ಶಿವಮೊಗ್ಗದ ಲೈವ್.ಕಾಂ | SHIMOGA NEWS | 27 ಡಿಸೆಂಬರ್ 2021
ರಾಜ್ಯದಲ್ಲಿ ಮತಾಂತರ ಕಾಯಿದೆಯ ಬಗ್ಗೆ ಚರ್ಚೆ ಬಿಸಿಯಾಗಿರುವಾಗಲೇ ಭದ್ರಾವತಿಯಲ್ಲಿ ಒಂದೇ ಕುಟುಂಬದ 9 ಮಂದಿ ಕ್ರೈಸ್ತ ಧರ್ಮದಿಂದ ಹಿಂದೂ ಧರ್ಮಕ್ಕೆ ವಾಪಸ್ ಆಗಿದ್ದಾರೆ. ವಿಶೇಷ ಪೂಜೆಗಳ ಮೂಲಕ ಇವರನ್ನು ಹಿಂದೂ ಧರ್ಮಕ್ಕೆ ಸ್ವಾಗತಿಸಲಾಯಿತು.
ಭದ್ರಾವತಿ ತಾಲೂಕಿನ ಅಂತರಗಂಗೆ ಗ್ರಾಮದ ನಿವಾಸಿಗಳಾದ ಜಯಶೀಲನ್ ಮತ್ತು ಜಯಮ್ಮ ಎಂಬುವರು ತಮ್ಮ ಕುಟುಂಬದ ಸಮೇತ ಹಿಂದೂ ಧರ್ಮಕ್ಕೆ ಭಾನುವಾರ ಮರಳಿದ್ದಾರೆ.
40 ವರ್ಷಗಳ ಹಿಂದೆ ಮತಾಂತರ
ಜಯಶೀಲನ್ ಅವರ ತಂದೆ ಏಳುಮಲೈ ಎನ್ನುವವರು ಸುಮಾರು 40 ವರ್ಷಗಳ ಹಿಂದೆ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದರು. ಆದರೆ, ಕುಟುಂಬದವರಾರೂ ಚರ್ಚ್ಗೆ ಹೋಗುತ್ತಿರಲಿಲ್ಲ. ಕ್ರೈಸ್ತ ಧರ್ಮದ ಪ್ರಾರ್ಥನೆಗಳನ್ನು ಮಾಡುತ್ತಿರಲಿಲ್ಲ. ಬದಲಿಗೆ ಹಿಂದೂ ಧರ್ಮದ ಆಚರಣೆಗಳನ್ನೇ ಪಾಲಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಎರಡು ವರ್ಷಗಳ ಹಿಂದಿನಿಂದ ಜಯಶೀಲನ್ ಮತ್ತು ಜಯಮ್ಮ ಅವರ ಕುಟುಂಬ ಹಿಂದೂ ಧರ್ಮಕ್ಕೆ ಮರಳುವ ಪ್ರಯತ್ನದಲ್ಲಿದ್ದರು ಎಂದು ತಿಳಿದು ಬಂದಿದೆ.
ಯಾರೆಲ್ಲ ಹಿಂದೂ ಧರ್ಮಕ್ಕೆ ಮರಳಿದ್ದಾರೆ?
ಭದ್ರಾವತಿ ಅಂತರಗಂಗೆ ಗ್ರಾಮದ ಜಯಶೀಲನ್, ಜಯಮ್ಮ, ಹಿರಿಯ ಮಗ ಪ್ರಭಾಕರನ್, ಪತ್ನಿ ಲಲಿತಾ, ಮಕ್ಕಳಾದ ಭರತ್ ಕುಮಾರ್, ಭಾವನಾ, ದ್ವಿತೀಯ ಪುತ್ರ ಪ್ರಕಾಶ್, ಪತ್ನಿ ಶ್ವೇತಾ, ಪುತ್ರಿ ಪೃಥ್ವಿ ಅವರು ಹಿಂದೂ ಧರ್ಮಕ್ಕೆ ಮರಳಿದ್ದಾರೆ. ಈ ಕುಟುಂಬ ವರ್ಕ್ ಶಾಪ್ ನಡೆಸುತ್ತಿದೆ. ಜೊತೆಗೆ ಟೈಲರಿಂಗ್ ವೃತ್ತಿಯನ್ನೂ ಮಾಡಿಕೊಂಡಿದೆ.
ಬಜರಂಗದಳ ವಿ.ಹೆಚ್.ಪಿ ಸಾರಥ್ಯ
ಜಯಶೀಲನ್ ಕುಟುಂಬದವರು ಹಿಂದೂ ಧರ್ಮಕ್ಕೆ ಮರಳುವ ವಿಚಾರವನ್ನು ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಸಂಘಟನೆ ಮುಖಂಡರಿಗೆ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಭದ್ರಾವತಿಯ ಜನ್ನಾಪುರ ಶ್ರೀ ರಾಮ ಭಜನಾ ಮಂಡಳಿಯಲ್ಲಿ ಸಮಾರಂಭ ಆಯೋಜಿಸಲಾಗಿತ್ತು. ಈ ಸಮಾರಂಭದಲ್ಲಿ ಒಂದೇ ಕುಟುಂಬದ ಒಂಭತ್ತು ಮಂದಿಯನ್ನು ಹಿಂದೂ ಧರ್ಮಕ್ಕೆ ಸ್ವಾಗತ ಕೋರಲಾಯಿತು. ಕೃಷ್ಣಮೂರ್ತಿ ಸೋಮಯಾಜಿ, ಅರಕೆರೆಯ ಕರಿಸಿದ್ದೇಶ್ವರ ಸ್ವಾಮೀಜಿ ಅವರ ಸಮ್ಮುಖದಲ್ಲಿ ಘರ್ ವಾಪಸಿ ಕಾರ್ಯಕ್ರಮ ನಡೆಯಿತು.
‘ವಿದೇಶದಿಂದ ಹರಿದು ಬರುತ್ತಿದೆ ಹಣ’
ಸಮಾರಂಭದಲ್ಲಿ ಮಾತನಾಡಿದ ವಿಶ್ವ ಹಿಂದೂ ಪರಿಷತ್ ಪ್ರಾಂತ ಉಪಾಧ್ಯಕ್ಷ ಹಾ. ರಾಮಪ್ಪ, ‘ಹಿಂದೂ ಧರ್ಮವನ್ನು ನಾಶಪಡಿಸಲು ಬಡವರ ಬಲಹೀನತೆಯನ್ನು ಅರಿತುಕೊಂಡು, ಮತಾಂತರ ಮಾಡಲಾಗುತ್ತಿದೆ. ಮತಾಂತರ ಕಾರ್ಯಕ್ಕೆ ವಿದೇಶದಿಂದ ಹೇರಳವಾಗಿ ಹಣ ಹರಿದು ಬರುತ್ತಿದೆ. ಈ ಹಣವನ್ನು ಒತ್ತಾಯದ ಮತಾಂತರ ಕಾರ್ಯಕ್ಕೆ ಬಳಕೆ ಮಾಡಲಾಗುತ್ತಿದೆ. ಹಿಂದೂ ಧರ್ಮದ ಸಂಸ್ಕಾರ, ಹಬ್ಬ ಹರಿದಿನಗಳನ್ನು ಶ್ರದ್ಧೆಯಿಂದ ಆಚರಿಸಿದರೆ ಶಾಂತಿ, ಸಮೃದ್ಧಿ, ನೆಮ್ಮದಿ ಖಂಡಿತ ದೊರೆಯಲಿದೆ’ ಎಂದರು.
‘ಇನ್ಮುಂದೆ ಸೌಲಭ್ಯಗಳು ದೊರೆಯುವುದಿಲ್ಲ’
ಜ್ಯೋತಿಷಿ ಸುರೇಶ್ ಬಾಬು ಮಾತನಾಡಿ, ‘ಮತಾಂತರ ಆಗುತ್ತಿರುವ ಬಹಳ ಜನರು ಸಮಾಜದಲ್ಲಿ ಹಿಂದುಳಿದವರು, ಪರಿಶಿಷ್ಟ ಜಾತಿ, ಪಂಗಡಕ್ಕೆ ಸೇರಿದವರು ಎಂಬುದು ಗಮನಾರ್ಹ. ಸರ್ಕಾರ ಇವರಿಗೆ ಎಲ್ಲಾ ಸೌಲಭ್ಯ ಒದಗಿಸುತ್ತಿದೆ. ಮತಾಂತರವಾದರೆ ಈ ಸೌಲಭ್ಯಗಳಿಂದ ಅವರು ವಂಚಿತವಾಗುತ್ತಾರೆ’ ಎಂದರು.
ಮಹತ್ವ ಪಡೆದ ಘರ್ ವಾಪಸಿ
ಮತಾಂತರ ನಿಷೇಧ ಕಾಯ್ದೆ ಕುರಿತು ರಾಜ್ಯಾದ್ಯಂತ ಭಾರಿ ಚರ್ಚೆ ನಡೆಯುತ್ತಿದೆ. ಈ ಸಂದರ್ಭ ಒಂದೇ ಕುಟುಂಬದ ಒಂಭತ್ತು ಮಂದಿ ಹಿಂದೂ ಧರ್ಮಕ್ಕೆ ಮರಳಿರುವುದು ಮಹತ್ವ ಪಡೆದುಕೊಂಡಿದೆ. ಈ ಬೆಳವಣಿಗೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಷೇರ್ ಮಾಡಿಕೊಳ್ಳುತ್ತಿದ್ದಾರೆ.
ಸಮಾರಂಭದಲ್ಲಿ ವಿಶ್ವಹಿಂದೂ ಪರಿಷತ್ತಿನ ಪ್ರಮುಖರಾದ ಡಿ.ಆರ್. ಶಿವಕುಮಾರ್, ವೈ.ಎಸ್.ರಾಮಮೂರ್ತಿ, ಎಸ್. ನಾರಾಯಣ್, ಪಿ. ಮಂಜುನಾಥ್ ರಾವ್, ಶೈಲೇಶ್ ಕೋಟಿ, ಸಿ. ಮಹೇಶ್ವರಪ್ಪ ಶಿವಮೂರ್ತಿ ಉಪಸ್ಥಿತರಿದ್ದರು.