ಶಿವಮೊಗ್ಗ ಲೈವ್.ಕಾಂ | BHADRAVATHI NEWS | 3 ಸೆಪ್ಟೆಂಬರ್ 2021
ಕಾಂಗ್ರೆಸ್ ಅಭ್ಯರ್ಥಿ ನಿಧನದಿಂದಾಗಿ ಭದ್ರಾವತಿ ನಗರಸಭೆಯ 29ನೇ ವಾರ್ಡ್’ನಲ್ಲಿ ಸ್ಥಗಿತವಾಗಿದ್ದ ಮತದಾನ ಇವತ್ತು ನಡೆಯುತ್ತಿದೆ. ಬೆಳಗ್ಗೆಯಿಂದ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ಮತದಾರರು ತಮ್ಮ ಹಕ್ಕು ಚಲಾಯಿಸಲು ಸಾಲುಗಟ್ಟಿ ನಿಂತಿದ್ದಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಬೆಳಗ್ಗೆ 7 ಗಂಟೆ ಯಿಂದ ಸಂಜೆ 6 ಗಂಟೆವರೆಗೂ ಮತದಾನ ಪ್ರಕ್ರಿಯೆ ನಡೆಯಲಿದೆ. ಒಟ್ಟು 3423 ಮತದಾರರು ಹಕ್ಕು ಚಲಾಯಿಸಲಿದ್ದಾರೆ. ಈ ಪೈಕಿ 1716 ಮಹಿಳಾ ಮತದಾರರು, 1707 ಪುರುಷ ಮತದಾರರಿದ್ದಾರೆ. ಶಾಂತಿಯುತವಾಗಿ ಮತದಾನ ಪ್ರಕ್ರಿಯೆ ನಡೆಸುವ ಸಂಬಂಧ 20 ಪೋಲಿಂಗ್ ಸಿಬ್ಬಂದಿಗಳು, 8 ಪೊಲೀಸರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ.
VIDEO NEWS
ಜಿದ್ದಾಜಿದ್ದಿನ ಕಣವಾದ 29ನೇ ವಾರ್ಡ್
ಭದ್ರಾವತಿ ನಗರಸಭೆ 29ನೇ ವಾರ್ಡ್ ಉಪಚುನಾವಣೆಯು ಜಿದ್ದಾಜಿದ್ದಿನ ಕಣವಾಗಿ ಮಾರ್ಪಟಿದ್ದು ಮೂರು ಪಕ್ಷಗಳಿಗೂ ಪ್ರತಿಷ್ಠೆಯಾಗಿ ಪರಿಗಣಿಸಿವೆ. ಜೆಡಿಎಸ್’ನಿಂದ ನಾಗರತ್ನ ಅನಿಲ್ ಕುಮಾರ್, ಬಿಜೆಪಿಯಿಂದ ರಮಾ ವೆಂಕಟೇಶ್, ಕಾಂಗ್ರೆಸ್’ನಿಂದ ಲೋಹಿತಾ ನಂಜಪ್ಪ ಕಣದಲ್ಲಿದ್ದಾರೆ. ಪಕ್ಷೇತರರಾಗಿ ಯಾರೂ ಸ್ಪರ್ಧಿಸಿಲ್ಲ.
ಜೆಡಿಎಸ್ ಅಭ್ಯರ್ಥಿ ಬದಲಾವಣೆಯಿಲ್ಲ
29ನೇ ವಾರ್ಡ್’ನ ಕಾಂಗ್ರೆಸ್ ಅಭ್ಯರ್ಥಿ ಶ್ರುತಿ ಮಂಜುನಾಥ್ ನಿಧನದ ಪರಿಣಾಮ ಚುನಾವಣೆ ಮುಂದೂಡಲಾಗಿತ್ತು. ಈಗ ಜೆಡಿಎಸ್ ಪಕ್ಷ ತನ್ನ ಅಭ್ಯರ್ಥಿಯನ್ನು ಬದಲಾವಣೆ ಮಾಡಿಲ್ಲ. ಬಿಜೆಪಿಯಿಂದ ಶೋಭಾ ಬದಲಿಗೆ ರಮಾ ವೆಂಕಟೇಶ್ ಅವರಿಗೆ ಟಿಕೆಟ್ ನೀಡಲಾಗಿದೆ.
29ನೇ ವಾರ್ಡ್ ಹಿಂದಿನಿಂದಲೂ ಜೆಡಿಎಸ್ ಹಿಡಿತದಲ್ಲಿದ್ದು ಅದನ್ನು ಗೆಲ್ಲಲು ಕಾಂಗ್ರೆಸ್, ಬಿಜೆಪಿ ಪ್ರಬಲ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಿದೆ. ಒಕ್ಕಲಿಗರ ಮತಗಳೇ ಹೆಚ್ಚಿರುವ ಈ ವಾರ್ಡ್’ನಲ್ಲಿ ಮೂರು ಪಕ್ಷದಿಂದಲೂ ಒಕ್ಕಲಿಗ ಅಭ್ಯರ್ಥಿ ಗಳೇ ಕಣಕ್ಕಿಳಿದಿರುವುದು ವಿಶೇಷ. ಕಳೆದ ಬಾರಿ 29ನೇ ವಾರ್ಡ್’ನಿಂದ ಅನಿಲ್ ಕುಮಾರ್ ಆಯ್ಕೆಯಾಗಿದ್ದರು. ಮೀಸಲಾತಿ ಬದಲಾದ ಕಾರಣ ಪತ್ನಿ ನಾಗರತ್ನರನ್ನು ಕಣಕ್ಕಿಳಿಸಿದ್ದಾರೆ. ಅವರ ಪರವಾಗಿ ಜೆಡಿಎಸ್ ಮುಖಂಡರಾದ ಅಜಿತ್ ಅಪ್ಪಾಜಿಗೌಡ, ಶಾರದಾ ಅಪ್ಪಾಜಿ, ಯೋಗೇಶ್ ಗೌಡ, ಮಣಿಶೇಖರ್ ಸೇರಿ ಘಟಾನುಘಟಿಗಳು ಭರ್ಜರಿ ಕ್ಯಾಂಪೇನ್ ಮಾಡಿದ್ದಾರೆ. ಐದಾರು ಬಾರಿ ಮನೆ ಮನೆ ಸಂದರ್ಶನ ಮಾಡಿದ್ದು ಗೆಲುವಿನ ವಿಶ್ವಾಸದಲ್ಲಿದ್ದಾರೆ.
ಇನ್ನು ಕಾಂಗ್ರೆಸ್ ಅಭ್ಯರ್ಥಿ ಲೋಹಿತಾ ನಂಜಪ್ಪ ವೃತ್ತಿಯಲ್ಲಿ ವಕೀಲರಾಗಿದ್ದು ಅವರ ಪತಿ ನಂಜಪ್ಪ ಕೂಡ ವಕೀಲರಾಗಿದ್ದರು. ಮಹಿಳಾ ಒಕ್ಕಲಿಗ ಸಂಘ, ಹಲವು ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದಾರೆ. ಅವರ ಪುತ್ರ ಕೂಡ ವಕೀಲರಾಗಿದ್ದಾರೆ. ಇದೇ ಮೊದಲ ಬಾರಿಗೆ ಚುನಾವಣಾ ಅಖಾಡಕ್ಕೆ ಧುಮುಕಿರುವ ಅವರಿಗೆ ಕಾಂಗ್ರೆಸ್ ಶಾಸಕ ಬಿ.ಕೆ.ಸಂಗಮೇಶ್, ಬಾಲಣ್ಣ ಸೇರಿ ಹಲವು ಪ್ರಮುಖರ ಬೆಂಬಲ ಸಿಕ್ಕಿದೆ. ನಗರಸಭೆಯಲ್ಲಿ ಕಾಂಗ್ರೆಸ್ ಬಹುಮತ ಸಾಧಿಸಿದ್ದು ಈ ವಾರ್ಡ್ ಕೂಡ ಗೆಲ್ಲುವ ಮೂಲಕ ಶಕ್ತಿ ಹೆಚ್ಚಿಸಿಕೊಳ್ಳಲು ಕಾರ್ಯಕರ್ತರು, ಮುಖಂಡರು ಶ್ರಮಿಸಿದ್ದಾರೆ.
ಬಿಜೆಪಿಯಿಂದ ಕಣಕ್ಕಿಳಿದಿರುವ ರಮಾ ವೆಂಕಟೇಶ್ ದೇವರಾಜ ಅರಸು ಜನಸ್ಪಂದನ ವೇದಿಕೆ, ಸುವರ್ಣ ಮಹಿಳಾ ವೇದಿಕೆ ಮೂಲಕ ಚಿರಪರಿಚಿತರು. ಘಟಾನುಘಟಿ ನಾಯಕರ ಪ್ರಚಾರದ ಹೊರತಾಗಿಯೂ ನಾಲ್ಕು ಸ್ಥಾನ ಗೆದ್ದಿರುವ ಬಿಜೆಪಿಗೆ ಈ ವಾರ್ಡ್ ಕೂಡ ಕಠಿಣ ಸವಾಲಾಗಿ ಪರಿಗಣಿಸಿದೆ. ಈ ಬಾರಿ ತಾಲ್ಲೂಕು ಮಟ್ಟದ ನಾಯಕರ ಹೊರತಾಗಿ ಬೇರೆ ಯಾರೂ ಪ್ರಚಾರಕ್ಕೆ ಬಂದಿಲ್ಲ. ಮಹಿಳಾ ಸಂಘಟನೆಗಳ ಮೂಲಕ ಚಿರಪರಿಚಿತರಾಗಿರುವ ರಮಾ ವೆಂಕಟೇಶ್ ಅದೃಷ್ಟ ಪರೀಕ್ಷೆಗೆ ನಿಂತಿದ್ದು ಪ್ರಬಲ ಸ್ಪರ್ಧೆ ಒಡ್ಡುತ್ತಿದ್ದಾರೆ.
ಮೂರು ಅಭ್ಯರ್ಥಿಗಳು ಪ್ರಬಲ ಹಿನ್ನೆಲೆವುಳ್ಳವರಾದ ಕಾರಣ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಇದೆ. ಅಂತಿಮವಾಗಿ ವಿಜಯಲಕ್ಷ್ಮಿ ಯಾರಿಗೆ ಒಲಿಯಬಹುದು ಎಂಬ ಕುತೂಹಲವಿದೆ.
ಮೂವರು ವಲಸೆ ಅಭ್ಯರ್ಥಿಗಳು
ಚುನಾವಣೆ ಎದುರಿಸುತ್ತಿರುವ ಮೂವರೂ ಅಭ್ಯರ್ಥಿಗಳು ವಲಸೆ ಅಭ್ಯರ್ಥಿಗಳಾಗಿದ್ದಾರೆ. ಜೆಡಿಎಸ್’ನ ನಾಗರತ್ನ 30ನೇ ವಾರ್ಡ್’ನ ಹೊಸ ಸಿದ್ದಾಪುರದವರು, ಕಾಂಗ್ರೆಸ್ನ ಲೋಹಿತಾ ನಂಜಪ್ಪ 33ನೇ ವಾರ್ಡ್, ಬಿಜೆಪಿಯ ರಮಾ ವೆಂಕಟೇಶ್ 32ನೇ ವಾರ್ಡ್’ನವರಾಗಿದ್ದಾರೆ.
ಈಗ ನಗರಸಭೆಯಲ್ಲಿ ಬಲಾಬಲ
35 ವಾರ್ಡ್’ನ ನಗರಸಭೆಯ ಬಲಾಬಲದಲ್ಲಿ ಕಾಂಗ್ರೆಸ್ 18, ಜೆಡಿಎಸ್ 11, ಬಿಜೆಪಿ 4, ಪಕ್ಷೇತರ 1 ಅಭ್ಯರ್ಥಿ ಗೆದ್ದಿದ್ದಾರೆ. 29ನೇ ವಾರ್ಡ್’ನಲ್ಲಿ ಯಾರೇ ಗೆದ್ದರೂ ಕಾಂಗ್ರೆಸ್’ಗೆ ಆಡಳಿತ ಹಿಡಿಯಲು ತೊಂದರೆ ಇಲ್ಲ. ಎಂಎಲ್ಎ, ಎಂಪಿ ಮತ ಹಾಕಲು ಅವಕಾಶವಿರುವುದರಿಂದ ಕ್ರಾಸ್ ವೋಟಿಂಗ್ ನಡೆದರೆ ಜೆಡಿಎಸ್, ಬಿಜೆಪಿ ಸೇರಿ ಆಡಳಿತ ಹಿಡಿಯುವ ಉತ್ಸಾಹದಲ್ಲಿದ್ದಾರೆ.
(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200