ಶಿವಮೊಗ್ಗ ಲೈವ್.ಕಾಂ | SHIMOGA | 15 ನವೆಂಬರ್ 2019
ಭದ್ರಾವತಿ ವಿಐಎಸ್ಎಲ್ ಕಾರ್ಖಾನೆ ಮುಂದೆ ಗುತ್ತಿಗೆ ಕಾರ್ಮಿಕರು ಟೈರ್’ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ವೇಳೆ ಕಾರ್ಮಿಕರೊಬ್ಬರಿಗೆ ಬೆಂಕಿ ತಗುಲಿದ್ದು, ಸುಟ್ಟ ಗಾಯಗಳಿಂದ ಆಸ್ಪತ್ರೆ ಸೇರಿದ್ದಾರೆ. ಮತ್ತೊಂದೆಡೆ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಕಾರ್ಖಾನೆ ಗೇಟ್ ಮುಂದೆ ಸಂಜೆ ವೇಳೆಗೆ ಗುತ್ತಿಗೆ ಕಾರ್ಮಿಕರು ಟೈರ್’ಗೆ ಬೆಂಕಿ ಹಚ್ಚಿ, ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗುತ್ತಿಗೆ ಕಾರ್ಮಿಕರು ಸಿಡಿದೆದ್ದಿದ್ದೇಕೆ?
ಗುತ್ತಿಗೆ ಕಾರ್ಮಿಕರು ಇವತ್ತು ಬೆಳಗ್ಗೆ ಕಾರ್ಖಾನೆಗೆ ಆಗಮಿಸಿದಾಗ ಗೇಟಿಗೆ ಬೀಗ ಹಾಕಲಾಗಿತ್ತು. ದಿಢೀರ್ ಬೀಗ ಹಾಕಿದ್ದಕ್ಕೆ ಗುತ್ತಿಗೆ ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದರು. ಗೇಟ್ ಮುಂದೆಯೆ ಪ್ರತಿಭಟನೆ ನಡೆಸಿದರು. ಮಾಜಿ ಶಾಸಕ ಅಪ್ಪಾಜಿ ಕೂಡ ಕಾರ್ಮಿಕರ ಹೋರಾಟಕ್ಕೆ ಬೆಂಬಲ ಸೂಚಿಸಿದರು. ಅಲ್ಲದೆ ಗೇಟ್ ಮುಂದೆ ಪ್ರತಿಭಟನೆ ನಡೆಸಿದರು.
ಬೆದರಿ ಬೀಗ ತೆಗೆದ ಆಡಳಿತ ಮಂಡಳಿ
ಗುತ್ತಿಗೆ ಕಾರ್ಮಿಕರು ಮತ್ತು ಮಾಜಿ ಶಾಸಕರ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಆಡಳಿತ ಮಂಡಳಿ ಬೆದರಿತು. ವಿಐಎಸ್ಎಲ್ ಗೇಟಿಗೆ ಹಾಕಿದ್ದ ಬೀಗವನ್ನು ತೆರವುಗೊಳಿಸಲಾಯಿತು. ಆದರೆ ಕೊಟ್ಟ ಭರವಸೆ ಈಡೇರಿಸುವಂತೆ ಆಗ್ರಹಿಸಿ ಕಾರ್ಮಿಕರು ಪ್ರತಿಭಟನೆ ಮುಂದುವರೆಸಿದರು.

ಕೊಟ್ಟ ಭರವಸೆ ಏನು?
ಗುತ್ತಿಗೆ ಕಾರ್ಮಿಕರಿಗೆ ತಿಂಗಳಿಗೆ ಕನಿಷ್ಠ 13 ದಿನ ಕೆಲಸ ಕೊಡುವ ಭರವಸೆ ನೀಡಲಾಗಿತ್ತು. ನವೆಂಬರ್ 14ರ ಒಳಗೆ ಭರವಸೆ ಈಡೇರಿಸುವುದಾಗಿ ತಿಳಿಸಲಾಗಿತ್ತು. ಆದರೆ ಈವರೆಗು ಭರವಸೆ ಈಡೇರಿಸಿಲ್ಲ. ಇದು ಕಾರ್ಮಿಕರ ಆಕ್ರೋಶಕ್ಕೆ ಪ್ರಮುಖ ಕಾರಣವಾಗಿದೆ.

‘ಕೆಳ ದರ್ಜೆ ಆಹಾರ ತಿಂದು ನೋಡಿ..’
ವಿಐಎಸ್ಎಲ್ ಗೇಟ್ ಮುಂದೆ ಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದ ವೇಳೆ, ಆಡಳಿತ ಮಂಡಳಿ ಅಧಿಕಾರಿಗಳು ಮಧ್ಯಾಹ್ನ ಊಟಕ್ಕೆಂದು ಮನೆಗೆ ಹಿಂತಿರುಗಲು ಗೇಟ್ ಬಳಿ ಬಂದರು. ಈ ವೇಳೆ ಅಧಿಕಾರಿಗಳು ಗೇಟು ದಾಟಿ ಹೊರ ಹೋಗದಂತೆ ಕಾರ್ಮಿಕರು ತಡೆದರು. ಅಲ್ಲದೆ ಪ್ರತಿ ದಿನ ಕಾರ್ಖಾನೆ ಕ್ಯಾಂಟೀನ್’ನಲ್ಲಿ ಕೆಳ ದರ್ಜೆ ಆಹಾರ ಪೂರೈಸಲಾಗುತ್ತಿದೆ. ಇವತ್ತು ನೀವು ಅದನ್ನು ತಿಂದು ನೋಡಿ ಎಂದು ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದರು. ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಅಧಿಕಾರಿಗಳು ಹಿಂತಿರುಗಿದರು.

ಸಂಜೆ ವೇಳೆ ಬಿಗುವಿನ ವಾತಾವರಣ
ಗುತ್ತಿಗೆ ಕಾರ್ಮಿಕರು ಸಂಜೆ ವೇಳೆಗೆ ಹೋರಾಟವನ್ನು ತೀವ್ರಗೊಳಿಸಿದರು. ವಿಐಎಸ್ಎಲ್ ಗೇಟ್ ಮುಂದೆ ಟೈರ್’ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಪಳನಿ (40) ಎಂಬ ಗುತ್ತಿಗೆ ಕಾರ್ಮಿಕನಿಗೆ ಸುಟ್ಟ ಗಾಯವಾಗಿದೆ. ಕೂಡಲೆ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಸದ್ಯ ಪಳನಿ ಅವರು ಅಪಾಯದಿಂದ ಪಾರಾಗಿದ್ದಾರೆ.

ಶನಿವಾರ ಹೋರಾಟ ಮತ್ತಷ್ಟು ತೀವ್ರ
ಕೊಟ್ಟ ಭರವಸೆ ಈಡೇರಿಸದಿದ್ದರೆ ವಿಐಎಸ್ಎಲ್ ಗೇಟ್ ಮುಂದೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುತ್ತದೆ ಎಂದು ಕಾರ್ಮಿಕರು ಎಚ್ಚರಿಕೆ ನೀಡಿದ್ದಾರೆ. ಕುಟುಂಬ ಸಹಿತ ಗೇಟ್ ಮುಂದೆ ವಿಷ ಸೇವಿಸುವುದಾಗಿ ವಾರ್ನಿಂಗ್ ನೀಡಿದ್ದಾರೆ.
ಸದ್ಯ ವಿಐಎಸ್ಎಲ್ ಕಾರ್ಖಾನೆ ಗೇಟ್ ಮುಂದೆ ಕಾರ್ಮಿಕರು ಪ್ರತಿಭಟನೆ ಮುಂದುವರೆಸಿದ್ದಾರೆ. ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ. ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷ ಸುರೇಶ್, ಕಾರ್ಮಿಕರ ಸಂಘದ ಅಧ್ಯಕ್ಷ ಜಗದೀಶ್, ಹಿರಿಯ ಕಾರ್ಮಿಕ ಮುಖಂಡ ಬಾಲಕೃಷ್ಣ, ರಂಗೇಗೌಡ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]