ಶಿವಮೊಗ್ಗದ ಲೈವ್.ಕಾಂ | SAGARA / HOSANAGARA NEWS | 24 ಜನವರಿ 2022
ಪ್ರಕಾಶ್ ಟ್ರಾವೆಲ್ಸ್ ಮಾಲೀಕ ಪ್ರಕಾಶ್ ಅವರು ಮೃತಪಟ್ಟಿದ್ದಾರೆ. ಪಟಗುಪ್ಪ ಸೇತುವೆ ಸಮೀಪ ಹೊಳೆಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಈ ಮಧ್ಯೆ ಅವರ ಸಾವಿನ ಕುರಿತು ಕುಟುಂಬದವರು, ಆಪ್ತರು, ಸಂಸ್ಥೆಯ ಕಾರ್ಮಿಕರು ಹಲವು ಅನುಮಾನ ವ್ಯಕ್ತಪಡಿಸಿದ್ದಾರೆ. ಆ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರಕಾಶ್ ಅವರು ನಾಪತ್ತೆಯಾದ ಬಳಿಕ ಪ್ರಮುಖ ವಿದ್ಯಮಾನ ನಡೆದವು. ಅವುಗಳ ಸಂಕ್ಷಿಪ್ತ ವಿವರ ಇಲ್ಲಿದೆ.
♦ ರಾತ್ರಿ ಇಡೀ ಆತಂಕ
ಪ್ರಕಾಶ್ ಟ್ರಾವೆಲ್ಸ್ ಮಾಲೀಕ ಪ್ರಕಾಶ್ ಅವರು ಶುಕ್ರವಾರ ಮನೆಯಿಂದ ಹೊರಟವರು ಹಿಂತಿರುಗಲಿಲ್ಲ. ಅವರನ್ನು ಸಂಪರ್ಕಿಸುವ ಪ್ರಯತ್ನವು ವಿಫಲವಾದವು. ಕುಟುಂಬದವರು, ಆಪ್ತರು ಆತಂಕಕ್ಕೀಡಾದರು. ಇಡೀ ರಾತ್ರಿ ಹುಡುಕಾಟ ನಡೆಯಿತು.
♦ ಪಟಗುಪ್ಪ ಸೇತುವೆ ಮೇಲೆ ಕಾರು
ಜನವರಿ 22ರಂದು ಬೆಳಗ್ಗೆ ಪಟಗುಪ್ಪ ಸೇತುವೆ ಮೇಲೆ ಕಾರು ನಿಂತಿತ್ತು. ಪರಿಶೀಲನೆ ಬಳಿಕ ಅದು ಪ್ರಕಾಶ್ ಟ್ರಾವೆಲ್ಸ್ ಮಾಲೀಕ ಪ್ರಕಾಶ್ ಅವರದ್ದು ಎಂದು ಗೊತ್ತಾಗಿದೆ. ಕಾರಿನಲ್ಲೇ ಮೊಬೈಲ್ ಫೋನ್ ಇತ್ತು. ಸ್ವಲ್ಪ ದೂರದಲ್ಲಿ ಅವರ ಚಪ್ಪಲಿಗಳು ಸಿಕ್ಕಿದ್ದವು.
♦ ಶೋಧ ಕಾರ್ಯ ಆರಂಭ
ಮಾಹಿತಿ ತಿಳಿಯುತ್ತಿದ್ದಂತೆ ಹೊಸನಗರ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಪ್ರಕಾಶ್ ಅವರ ಶೋಧ ಕಾರ್ಯ ಆರಂಭಿಸಿದರು. ಕುಟುಂಬದವರು, ಆಪ್ತರು, ಟ್ರಾವೆಲ್ಸ್ ಸಂಸ್ಥೆಯ ನೌಕರರು ಪಟಗುಪ್ಪ ಸೇತುವೆ ಬಳಿ ತೆರಳಿದರು. ಶನಿವಾರ ಇಡೀ ದಿನ ಶೋಧ ಕಾರ್ಯ ನಡೆಸಿದರೂ ಪ್ರಕಾಶ್ ಅವರ ಸುಳಿವು ಸಿಗಲಿಲ್ಲ.
♦ ಎರಡನೇ ದಿನದ ಕಾರ್ಯಾಚರಣೆ
ಎರಡನೆ ದಿನವೂ ಶೋಧ ಕಾರ್ಯಾಚರಣೆ ನಡೆಸಲಾಯಿತು. ಅಗ್ನಿಶಾಮಕ ಸಿಬ್ಬಂದಿ ಪಟಗುಪ್ಪ ಸೇತುವೆ ಸುತ್ತಮುತ್ತಲು ಸಂಪೂರ್ಣವಾಗಿ ಶೋಧ ಮಾಡಿದರು. ಸ್ಥಳೀಯ ಮುಳುಗು ತಜ್ಞರು ಕಾರ್ಯಾಚರಣೆಗೆ ನೆರವಾದರು. ಇಡೀ ದಿನ ಕಾರ್ಯಾಚರಣೆ ನಡೆಸಿದರೂ ಸುಳಿವು ಸಿಗಲಿಲ್ಲ.
♦ ಶಾಸಕ ಹಾಲಪ್ಪ ಭೇಟಿ
ಪ್ರಕಾಶ್ ಅವರ ಶೋಧ ಕಾರ್ಯಾಚರಣೆ ಕುರಿತು ಪರಿಶೀಲನೆಗೆ ಶಾಸಕ ಹರತಾಳು ಹಾಲಪ್ಪ ಅವರು ಪಟಗುಪ್ಪ ಸೇತುವೆ ಬಳಿ ಭೇಟಿ ನೀಡಿದರು. ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಮತ್ತು ಸ್ಥಳೀಯರಿಂದ ಮಾಹಿತಿ ಪಡೆದರು. ಅಲ್ಲದೆ NDRF ತಂಡ ಕರೆಯಿಸಿ ಶೋಧ ಕಾರ್ಯಾಚರಣೆ ನಡೆಸಬೇಕು ಎಂದು ಜಿಲ್ಲಾಧಿಕಾರಿ ಅವರಿಗೆ ಸೂಚಿಸಿದರು.
♦ ಠಾಣೆ ಎದುರು ಸಿಬ್ಬಂದಿ ಪ್ರತಿಭಟನೆ
ಹೊಸನಗರ ಪೊಲೀಸ್ ಠಾಣೆ ಎದುರು ಪ್ರಕಾಶ್ ಟ್ರಾವೆಲ್ಸ್ ಸಿಬ್ಬಂದಿ ದಿಢೀರ್ ಪ್ರತಿಭಟನೆ ನಡೆಸಿದರು. ತಮ್ಮ ಸಂಸ್ಥೆ ಮಾಲೀಕರು ಸಾಲಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುವಂತವರಲ್ಲ. ಅವರ ನಾಪತ್ತೆ ಪ್ರಕರಣದ ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
♦ ಗೃಹ ಸಚಿವರಿಂದ ಫೋನ್ ಕರೆ
ಇನ್ನು, ಪ್ರಕಾಶ್ ಟ್ರಾವೆಲ್ಸ್ ಮಾಲೀಕ ಪ್ರಕಾಶ್ ಅವರ ಶೋಧ ಕಾರ್ಯದ ಕುರಿತು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು, ಜಿಲ್ಲಾಧಿಕಾರಿ, ಜಿಲ್ಲಾ ರಕ್ಷಣಾಧಿಕಾರಿ ಅವರೊಂದಿಗೆ ಫೋನ್ ಮೂಲಕ ಮಾಹಿತಿ ಪಡೆದರು. ‘ಮುಳುಗು ತಜ್ಞರು, ಅಗತ್ಯ ಸಿಬ್ಬಂದಿ ಬಳಕೆ ಮಾಡಿಕೊಳ್ಳುವಂತೆ’ ಸೂಚನೆ ನೀಡಿದರು.
♦ ಮೂರನೆ ದಿನ ಕಾರ್ಯಾಚರಣೆ
ಸೋಮವಾರ ಬೆಳಗ್ಗೆ ಕಾರ್ಯಾಚರಣೆ ಆರಂಭವಾಗುತ್ತಿದ್ದಂತೆ ಪ್ರಕಾಶ್ ಅವರ ಮೃತದೇಹ ಪತ್ತೆಯಾಗಿದೆ. ಪಟಗುಪ್ಪ ಸೇತುವೆಯಿಂದ ಸ್ವಲ್ಪ ದೂರದಲ್ಲಿ ಮೃತದೇಹ ಪತ್ತೆಯಾಗಿದೆ. ವಿಚಾರ ತಿಳಿಯುತ್ತಿದ್ದಂತೆ ಕುಟುಂಬದವರು, ಆಪ್ತರು, ಪ್ರಕಾಶ್ ಟ್ರಾವೆಲ್ಸ್ ಸಿಬ್ಬಂದಿ ಆಕ್ರಂದನ ಮುಗಿಲು ಮುಟ್ಟಿದೆ.
ಇದನ್ನೂ ಓದಿ | BREAKING NEWS | ಪ್ರಕಾಶ್ ಟ್ರಾವೆಲ್ಸ್ ಮಾಲೀಕ ಪ್ರಕಾಶ್ ಶವವಾಗಿ ಪತ್ತೆ
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200