ಶಿವಮೊಗ್ಗ ಲೈವ್.ಕಾಂ | SHIMOGA | 18 ಫೆಬ್ರವರಿ 2020

ತಾಳಗುಪ್ಪ ಗ್ರಾಮದಲ್ಲಿ ಆರಂಭಿಸಿರುವ ಬಾರ್ ಆ್ಯಂಡ್ ರೆಸ್ಟೋರೆಂಟ್ ತೆರವುಗೊಳಿಸುವಂತೆ ಆಗ್ರಹಿಸಿ ಸ್ತ್ರೀಶಕ್ತಿ ಸಂಘ, ವಿವಿಧ ಸಂಘಟನೆಗಳ ಸದಸ್ಯರು ಪ್ರತಿಭಟನೆ ನಡೆಸಿದರು. ಗ್ರಾಮದ ವಸತಿ ಪ್ರದೇಶದಲ್ಲಿ ಶಿವಮೊಗ್ಗದ ವ್ಯಕ್ತಿಯೊಬ್ಬರು ಸ್ಥಳೀಯರ ವಿರೋಧದ ನಡುವೆಯೂ ಮದ್ಯದಂಗಡಿಆರಂಭಿಸಿದ್ದಾರೆ.
ಬಾರ್ ಲೈಸನ್ಸ್ ರದ್ದು ಮಾಡುವಂತೆ ಈ ಹಿಂದೆ ಡಿಸಿಗೆ ಗ್ರಾಪಂ ಮೂಲಕ ಮನವಿ ಸಲ್ಲಿಸಲಾಗಿತ್ತು. ಇದ್ಯಾವುದನ್ನೂ ಗಣನೆಗೆ ತೆಗೆದುಕೊಳ್ಳದೆ ಅಬಕಾರಿ ಇಲಾಖೆ ಪರವಾನಗಿ ನೀಡಿದೆ ಎಂದು ಪ್ರತಿಭಟನಾಕಾರರು ದೂರಿದರು.
ಜನವಸತಿ ಪ್ರದೇಶದಲ್ಲಿ ಆರಂಭಿಸಿ ರುವ ಬಾರ್ ಆ್ಯಂಡ್ ರೆಸ್ಟೋರೆಂಟ್ ಮಾಲೀಕ ಪರವಾನಗಿ ನೀಡುವಂತೆ ಗ್ರಾಪಂಗೆ ಅರ್ಜಿ ಸಲ್ಲಿಸಿದ್ದರು. ಆದರೆ ನಾವು ಅದನ್ನು ತಿರಸ್ಕರಿಸಿದ್ದೆವು. ಗ್ರಾಪಂ ಅನ್ನು ಕಡೆಗಣಿಸಿ ಅಬಕಾರಿ ಅಧಿಕಾರಿಗಳು ಪರವಾನಗಿ ನೀಡಿದ್ದಾರೆ ಎಂದು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸುಜಾತಾ ತಾಳಗುಪ್ಪ ಆರೋಪಿಸಿದ್ದಾರೆ.
ಸ್ಥಳೀಯ ಗ್ರಾಮ ಪಂಚಾಯಿತಿ ಎನ್ಒಸಿ ನೀಡಿಲ್ಲ. ಆದರೂ ಶಿವಮೊಗ್ಗದಿಂದ ಪರವಾನಗಿ ನೀಡಿರುವುದನ್ನು ನೋಡಿದರೆ ಇದರ ಹಿಂದೆ ಪ್ರಭಾವಿಗಳ ಕೈವಾಡವಿದೆ ಎಂಬುದು ಮೇಲ್ನೋಟಕ್ಕೆ ತಿಳಿಯುತ್ತದೆ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳು ಪರಿಶೀಲಿಸಿ ಪರವಾನಗಿ ರದ್ದು ಮಾಡಬೇಕೆಂದು ಆಗ್ರಹಿಸಿದರು. ಗ್ರಾಪಂ ಮಾಜಿ ಅಧ್ಯಕ್ಷ ಮಹೇಶ್, ಸದಸ್ಯ ಓಂಕಾರ, ಉಪಾಧ್ಯಕ್ಷೆ ಸುಜಾತಾ, ಉದಯ ಗೌಡ, ಶಿವರಾಂ ಇತರರಿದ್ದರು.

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]
