ಶಿವಮೊಗ್ಗ ಲೈವ್.ಕಾಂ | SHIMOGA | 31 ಜನವರಿ 2020
ಪಿಕಪ್ ವಾಹನ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿ, ತಂದೆ ಮಗಳು ಸಾವನ್ನಪ್ಪಿದ್ದಾರೆ. ಹೊಸನಗರ ತಾಲೂಕು ರಿಪ್ಪನ್’ಪೇಟೆಯ ವರನಹೊಂಡ ಗ್ರಾಮದ ಬಳಿ ಘಟನೆ ನಡೆದಿದೆ.

ರಾಘವೇಂದ್ರ ಮತ್ತು ಸಾಹಿತ್ಯ (11) ಮೃತರು. ರಿಪ್ಪನ್’ಪೇಟೆಯ ಖಾಸಗಿ ಶಾಲೆಯಿಂದ ಮಕ್ಕಳನ್ನು ಮನೆಗೆ ಕರೆತರುವಾಗ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಸಾಹಿತ್ಯ ಸ್ಥಳದಲ್ಲೆ ಕೊನೆಯುಸಿರೆಳೆದಿದ್ದಾಳೆ ಎಂದು ಹೇಳಲಾಗಿದೆ. ಗಂಭೀರ ಗಾಯಗೊಂಡಿದ್ದ ರಾಘವೇಂದ್ರ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ಕಳುಹಿಸಲಾಯತು. ಆದರೆ ಮಾರ್ಗ ಮಧ್ಯೆ ರಾಘವೇಂದ್ರ ಅವರು ಅಸುನೀಗಿದ್ದಾರೆ.
ಬೈಕ್’ನಲ್ಲಿದ್ದ ಮತ್ತೊಬ್ಬ ಬಾಲಕಿ ಸಂರಕ್ಷಾ (7) ಗಂಭೀರವಾಗಿ ಗಾಯಗೊಂಡಿದ್ದಾಳೆ. ಆಕೆಯನ್ನು ಶಿವಮೊಗ್ಗದ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಘಟನೆಯಲ್ಲಿ ಬೈಕ್ ನುಜ್ಜುಗುಜ್ಜಾಗಿದೆ. ಪಿಕಪ್ ವಾಹನದ ಮುಂಭಾಗ ಜಖಂ ಆಗಿದೆ.
ವೈದ್ಯಕೀಯ ವ್ಯವಸ್ಥೆ ವಿರುದ್ಧ ಜನಾಕ್ರೋಶ
ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ರಾಘವೇಂದ್ರ ಮತ್ತು ಬಾಲಕಿ ಸಂರಕ್ಷಾಗೆ ರಿಪ್ಪನ್’ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸರಿಯಾದ ಚಿಕಿತ್ಸೆ ನೀಡಿಲ್ಲ ಎಂದು ಜನರು ಆರೋಪಿಸಿದರು. ಆರೋಗ್ಯ ಕೇಂದ್ರದ ಬಾಗಿಲು ಬಂದ್ ಮಾಡಿ ಪ್ರತಿಭಟನೆಯನ್ನು ನಡೆಸಿದರು.
ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೂಕ್ತ ಸೌಲಭ್ಯವಿಲ್ಲ, ಉತ್ತಮ ವೈದ್ಯರು ಇಲ್ಲ. ರಾಘವೇಂದ್ರ ಅವರಿಗೆ ಸೂಕ್ತ ಚಿಕಿತ್ಸೆ ನೀಡದೆ ಅವರನ್ನು ಶಿವಮೊಗ್ಗಕ್ಕೆ ಕಳುಹಿಸಲಾಯಿತು. ಇದೇ ಕಾರಣಕ್ಕೆ ಅವರು ಮೃತರಾಗಿದ್ದಾರೆ ಎಂದು ಆರೋಪಿಸಿ, ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರು ಸ್ಥಳಕ್ಕೆ ಆಗಮಿಸಿ, ಪ್ರತಿಭಟನಾಕಾರರನ್ನು ಸಮಾದಾನಪಡಿಸಿದರು.
ಅಪಘಾತ ಸಂಬಂಧ ರಿಪ್ಪನ್’ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]