ಶಿವಮೊಗ್ಗದ ಲೈವ್.ಕಾಂ | BHADRAVATHI NEWS | 1 ಫೆಬ್ರವರಿ 2022
ಉಡುಪಿ ಕಾಲೇಜಿನ ಹಿಜಾಬ್ ವಿವಾದ ಜೀವಂತವಾಗಿದೆ. ಈ ಮಧ್ಯೆ ಭದ್ರಾವತಿಯ ಪ್ರತಿಷ್ಠಿತ ಕಾಲೇಜಿನಲ್ಲೂ ಇದೇ ರೀತಿಯ ವಿವಾದ ಭುಗಿಲೆದ್ದಿದೆ. ಸಮವಸ್ತ್ರವಿದ್ದರೂ ಕೆಲವರಿಗೊಂದು, ಉಳಿದವರಿಗೊಂದು ನೀತಿ ಅನುಸರಿಸದಂತೆ ಆಗ್ರಹಿಸಿ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಕಾಲೇಜಿಗೆ ಬಂದಿದ್ದರು.
ಭದ್ರಾವತಿ ನ್ಯೂಸ್ ಟೌನ್’ನ ಸರ್.ಎಂ.ವಿ.ಕಾಲೇಜಿನಲ್ಲಿ ಇವತ್ತು ಹಲವು ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಬಂದಿದ್ದರು. ಎಲ್ಲಾ ವಿದ್ಯಾರ್ಥಿಗಳಿಗೂ ಸಮವಸ್ತ್ರ ಕಡ್ಡಾಯಗೊಳಿಸಬೇಕು ಎಂದು ವಿದ್ಯಾರ್ಥಿಗಳು, ಹಿಂದೂ ಸಂಘಟನೆಗಳ ಕಾರ್ಯಕರ್ತರು ಆಗ್ರಹಿಸಿದರು. ಇದರಿಂದ ಕೆಲವು ಹೊತ್ತು ಕಾಲೇಜಿನಲ್ಲಿ ಬಿಗುವಿನ ವಾತಾವರಣವಿತ್ತು.
ತರಗತಿಗೆ ಕೇಸರಿ ಶಾಲು
ಸರ್.ಎಂ.ವಿ. ಕಾಲೇಜಿನಲ್ಲಿ ಸಮವಸ್ತ್ರ ಕಡ್ಡಾಯವಿದೆ. ಹಾಗಿದ್ದೂ, ಮುಸ್ಲಿಂ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿನಿಯರು ತರಗತಿಗಳಲ್ಲೂ ಹಿಜಾಬ್ ಧರಿಸುತ್ತಾರೆ. ಇದು ಸರಿಯಾದ ಕ್ರಮವಲ್ಲ. ಆದ್ದರಿಂದ ತಾವು ಕೇಸರಿ ಶಾಲು ಧರಿಸಿ ತರಗತಿಗೆ ಬರುತ್ತೇವೆ ಎಂದು ಕೆಲವು ವಿದ್ಯಾರ್ಥಿಗಳು ತಿಳಿಸಿದ್ದರು.
ಇವತ್ತು ಹಲವು ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ, ಕಾಲೇಜಿಗೆ ಬಂದಿದ್ದರು. ಇನ್ಮುಂದೆ ಕೇಸರಿ ಶಾಲು ಧರಿಸಿಕೊಂಡೇ ತರಗತಿಗೆ ಬರುವುದಾಗಿ ಕಾಲೇಜು ಆಡಳಿತ ಮಂಡಳಿಗೆ ತಿಳಿಸಿದರು.
ಕ್ರಮ ಕೈಗೊಂಡ ಆಡಳಿತ ಮಂಡಳಿ
ಕೇಸರಿ ಶಾಲು ಧರಿಸಿ ಬಂದ ವಿದ್ಯಾರ್ಥಿಗಳ ಜೊತೆಗೆ ಕಾಲೇಜು ಆಡಳಿತ ಮಂಡಳಿ ಚರ್ಚೆ ನಡೆಸಿತು. ವಿವಿಧ ಸಂಘಟನೆಗಳ ಪ್ರಮುಖರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಎಲ್ಲಾ ವಿದ್ಯಾರ್ಥಿಗಳಿಗು ಸಮವಸ್ತ್ರ ಕಡ್ಡಾಯಗೊಳಿಸಲಾಗಿದೆ. ತರಗತಿ ಪ್ರವೇಶಿಸುವಾಗ ಸಮವಸ್ತ್ರದಲ್ಲೇ ಇರಬೇಕು ಎಂದು ಪಟ್ಟು ಹಿಡಿದರು.
ಘಟನೆ ಕುರಿತು ಶಿವಮೊಗ್ಗ ಲೈವ್.ಕಾಂ ಜೊತೆಗೆ ಮಾತನಾಡಿದ ಸರ್.ಎಂ.ವಿ.ಕಾಲೇಜು ಪ್ರಾಂಶುಪಾಲ ಡಾ.ಉಮಾಶಂಕರ್, ‘ಕಾಲೇಜಿನಲ್ಲಿ ಸಮವಸ್ತ್ರ ಕಡ್ಡಾಯವಿದೆ. ಹಿಜಾಬ್ ಧರಿಸಿ ಬರುವ ವಿದ್ಯಾರ್ಥಿನಿಯರು, ಕಾಲೇಜಿನ ವೇಯ್ಟಿಂಗ್ ರೂಮ್’ನಲ್ಲಿ ಅದನ್ನು ತೆಗೆದು, ಸಮವಸ್ತ್ರದಲ್ಲೇ ತರಗತಿಗೆ ಬರಬೇಕು. ಗುರುವಾರದಿಂದ ಈ ನಿಯಮವನ್ನು ಕಡ್ಡಾಯಗೊಳಿಸಲಾಗಿದೆ’ ಎಂದು ತಿಳಿಸಿದರು.
‘ದಿಢೀರ್ ವಿವಾದವಲ್ಲ’
ಇನ್ನು, ಹಿಜಾಬ್ ವಿವಾದ ದಿಢೀರ್ ಆರಂಭವಾಗಿದ್ದಲ್ಲ. ‘ಕಳೆದ ವಾರ ವಿದ್ಯಾರ್ಥಿನಿಯೊಬ್ಬಳ ಜೊತೆಗೆ ವಿದ್ಯಾರ್ಥಿಯೊಬ್ಬ ಮಾತನಾಡುತ್ತಿದ್ದಾಗ ಗಲಾಟೆಯಾಗಿತ್ತು. ವಿದ್ಯಾರ್ಥಿನಿಯ ಸಮುದಾಯಕ್ಕೆ ಸೇರಿದ ಕೆಲವು ಯುವಕರು ಆಕೆಯೊಂದಿಗೆ ಮಾತನಾಡದಂತೆ ವಿದ್ಯಾರ್ಥಿಗೆ ಎಚ್ಚರಿಸಿದ್ದರು. ಇದರಿಂದ ವಿವಾದ ಹುಟ್ಟಿಕೊಂಡಿರುವ ಸಾಧ್ಯತೆ ಇದೆ’ ಎಂದು ಪ್ರಾಂಶುಪಾಲರಾದ ಡಾ.ಉಮಾಶಂಕರ್ ತಿಳಿಸಿದ್ದಾರೆ.
ಸರ್.ಎಂ.ವಿ.ಕಾಲೇಜು, ಭದ್ರಾವತಿಯ ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದು. ವಿವಿಧೆಡೆಯ ವಿದ್ಯಾರ್ಥಿಗಳು ಇಲ್ಲಿ ವಿದ್ಯಭ್ಯಾಸ ಮಾಡುತ್ತಿದ್ದಾರೆ. ಮುಸ್ಲಿಂ ಸಮುದಾಯಕ್ಕೆ ಸೇರಿದ ಸುಮಾರು 250 ವಿದ್ಯಾರ್ಥಿನಿಯರು ಈ ಕಾಲೇಜಿನಲ್ಲಿ ಓದುತ್ತಿದ್ದಾರೆ.
About Sir MV College | About Shivamogga Live
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200