ಶಿವಮೊಗ್ಗ LIVE
ರಿಪ್ಪನ್‌ಪೇಟೆ: ಮಾರಿಕಾಂಬ ಜಾತ್ರೆಗಳು (Marikamba Jatre) ಎರಡು ವರ್ಷಕ್ಕೊ, ಮೂರು ವರ್ಷಕ್ಕೊ ಒಮ್ಮೆ ನಡೆಯುವುದು ವಾಡಿಕೆ. ಆದರೆ ಈ ಊರಿನಲ್ಲಿ ವರ್ಷಕ್ಕೆ ಎರಡು ಬಾರಿ ಜಾತ್ರೆ ನಡೆಯಲಿದೆ. ಸುಮಾರು 800 ವರ್ಷದಿಂದ ಇಲ್ಲಿ ಇದೇ ಪದ್ಧತಿ ಇದೆ. ಅಷ್ಟೆ ಅಲ್ಲ, ಇಲ್ಲಿನ ಮಾರಿಕಾಂಬ ಜಾತ್ರೆ ಹಲವು ವಿಶೇಷತೆಗಳನ್ನು ಒಳಗೊಂಡಿದೆ, ರಾಜ್ಯದ ವಿವಿಧೆಡೆ ಜಾತ್ರೆಗಿಂತಲು ವಿಭಿನ್ನವಾಗಿದೆ.
ಈ ವರ್ಷದ ಮೊದಲ ಜಾತ್ರೆ
ಹೊಸನಗರ ತಾಲೂಕು ರಿಪ್ಪನ್‌ಪೇಟೆ ಸಮೀಪದ ಕೆಂಚನಾಲ ಗ್ರಾಮದಲ್ಲಿ ಜನವರಿ 14ರಂದು ಶ್ರೀ ಮಾರಿಕಾಂಬ ದೇವಿ ಜಾತ್ರೆ ನಡೆಯಲಿದೆ. ಇದು ಈ ವರ್ಷದ ಮೊದಲ ಜಾತ್ರೆ. ಬೆಳಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆವರೆಗೆ ಜಾತ್ರೆ ನಡೆಯಲಿದೆ. ಇಲ್ಲಿ ಭಕ್ತರು ಬೇಡಿಕೊಂಡಿದ್ದೆಲ್ಲ ಈಡೇರಲಿದೆ ಎಂಬ ನಂಬಿಕೆ ಇದೆ. ಹಾಗಾಗಿ ಒಂದೇ ದಿನ ಜಾತ್ರೆಯಲ್ಲಿ ಸಾವಿರಾರು ಜನರು ಪಾಲ್ಗೊಳ್ಳಲಿದ್ದಾರೆ.
ಜಾತ್ರೆ ವಿಶೇಷತೆಗಳೇನು? ಇಲ್ಲಿದೆ ಪಾಯಿಂಟ್ಸ್

ಕೆಂಚನಾಲದ ಶ್ರೀ ಮಾರಿಕಾಂಬ ದೇವಸ್ಥಾನವು ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಟ್ಟಿದೆ. ಈ ದೇವಿಯ ಜಾತ್ರೆಯ ವಿಶೇಷತೆ ಕುರಿತು ದೇವಸ್ಥಾನದ ವ್ಯವಸ್ಥಾಪನ ಸಮಿತಿ ಕಾರ್ಯದರ್ಶಿ ಪರಮೇಶ್ವರಪ್ಪ ಅವರು ಶಿವಮೊಗ್ಗ ಲೈವ್‌ಗೆ ಮಾಹಿತಿಗೆ ನೀಡಿದರು. ಅದರ 10 ಪ್ರಮುಖಾಂಶ ಇಲ್ಲಿದೆ.
1 ಎರಡು ಬಾರಿ ಜಾತ್ರೆ: ಸಾಮಾನ್ಯ ಮಾರಿ ಹಬ್ಬಗಳು 2 ರಿಂದ 3 ವರ್ಷಕ್ಕೊಮ್ಮೆ ನಡೆಯಲಿದೆ. ಆದರೆ ಇಲ್ಲಿ ಬೇಸಿಗೆ ಮತ್ತು ಮಳೆಗಾಲದಲ್ಲಿ ಎರಡು ಬಾರಿ ಜಾತ್ರೆ ನಡೆಯುತ್ತದೆ.
2ಅನಾಹುತವಾಗಿತ್ತು: ಸುಮಾರು 800 ವರ್ಷದಿಂದ ಇಲ್ಲಿ ಈ ಪದ್ಧತಿ ಇದೆ. ಹಿಂದೆ ವರ್ಷಕ್ಕೆ ಒಂದು ಬಾರಿ ಮಾತ್ರ ಜಾತ್ರೆ ಮಾಡಲು ಪ್ರಯತ್ನಿಸಿದಾಗ ಅನಾಹುತಗಳಾಗಿದ್ದವು. ಅಂದಿನಿಂದ ವರ್ಷಕ್ಕೆ ಎರಡು ಬಾರಿ ಜಾತ್ರೆ ನಡೆಸುವ ಪದ್ಧತಿ ಮುಂದುವರಿದಿದೆ.

3ಜಾತ್ರೆಯ ಸಮಯವೇನು?: ಬೇಸಿಗೆಯಲ್ಲಿ ಶೂನ್ಯ ಮಾಸದ ಹುಣ್ಣಿಮೆಯ ನಂತರ ಮತ್ತು ಅಮಾವಾಸ್ಯೆಯ ಒಳಗೆ ಜಾತ್ರೆ ನಡೆಯಲಿದೆ. ಮಳೆಗಾಲದಲ್ಲಿ ಆಷಾಢ ಮಾಸದ ಹುಣ್ಣಿಮೆ ಕಳೆದು ಅಮಾವಾಸ್ಯೆಯೊಳಗೆ ನಡೆಸಲಾಗುತ್ತದೆ.
4ಮೂರ್ತಿ ತಯಾರಿ ಹೇಗೆ?: ಮೊದಲು ಒಂದೇ ರಾತ್ರಿಯಲ್ಲಿ ಮರದ ಮೂರ್ತಿಯನ್ನು ಕೆತ್ತಿ ತರಲಾಗುತ್ತಿತ್ತು. ಈಗ ಮರದ ಕೊರತೆಯಿಂದಾಗಿ ಒಂದು ಶಾಶ್ವತ ಮೂರ್ತಿ ಇಟ್ಟುಕೊಂಡು, ಅದರ ಜೊತೆಗೆ ಪ್ರತಿ ವರ್ಷ ಒಂದು ಸಣ್ಣ ಮರದ ಮೂರ್ತಿಯನ್ನು ಕೆತ್ತಿಸಿಕೊಂಡು ಜಾತ್ರೆ ನಡೆಸಲಾಗುತ್ತದೆ.
ಇದನ್ನೂ ಓದಿ » ಶಬರಿಮಲೈ ಸಮೀಪ ಶಿವಮೊಗ್ಗ, ಭದ್ರಾವತಿ ಮಾಲಾಧಾರಿಗಳಿಂದ ದಿಢೀರ್ ಪ್ರತಿಭಟನೆ, ಕಾರಣವೇನು?
5ಆಭರಣದಿಂದ ಅಲಂಕಾರ: ಕೆಂಚನಾಲದ ಮಾರಮ್ಮನಿಗೆ ಬಣ್ಣ ಹಚ್ಚುವುದಿಲ್ಲ. ಬದಲಾಗಿ ಆಭರಣಗಳಿಂದ ದೇವಿಯ ಅಲಂಕಾರ ಮಾಡಲಾಗುತ್ತದೆ. ಆದ್ದರಿಂದ ಈ ಮಾರಿಕಾಂಬೆಯನ್ನು ಶೃಂಗಾರ ಮಾರಮ್ಮ ಎನ್ನಲಾಗುತ್ತದೆ.

6ಪೂಜಾ ವಿಧಿವಿಧಾನ: ಪೂಜಾರಪ್ಪ ಅವರ ಮನೆಯಿಂದ ಬೆಳಗಿನ ಜಾವ ಪೂಜೆ ನೆರವೇರಿಸಿ ದೇವಿಯ ಮೂರ್ತಿಯನ್ನು ಗದ್ದುಗೆಯ ಸ್ಥಳಕ್ಕೆ ತರಲಾಗುತ್ತದೆ. ದೇವಸ್ಥಾನದ ಗರ್ಭಗುಡಿಯ ಹೊರಗಿನ ಗದ್ದುಗೆಯ ಮೇಲೆ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತದೆ.
7ಕಾಯಿ ಹರಕೆ: ಜಾತ್ರೆ ಸಂದರ್ಭಭಕ್ತರು ತಮ್ಮ ಮನೆಯಲ್ಲಿರುವ ದನಕರುಗಳ ಸಂಖ್ಯೆಗೆ ಅನುಗುಣವಾಗಿ ತೆಂಗಿನಕಾಯಿ ಹರಕೆ ಒಪ್ಪಿಸುತ್ತಾರೆ. ಮನೆಯಲ್ಲಿ 10 ದನಗಳಿದ್ದರೆ 10 ಕಾಯಿ ಅರ್ಪಿಸುವ ಪದ್ಧತಿ ಇದೆ. ಇನ್ನು, ದೇವಸ್ಥಾನದ ಮುಂದೆ ಕೋಳಿಗಳನ್ನು ಕೊಯ್ಯುವ ಪದ್ಧತಿ ಇಲ್ಲ. ಭಕ್ತರು ಹರಕೆಯಾಗಿ ತಂದ ಜೀವಂತ ಕೋಳಿಗಳನ್ನು ದೇವಸ್ಥಾನಕ್ಕೆ ನೀಡುತ್ತಾರೆ. ನಂತರ ಅವುಗಳನ್ನು ಹರಾಜು ಹಾಕಲಾಗುತ್ತದೆ.
8ಸಂಜೆ ಮೆರವಣಿಗೆ, ಹೇಗಿರುತ್ತೆ?: ಸಂಜೆ ದೇವಿಯ ಮೂರ್ತಿಯ ಮೆರವಣಿಗೆ ನಡೆಸಲಾಗುತ್ತದೆ. 5 ಅಡಿಯ ಮರದ ಮೂರ್ತಿಯನ್ನು ಪೂಜಾರಪ್ಪ ತಲೆಯ ಮೇಲೆ ಹೊತ್ತು ಸಾಗುತ್ತಾರೆ. ಹೊಸೂರು -ಅರಸಾಳು ಗಡಿವರೆಗೆ ಮೆರವಣಿಗೆಯಲ್ಲಿ ಕೊಂಡೊಯ್ದು, ಅಲ್ಲಿ ಮೂರ್ತಿಯನ್ನು ಬಿಟ್ಟು ಬರಲಾಗುತ್ತದೆ. ಈ ಸಂದರ್ಭ ನಿರ್ದಿಷ್ಟ ಸಮುದಾಯದವರು ಮಾತ್ರ ದೇವಿಗೆ ಅಲ್ಲಲ್ಲಿ ಹೆಗಲು ಕೊಡಲಬಹದು. ಇದರ ಹೊರತು ಬೇರಾರು ದೇವಿಯನ್ನು ಮುಟ್ಟುವಂತಿಲ್ಲ.

9ಬಾಗಿಲು ಮುಚ್ಚುವ ಪದ್ಧತಿ: ಪ್ರತಿ ಬಾರಿ ಜಾತ್ರೆ ಮುಗಿದ ರಾತ್ರಿ 8.30ಕ್ಕೆ ಗರ್ಭಗುಡಿಯ ಬಾಗಿಲನ್ನು ಸೀಲ್ ಮಾಡಲಾಗುತ್ತದೆ. ಜಾತ್ರೆಯ ನಂತರದ ಶುಕ್ರವಾರದವರೆಗೆ ಬಾಗಿಲು ತೆಗೆಯುವುದಿಲ್ಲ.
10ಸಾವಿರ ಸಾವಿರ ಜನ: ಒಂದು ದಿನದ ಈ ಜಾತ್ರೆಗೆ ಸುತ್ತಮುತ್ತಲಿನ ಹಳ್ಳಿಗಳಿಂದ ಸುಮಾರು 18 ರಿಂದ 22 ಸಾವಿರ ಭಕ್ತರು ಆಗಮಿಸುತ್ತಾರೆ.
LATEST NEWS
- ತೀರ್ಥಹಳ್ಳಿ ಅಪಘಾತ, ಸಾವಿನ ಸಂಖ್ಯೆ ಹೆಚ್ಚಳ, ಆಗಿದ್ದೇನು? ಇಲ್ಲಿದೆ ಫುಲ್ ಡಿಟೇಲ್ಸ್

- ಮತ್ತೆ ಏರಿತು ಅಡಿಕೆ ರೇಟ್, ಒಂದು ಲಕ್ಷದ ಸಹಿಕ್ಕೆ ಧಾರಣೆ | 14 ಜನವರಿ 2026 | ಇವತ್ತಿನ ಅಡಿಕ ಧಾರಣೆ

- ಶಿವಮೊಗ್ಗ ಕೇಂದ್ರ ಕಾರಾಗೃಹದ ಕೈದಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಸಾವು, ಆಗಿದ್ದೇನು?

- ಶಾಲೆಯ ಕೊಠಡಿಯಲ್ಲೇ ನೇಣು ಬಿಗಿದುಕೊಂಡ ಶಿಕ್ಷಕ

- ಶಿವಮೊಗ್ಗದ ಈ ರಸ್ತೆಯಲ್ಲಿ ಜಾರಿ ಬಿದ್ದ ಸಾಲು ಸಾಲು ಬೈಕುಗಳು, ಆಗಿದ್ದೇನು?

About The Editor
ನಿತಿನ್ ಆರ್.ಕೈದೊಟ್ಲು





