SHIVAMOGGA LIVE NEWS | 6 ಮಾರ್ಚ್ 2022
ಕೆರೆ ಒಂದನ್ನು ಒತ್ತುವರಿ ಮಾಡಿ ಆ ಜಾಗದಲ್ಲಿ ಬೆಳೆ ಬೆಳೆಯುತ್ತಿರುವ ಆರೋಪದ ಹಿನ್ನೆಲೆ, ಇವತ್ತು ಪರಿಸರ ಪ್ರಿಯರ ತಂಡ ಪರಿಶೀಲನೆ ನಡೆಸಿತು. ಒತ್ತುವರಿ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಜಿಲ್ಲಾಡಳಿತ ತುರ್ತು ಕ್ರಮ ಕೈಗೊಂಡು ನೂರಾರು ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಪರಿಸರ ಪ್ರಿಯರು ಆಗ್ರಹಿಸಿದ್ದಾರೆ.
ಹೊಸನಗರ ತಾಲೂಕು ಅರಸಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಮ್ಮಡಿಕೊಪ್ಪ ಗ್ರಾಮದ ಗುಡ್ಡದ ತೋಟ ಎಂಬಲ್ಲಿ ಕೆರೆ ಒತ್ತುವರಿ ಆಗಿರುವ ಆರೋಪವಿದೆ. ಈ ಹಿನ್ನೆಲೆಯಲ್ಲಿ ಇವತ್ತು ಪರಿಸರ ಹೋರಾಟಗಾರರಾದ ಏಸು ಪ್ರಕಾಶ್, ಅಕಿಲೇಶ್ ಚಿಪ್ಳಿ, ಪ್ರೊ. ಬಿ.ಎಂ.ಕುಮಾರಸ್ವಾಮಿ, ಬಾಲಕೃಷ್ಣ ನಾಯ್ಡು ಅವರ ತಂಡ ಪರಿಶೀಲನೆ ನಡೆಸಿತು.
‘ಒತ್ತುವರಿ ಮಾಡಿ ಬೆಳೆ ಬೆಳದಿದ್ದಾರೆ’
ಸುಮಾರು ಎರಡೂವರೆ ಎಕರೆಯಷ್ಟು ವಿಸ್ತೀರ್ಣ ಹೊಂದಿದ್ದ ಗುಡ್ಡದ ತೋಟ ಕೆರೆಯ ಒಂದಷ್ಟು ಭಾಗ ಒತ್ತುವರಿ ಮಾಡಲಾಗಿದೆ. ಇಲ್ಲಿ ಭತ್ತ, ಶುಂಠಿ ಸೇರಿ ವಿವಿಧ ಬೆಳೆ ಬೆಳೆಯಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
‘ನೂರಾರು ಎಕರೆ ಪ್ರದೇಶಕ್ಕೆ ಅನುಕೂಲ ಮಾಡಿಕೊಡಲು ಕೆರೆ ನಿರ್ಮಿಸಲಾಗಿತ್ತು. ಇಲ್ಲಿರುವವರೆಲ್ಲ ಮುಳುಗಡೆ ಸಂತ್ರಸ್ತರು. ಈಗ ನಾಲ್ಕೈದು ವರ್ಷದಿಂದ ಒಂದಿಬ್ಬರು ಕೆರೆಯನ್ನು ಒತ್ತುವರಿ ಮಾಡಿಕೊಂಡು ಬೆಳೆ ಬೆಳೆಯುತ್ತಿದ್ದಾರೆ. ಕೆರೆ ಜಾಗದಲ್ಲಿ ನೀರು ನಿಲ್ಲಲು ಬಿಡುತ್ತಿಲ್ಲ. ಆದ್ದರಿಂದ ಕೆರೆ ಕೆಳಗಿನ ಜಮೀನಿಗೆ ನೀರು ಪೂರೈಕೆಯಾಗುತ್ತಿಲ್ಲ. ವನ್ಯಜೀವಿಗಳು ಕೂಡ ನೀರಿಗಾಗಿ ಈ ಕೆರೆಗೆ ಬರುತ್ತಿದ್ದವು. ಈಗ ಅವುಗಳಿಗೂ ಸಮಸ್ಯೆಯಾಗಿದೆ’ ಎಂದು ಗ್ರಾಮಸ್ಥರು ಆರೋಪಿಸಿದರು.
‘ಸರ್ಕಾರದಿಂದ ರಿಪೇರಿಗೆ ಹಣ’
ಪರಿಶೀಲನೆ ನಡೆಸಿದ ಪರಿಸರ ಹೋರಾಟಗಾರ ಅಕಿಲೇಶ್ ಚಿಪ್ಳಿ ಮಾತನಾಡಿ, ‘ಇಲ್ಲಿನ ಸರ್ವೆ ನಂಬರ್ 12ರಲ್ಲಿ ಕೆರೆ ಇದೆ. ಸರ್ಕಾರದ ನಕ್ಷೆಯಲ್ಲಿ ಕೆರೆ ಎಂದು ತೋರಿಸಿಲ್ಲ. ಇದೆ ಕಾರಣಕ್ಕೆ ಕೆಲವು ಖಾಸಗಿ ವ್ಯಕ್ತಿಗಳು ಕೆರೆ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಆದರೆ 1964ರಲ್ಲಿ ಕೆರೆ ರಿಪೇರಿಗೆ ಸರ್ಕಾರದಿಂದ ಹಣ ಬಿಡುಗಡೆಯಾಗಿದೆ. ಟ್ಯೂಬ್ ಅಳವಡಿಸಿ, ಕೋಡಿ ರಿಪೇರಿ ಮಾಡಿಸಲಾಗಿದೆ. ಸುಮಾರ 150 ಕುಟುಂಬಗಳು ಈ ಕೆರೆ ಮೇಲೆ ಅವಲಂಬಿತವಾಗಿವೆ. ವನ್ಯಜೀವಿಗಳು ಕೂಡ ಕೆರೆಗೆ ಬರುತ್ತವೆ. ಎಲ್ಲರಿಗೂ ತೊಂದರೆಯಾಗಿದೆ. ಈ ಕುರಿತು ಜಿಲ್ಲಾಧಿಕಾರಿ ಅವರಿಗೂ ತಿಳಿಸಿದ್ದೇನೆ’ ಎಂದರು.
‘ನಕ್ಷೆಯಲ್ಲಿಲ್ಲ ಅನ್ನುವುದೆ ಆಧಾರವಲ್ಲ’
ಪ್ರೊ. ಬಿ.ಎಂ.ಕುಮಾರಸ್ವಾಮಿ ಅವರು ಮಾತನಾಡಿ, ‘ಇಲ್ಲಿ ಕೆರೆ ಇತ್ತು ಅನ್ನುವುದಕ್ಕೆ ಸಾಕಷ್ಟು ಆಧಾರವಿದೆ. ಟೂಬಿನ ಕಟ್ಟೆ ಇದೆ. ದೊಡ್ಡ ಏರಿ ಇದೆ. ಜಿಲ್ಲಾಧಿಕಾರಿಗಳು, ತಹಶೀಲ್ದಾರ್ ಅವರು ಇದನ್ನು ಪರಿಶೀಲಿಸಬೇಕು. ನಕ್ಷೆಯಲ್ಲಿ ಕೆರೆ ಇಲ್ಲ ಅನ್ನುವ ಕಾರಣಕ್ಕೆ ಇದನ್ನು ಒತ್ತುವರಿ ಮಾಡಿಕೊಳ್ಳಬೇಕಿಲ್ಲ. ಅಧಿಕಾರಿಗಳು ಪರಿಶೀಲನೆ ನಡೆಸಿ, ನಕ್ಷೆಗೆ ಸೇರಿಸಬೇಕು’ ಎಂದು ಆಗ್ರಹಿಸಿದರು.
‘ಜಂಟಿ ಸರ್ವೆ ಮಾಡಬೇಕು’
ಶಿವಮೊಗ್ಗದ ಬಾಲಕೃಷ್ಣ ನಾಯ್ಡು ಮಾತನಾಡಿ, ‘ಇಲ್ಲಿ ಕೆರೆ ಇರುವುದಕ್ಕೆ ಎಲ್ಲಾ ಕುರುಹುಗಳಿವೆ. ಆದ್ದರಿಂದ ಕೆರೆ ಒತ್ತುವರಿಯನ್ನು ತೆರವು ಮಾಡಬೇಕಿದೆ. ಅರಣ್ಯ ಇಲಾಖೆ, ಕಂದಾಯ ಇಲಾಖೆ ಅಧಿಕಾರಿಗಳು ಜಂಟಿ ಸರ್ವೆ ನಡೆಸಬೇಕು’ ಎಂದು ಒತ್ತಾಯಿಸಿದರು.
ಪರಿಶೀಲನೆ ವೇಳೆ ತಮ್ಮಡಿಕೊಪ್ಪ ಗ್ರಾಮಸ್ಥರು ಉಪಸ್ಥಿತರಿದ್ದರು.
ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ
ಈ ಮೇಲ್ – [email protected]
WhatsApp Number – 7411700200