಮಾಡಿದ್ದರು. ಆದರೆ ರಾಜಕೀಯದ ಕೊನೆಗಾಲದಲ್ಲಿ ಯಡಿಯೂರಪ್ಪ ಹಾಗೂ ಕೆ.ಎಸ್.ಈಶ್ವರಪ್ಪ ದುರಂತ ನಿರ್ಗಮನ ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ.
ಈಶ್ವರಪ್ಪ ಮುಂದಿನ ಹಾದಿ ಏನು?
ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕೆ.ಎಸ್.ಈಶ್ವರಪ್ಪ ಮತ್ತೆ ಸಂಪುಟ ಸೇರುವುದು ಅನುಮಾನ ಎಂದು ಹೇಳಲಾಗುತ್ತಿದೆ. ಬಿಜೆಪಿಯ ಕಾರ್ಯಕಾರಿಣಿ ನಂತರ ನಡೆಯಲಿದ್ದ ಸಂಪುಟ ಪುನಾರಚನೆ ಕೆ.ಎಸ್.ಈಶ್ವರಪ್ಪ ಅವರನ್ನು ಕೈಬಿಡುತ್ತಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಅದಕ್ಕೂ ಮುನ್ನವೇ ನಿರ್ಗಮನವಾಗಿದ್ದು ಬಿಜೆಪಿ ವಲಯದಲ್ಲಿ ಬೇಸರ ಮೂಡಿಸಿದೆ. ಸಿಎಂ ಆಗಬೇಕೆಂಬ ಕನಸು ನನಸಾಗಲಿಲ್ಲ. ಶಿವಮೊಗ್ಗದಲ್ಲಿ ಯಡಿಯೂರಪ್ಪ ನಂತರ ಅತ್ಯಂತ ಪ್ರಭಾವಿ ರಾಜಕಾರಣಿಯಾಗಿದ್ದ ಕೆ.ಎಸ್.ಈಶ್ವರಪ್ಪ ಮತ್ತೆ ರಾಜಕೀಯದ ಉತ್ತುಂಗ ಸ್ಥಾನ ಕಷ್ಟ ಎಂದು ಹೇಳಲಾಗುತ್ತಿದೆ.
ಸಕ್ರಿಯ ರಾಜಕಾರಣದಿಂದ ತ್ರಿಮೂರ್ತಿಗಳು ಹಿಂದಕ್ಕೆ ಸರಿದರೆ ಬಿಜೆಪಿ ಶಕ್ತಿ ಕೇಂದ್ರದಲ್ಲಿ ಹಲವು ಬದಲಾವಣೆ ಆಗಲಿದೆ. ಇದು ಬಿಜೆಪಿಯ ಸಂಘಟನೆ ಮೇಲೆ ಯಾವ ರೀತಿಯ ಪರಿಣಾಮ ಉಂಟು ಮಾಡಲಿದೆ ಎಂಬ ಕುತೂಹಲ ರಾಜಕೀಯ ವಲಯದಲ್ಲಿದೆ. ಅಲ್ಲದೆ ಮಲೆನಾಡು ಭಾಗದಲ್ಲಿ ಮತ್ತೊಂದು ರಾಜಕೀಯ ವಿದ್ಯಮಾನಕ್ಕೆ ಸಾಕ್ಷಿಯಾಗಲಿದೆ.
ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ
ಈ ಮೇಲ್ – [email protected]
WhatsApp Number – 7411700200
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200