ಶಿವಮೊಗ್ಗ ಲೈವ್.ಕಾಂ | SHIMOGA NEWS | 25 ಸೆಪ್ಟಂಬರ್ 2020
ಕರೋನಾ ನಿಯಂತ್ರಿಸುವ ಕ್ರಮವಾಗಿ ಮುಂದಿನ 15 ದಿನ ಜಿಲ್ಲೆಯಾದ್ಯಂತ ವ್ಯಾಪಕವಾಗಿ ಕರೋನಾ ಪರೀಕ್ಷೆಯನ್ನು ನಡೆಸುವಂತೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಮಟ್ಟದ ಸವೇಕ್ಷಣಾ ಸಮಿತಿ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಶಿವಕುಮಾರ್ ಮುಂದಿನ 15 ದಿನ ಪ್ರತಿದಿನ ಕನಿಷ್ಟ 3 ಸಾವಿರ ಜನರಿಗೆ ಕರೋನಾ ಪರೀಕ್ಷೆ ನಡೆಸಬೇಕು. ಪ್ರತಿದಿನ 2 ಸಾವಿರ RTPCR ಮತ್ತು 1 ಸಾವಿರ ರಾಪಿಡ್ ಆಂಟಿಜನ್ ಟೆಸ್ಟ್ ನಡೆಸಬೇಕು ಎಂದು ಸೂಚಿಸಿದರು.
ಗ್ರಾಮ ಪಂಚಾಯತ್ ವ್ಯಾಪ್ತಿಯಿಂದ ಹಿಡಿದು ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು, ತಾಲೂಕು ಆಸ್ಪತ್ರೆಗಳಲ್ಲಿ ಸಹ ಕರೋನಾ ತಪಾಸಣೆ ನಡೆಸಬೇಕು. ಇದಕ್ಕೆ ಅಗತ್ಯವಾದ ತಪಾಸಣಾ ಕಿಟ್ಗಳನ್ನು ಪೂರೈಕೆ ಮಾಡಲಾಗುವುದು ಎಂದು ಅವರು ಹೇಳಿದರು.
ಸೂಕ್ತ ಚಿಕಿತ್ಸೆಗೆ ವ್ಯವಸ್ಥೆಯಾಗಬೇಕು
ಕರೋನಾ ಪರೀಕ್ಷೆ ಹೆಚ್ಚಳಕ್ಕೆ ಪೂರಕವಾಗಿ ಪಾಸಿಟಿವ್ ವ್ಯಕ್ತಿಗಳಿಗೆ ಸೂಕ್ತ ಚಿಕಿತ್ಸೆ ಒದಗಿಸಲು ಎಲ್ಲಾ ವ್ಯವಸ್ಥೆಯನ್ನು ಮಾಡಬೇಕು. ರೋಗ ಲಕ್ಷಣವಿಲ್ಲದ ಕರೋನಾ ಪೀಡಿತರಿಗೆ ಹೋಂ ಕ್ವಾರೆಂಟೈನ್ ವ್ಯವಸ್ಥೆ ಕಲ್ಪಿಸಬೇಕು. ಹೋಂ ಕ್ವಾರೆಂಟೈನ್ನಲ್ಲಿರುವವರ ಆರೋಗ್ಯದ ಮೇಲೆ ನಿಗಾ ಇರಿಸಲು ವೈದ್ಯಾಧಿಕಾರಿಗಳನ್ನು ಒಳಗೊಂಡ ತಂಡಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ರಚಿಸಬೇಕು ಎಂದರು.
ರೋಗ ಲಕ್ಷಣವಿರುವ ಮತ್ತು ಚಿಕಿತ್ಸೆ ಅಗತ್ಯವಿರುವರನ್ನು ಮಾತ್ರ ಮೆಗ್ಗಾನ್ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಬೇಕು. ಕೋವಿಡ್ ಆಸ್ಪತ್ರೆಗಳಲ್ಲಿ ಸೂಕ್ತ ಪ್ರಮಾಣದಲ್ಲಿ ಆಕ್ಸಿಜನ್ ಲಭ್ಯತೆಯನ್ನು ಖಾತ್ರಿಪಡಿಸಬೇಕು. ಮೆಗ್ಗಾನ್ ಆವರಣದಲ್ಲಿ ಇನ್ನೊಂದು ಆಕ್ಸಿಜನ್ ಪ್ಲಾಂಟ್ ಆರಂಭಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಅವರು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ, ಅಪರ ಜಿಲ್ಲಾಧಿಕಾರಿ ಜಿ.ಅನುರಾಧ, ಜಿಲ್ಲಾ ಸರ್ಜನ್ ಡಾ.ರಘುನಂದನ್ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]