ಶಿವಮೊಗ್ಗ ಲೈವ್.ಕಾಂ | SHIMOGA NEWS | 14 ನವೆಂಬರ್ 2021
ವಿಧಾನ ಪರಿಷತ್ ಚುನಾವಣೆ ಹೊತ್ತಿಗೆ ಶಿವಮೊಗ್ಗ ಜೆಡಿಎಸ್ ಘಟಕಕ್ಕೆ ನೂತನ ಸಾರಥಿಯನ್ನು ನಿಯೋಜಿಸಲಾಗಿದೆ. ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಶ್ರೀಕಾಂತ್ ಅವರಿಗೆ ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಜವಾಬ್ದಾರಿ ನೀಡಲಾಗಿದೆ.
ಎಂ.ಶ್ರೀಕಾಂತ್ ಅವರಿಗೆ ಈ ಜವಾಬ್ದಾರಿ ನೀಡಿರುವುದು, ಸೊರಗಿರುವ ಸಂಘಟನೆಗೆ ಚೈತನ್ಯ ತುಂಬಲಿದೆ ಎಂಬುದು ಕಾರ್ಯಕರ್ತರ ನಂಬಿಕೆಯಾಗಿದೆ.
ಎಂಟು ವರ್ಷ ಜಿಲ್ಲಾಧ್ಯಕ್ಷರಾಗಿದ್ದರು
ಶ್ರೀಕಾಂತ್ ಅವರು ಈ ಹಿಂದೆ ಶಿವಮೊಗ್ಗ ಜಿಲ್ಲಾಧ್ಯಕ್ಷರಾಗಿ ಜವಾಬ್ದಾರಿ ನಿಭಾಯಿಸಿದ್ದರು. ಎಂಟು ವರ್ಷ ಜೆಡಿಎಸ್ ಪಕ್ಷವನ್ನು ಜಿಲ್ಲೆಯಲ್ಲಿ ಮುನ್ನಡೆಸಿದ್ದರು. ಇವರ ಅವಧಿಯಲ್ಲಿ ಪಕ್ಷ ಸದೃಢವಾಗಿ ಸಂಘಟನೆಯಾಗಿತ್ತು. ಜಿಲ್ಲೆಯಲ್ಲಿ ಮೂವರು ಜೆಡಿಎಸ್ ಶಾಸಕರು ಆಯ್ಕೆಯಾಗಿದ್ದರು. ಆದರೆ ವಿವಿಧ ರಾಜಕೀಯ ಕಾರಣಕ್ಕೆ ಶ್ರೀಕಾಂತ್ ಅವರಿಗೆ ರಾಜ್ಯ ಪ್ರಧಾನ ಕಾರ್ಯದರ್ಶಿ ಜವಾಬ್ದಾರಿ ನೀಡಲಾಗಿತ್ತು.
ಎಂಟು ತಿಂಗಳಿಂದ ಜಿಲ್ಲಾಧ್ಯಕ್ಷರಿಲ್ಲ
ಜೆಡಿಎಸ್ ಜಿಲ್ಲಾಧ್ಯಕ್ಷರಾಗಿದ್ದ ಆರ್.ಎಂ.ಮಂಜುನಾಥ ಗೌಡ ಅವರು ಪಕ್ಷ ತೊರೆದರು. ಈ ವರ್ಷದ ಏಪ್ರಿಲ್ ತಿಂಗಳಲ್ಲಿ ಅವರು ಕಾಂಗ್ರೆಸ್ ಪಕ್ಷ ಸೇರ್ಪಡೆಯಾದರು. ಹಾಗಾಗಿ ಎಂಟು ತಿಂಗಳಿಂದ ಜಿಲ್ಲಾಧ್ಯಕ್ಷ ಹುದ್ದೆ ಖಾಲಿ ಉಳಿದಿತ್ತು. ಇದೆ ಕಾರಣಕ್ಕೆ ಪಕ್ಷದ ಸಂಘಟನೆಯು ಕುಂಟಿತವಾಗಿತ್ತು.
ಗಾಂಧಿ ಭವನ ಸದಾ ಬಂದ್
ಜಿಲ್ಲಾಧ್ಯಕ್ಷರಿಲ್ಲ, ಕಾರ್ಯಕರ್ತರು ಇಲ್ಲದೆ ಜೆಡಿಎಸ್ ಜಿಲ್ಲಾ ಕಚೇರಿ ಸದಾ ಬಂದ್ ಆಗಿರುತ್ತದೆ. ನೆಹರೂ ರಸ್ತೆಯಲ್ಲಿರುವ ಗಾಂಧಿ ಭವನ ಚಟುವಟಿಕೆ ಇಲ್ಲದೆ ಕಳೆಗುಂದಿದೆ. ಮುಖಂಡರಿಲ್ಲ, ಹೊಸ ಆಲೋಚನೆಗಳಿಲ್ಲ, ಕಾರ್ಯಕ್ರಮಗಳು ಇಲ್ಲದೆ ಜೆಡಿಎಸ್ ಜಿಲ್ಲಾ ಕಚೇರಿ ಬಣಗುಡುತ್ತಿತ್ತು.
ಮತ್ತೊಮ್ಮೆ ಎಂ.ಶ್ರೀಕಾಂತ್ ಅವರು ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷರಾಗಿರುವುದು, ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚಿಸಿದೆ. ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳು ಜಿಲ್ಲೆಯಲ್ಲಿ ಪಕ್ಷದ ಇರುವಿಕೆ ಸಾಬೀತು ಮಾಡುವ ಪ್ರಮುಖ ಚುನಾವಣೆಗಳಾಗಿವೆ. ಇದರ ಬೆನ್ನಿಗೆ ವಿಧಾನ ಸಭೆ ಚುನಾವಣೆಯು ಎದುರಾಗಲಿದೆ. ಇವುಗಳ ಹೊತ್ತಿಗೆ ಪಕ್ಷವನ್ನು ಪುನರ್ ಸಂಘಟಿಸುವ ಮಹತ್ವದ ಜವಾಬ್ದಾರಿ ಶ್ರೀಕಾಂತ್ ಅವರ ಹೆಗಲೇರಿದೆ.