ಶಿವಮೊಗ್ಗ ಲೈವ್.ಕಾಂ | SAGARA NEWS | 17 ಡಿಸೆಂಬರ್ 2021
ಶರಾವತಿ ಹಿನ್ನೀರು ಭಾಗದ ದ್ವೀಪದ ಜನರ ಆರೋಗ್ಯದ ವಿಚಾರದಲ್ಲಿ ಸರ್ಕಾರ ದಿವ್ಯ ನಿರ್ಲಕ್ಷ್ಯ ವಹಿಸಿದೆ. ಅದರ ಪರಿಣಾಮ ಕಳೆದ 24 ಗಂಟೆಯಲ್ಲಿ ಇಬ್ಬರು ಜೀವ ಕಳೆದುಕೊಂಡಿದ್ದಾರೆ. ಆಂಬುಲೆನ್ಸ್ ಸೇವೆ ಇಲ್ಲದಿರುವುದಕ್ಕೆ ಇಬ್ಬರು ಬಲಿಯಾಗಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ. ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200
ಸಿಗಂದೂರು ಸಮೀಪದ ತುಮರಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವಿದೆ. ಸರ್ಕಾರ ಇದಕ್ಕೆ 108 ಆಂಬುಲೆನ್ಸ್ ಒದಗಿಸಿತ್ತು. ಅದನ್ನು ‘ಸಿಗಂದೂರು 108 ಆಂಬುಲೆನ್ಸ್’ ಎಂದೇ ಆರೋಗ್ಯ ಇಲಾಖೆ ಸಿಬ್ಬಂದಿ ಬಣ್ಣಿಸುತ್ತಿದ್ದರು. ಆದರೆ, ಜನರ ಆರೋಗ್ಯ ಕಾಪಾಡಲು ನಿಯೋಜಿಸಿದ್ದ ಆ ಆಂಬುಲೆನ್ಸ್’ನ ಆರೋಗ್ಯವೇ ಇತ್ತೀಚೆಗೆ ಸಂಪೂರ್ಣ ಹದಗೆಟ್ಟು ಹೋಗಿತ್ತು. ಯಾವಾಗ ಎಲ್ಲಿ ಕೈ ಕೊಡುತ್ತದೋ ಅನ್ನುವ ಆತಂಕ ಹಿನ್ನೀರಿನ ಜನರನ್ನು ಸದಾ ಕಾಡುತಿತ್ತು.
ದುಸ್ಥಿತಿಯ ನಡುವೆಯೂ ‘ಸಿಗಂದೂರು 108’ ಇದ್ದಿದ್ದರಿಂದ ಜನರು ಸ್ವಲ್ಪ ನೆಮ್ಮದಿಯಿಂದ ಇದ್ದರು. ಆದರೆ ಕಳೆದ 25 ದಿನದಿಂದ ಈ ಆಂಬುಲೆನ್ಸ್ ಕಣ್ಮರೆಯಾಗಿದೆ. ಪರ್ಯಾಯ ವ್ಯವಸ್ಥೆ ಮಾಡಬೇಕಿದ್ದ ಅಧಿಕಾರಿಗಳು ತಲೆ ಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಅದರ ಪರಿಣಾಮ ಎರಡು ಸಾವುಗಳು.
ಘಟನೆ 1 – ಶರಾವತಿ ಹಿನ್ನೀರು, ಸಿಗಂದೂರು ಲಾಂಚ್ ಪ್ರವಾಸಿಗರಿಗಷ್ಟೇ ಸ್ವರ್ಗ, ಕಳೆದ ರಾತ್ರಿಯ ಘಟನೆ ತುಮರಿ ಜನರಲ್ಲಿ ಹೆಚ್ಚಿಸಿದೆ ಆತಂಕ
ಘಟನೆ 2 – ‘ಸಿಗಂದೂರು 108’ ಆಂಬುಲೆನ್ಸ್ ಸಿಗದೆ ಮತ್ತೊಂದು ಸಾವು, 24 ಗಂಟೆಯಲ್ಲಿ ಹಾರಿ ಹೋಯ್ತು ಇಬ್ಬರ ಪ್ರಾಣ ಪಕ್ಷಿ
ತುಮರಿ ಮತ್ತು ಸುತ್ತಮುತ್ತಲ ಸುಮಾರು 20 ಸಾವಿರ ಜನರಿಗೆ ‘ಸಿಗಂದೂರು 108 ಆಂಬುಲೆನ್ಸ್’ ಸೇವೆ ಒದಗಿಸುತ್ತಿತ್ತು. ಬೆಳಗಿನ ವೇಳೆ ಜನರು ಆಂಬುಲೆನ್ಸ್’ಗೆ ಕಾಯುವ ಪರಿಸ್ಥಿತಿ ಇರುವುದಿಲ್ಲ. ತುರ್ತು ಸಂದರ್ಭ, ಖಾಸಗಿ ವಾಹನಗಳ ವ್ಯವಸ್ಥೆ ಮಾಡಿಕೊಂಡು, ಲಾಂಚ್ ಹಿಡಿದು ಶರಾವತಿ ನದಿ ದಾಟಿ ಸಾಗರದ ಆಸ್ಪತ್ರೆಗೆ ತಲುಪುತ್ತಾರೆ. ಆದರೆ ರಾತ್ರಿ ಹೊತ್ತಲ್ಲಿ ಲಾಂಚ್ ಇರುವುದಿಲ್ಲ. ನೆಟ್ ವರ್ಕ್ ಸಿಗದ ಈ ಜಾಗದಲ್ಲಿ ವಾಹನಗಳನ್ನು ಹೊಂದಿಸುವುದು ಸುಲಭವೂ ಆಲ್ಲ. ಆಗಲೆ 108 ಆಂಬುಲೆನ್ಸ್’ನ ಅಗತ್ಯ ಕಾಣುತ್ತಿದ್ದದ್ದು.
‘ಸಿಂಗದೂರು 108 ಆಂಬುಲೆನ್ಸ್’ ಬಗ್ಗೆ ಹೊರಜಗತ್ತಿಗೆ ಗೊತ್ತಿರಬೇಕಾದ ಹಲವು ಸಂಗತಿಗಳಿವೆ. ಅವುಗಳ ಮಾಹಿತಿ ಇಲ್ಲಿದೆ
ಪಾಯಿಂಟ್ 1 – 2008ರಲ್ಲಿ ರಾಜ್ಯದಲ್ಲಿ 108 ಆಂಬುಲೆನ್ಸ್ ಸೇವೆ ಆರಂಭವಾಯಿತು. ಮೊದಲ ಹಂತದಲ್ಲಿ ಕಾರ್ಗಲ್’ಗೆ ಆಂಬುಲೆನ್ಸ್ ಕಲ್ಪಿಸಲಾಗಿತ್ತು. ಅದೆ ಆಂಬುಲೆನ್ಸ್ ತುಮರಿಗೆ ಬರಬೇಕಿತ್ತು. ಆದರೆ ಹಲವು ಭಾರಿ ತುರ್ತು ಸಂದರ್ಭ ಆ ಆಂಬುಲೆನ್ಸ್ ತುಮರಿಗೆ ಬರುವಷ್ಟರಲ್ಲಿ ಕಾಲ ಮೀರುತ್ತಿತ್ತು. ಇದೆ ಕಾರಣಕ್ಕೆ ತುಮರಿ ಭಾಗದ ಜನರು ಪ್ರತ್ಯೇಕ ಆಂಬುಲೆನ್ಸ್’ಗೆ ಹೋರಾಟ ನಡೆಸಿದರು. ಸಾಲು ಸಾಲು ಪ್ರತಿಭಟನೆ, ಮನವಿ, ಆಗ್ರಹಗಳ ಬಳಿಕ ಸರ್ಕಾರ ಆಂಬುಲೆನ್ಸ್ ನೀಡಲು ಒಪ್ಪಿಕೊಂಡಿತು. 2014ರ ನಂತರ ಇಲ್ಲಿಗೆ ಆಂಬುಲೆನ್ಸ್ ಒದಗಿಸಲಾಯಿತು.
ಪಾಯಿಂಟ್ 2 – ರಾತ್ರಿ ವೇಳೆ ತುರ್ತು ಎದುರಾದರೆ ತುಮರಿಯಿಂದ ಸಾಗರದ ಆಸ್ಪತ್ರೆಗೆ ಹೋಗುವುದಕ್ಕೆ ಕಷ್ಟವಾಗಲಿದೆ. ಹಾಗಾಗಿ ನೇರವಾಗಿ ಕುಂದಾಪುರ, ಮಂಗಳೂರು ಆಸ್ಪತ್ರೆಗೆ ತೆರಳಲು ಸರ್ಕಾರ ಅವಕಾಶ ಕಲ್ಪಿಸಿತ್ತು.
ಪಾಯಿಂಟ್ 3 – ಆಂಬುಲೆನ್ಸ್’ನಲ್ಲಿ ಇಬ್ಬರು ಚಾಲಕರು, ಇಬ್ಬರು ನರ್ಸಿಂಗ್ ಸಿಬ್ಬಂದಿ ಇರಬೇಕು. ಆದರೆ ‘ಸಿಗಂದೂರು 108 ಆಂಬುಲೆನ್ಸ್’ನಲ್ಲಿ ಬಹು ಸಮಯದಿಂದ ಒಬ್ಬರೆ ಚಾಲಕರಿದ್ದರು. ತುರ್ತು ಸಂದರ್ಭದಲ್ಲಿ ರೋಗಿಯ ಸಂಬಂಧಿಯೇ ಆರೈಕೆ ಮಾಡಿಕೊಂಡು, ಆಂಬುಲೆನ್ಸ್’ನಲ್ಲಿ ಕರೆದೊಯ್ಯಬೇಕಾಗುತ್ತಿತ್ತು. ಇದೆ ಕಾರಣಕ್ಕೆ ಸಾವು, ನೋವು ಹೆಚ್ಚಾಗಿದ್ದವು.
ಪಾಯಿಂಟ್ 4 – ಹೊರಗಿನಿಂದಷ್ಟೆ ಅದು ಆಂಬುಲೆನ್ಸ್. ಒಳಗೆ ಸ್ಟ್ರಚರ್ ಹೊರತುಪಡಿಸಿ ಯಾವುದೆ ಉಪಕರಣಗಳೂ ಇರಲಿಲ್ಲ. ಇದ್ದ ಒಂದೆರಡು ಉಪಕರಣಗಳು ಹಾಳಾಗಿದ್ದವು. ಇತ್ತೀಚೆಗೆ ಆಂಬುಲೆನ್ಸ್ ಟಯರ್ ಕೂಡ ಸವೆದು ಹೋಗಿತ್ತು. ಅದನ್ನು ಬದಲಾಯಿಸಿ ಎಂದು ಆರೋಗ್ಯ ಇಲಾಖೆಗೆ ಇಲ್ಲಿಯ ಜನರು ಹತ್ತಾರು ಭಾರಿ ಮನವಿ ಮಾಡಿ, ಪ್ರತಿಭಟನೆಯ ಎಚ್ಚರಿಕೆ ನೀಡಿದರು. ಆ ಬಳಿಕ ಟಯರ್ ಬದಲು ಮಾಡಲಾಯಿತು.
ಪಾಯಿಂಟ್ 5 – ಆಂಬುಲೆನ್ಸ್ ವಾಹನದ ಎಫ್.ಸಿ ಮಾಡಿಸಬೇಕು ಎಂದು ತುಮರಿಯಿಂದ ಹೊರಟಿದ್ದು, ಹಿಂತಿರುಗಿಲ್ಲ ಅನ್ನುತ್ತಾರೆ ಗ್ರಾಮ ಪಂಚಾಯಿತಿ ಮಾಜಿ ಅದ್ಯಕ್ಷ ಸತ್ಯನಾರಾಯಣ. ನಗರ ಪ್ರದೇಶದಲ್ಲಾದರೆ ಒಂದಲ್ಲ ಒಂದು ಆಂಬುಲೆನ್ಸ್ ವ್ಯವಸ್ಥೆ ಮಾಡಬಹುದು. ಆದರೆ ತುಮರಿಯಂತಹ ಸೂಕ್ಷ್ಮ ಪ್ರದೇಶದಲ್ಲಿ ಪರ್ಯಾಯವಾಗಿ ಮತ್ತೊಂದು ಆಂಬುಲೆನ್ಸ್ ವ್ಯವಸ್ಥೆ ಮಾಡಬೇಕಿತ್ತು. 25 ದಿನ ಕಳೆದರೂ ಪರ್ಯಾಯದ ಮಾತಿಲ್ಲ.
ಆರೋಗ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇನ್ನಾದರೂ ತುಮರಿ ಭಾಗಕ್ಕೆ ಸರ್ಕಾರ ಆಂಬುಲೆನ್ಸ್, ಅಗತ್ಯ ಸಿಬ್ಬಂದಿಯನ್ನು ನಿಯೋಜಿಸಬೇಕಿದೆ.