SHIVAMOGGA LIVE NEWS | MONKEY FEVER | 03 ಮೇ 2022
ಅರಳಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮತ್ತೆ ಮಂಗನ ಕಾಯಿಲೆ ಆತಂಕ ಶುರುವಾಗಿದೆ. KFD ಸೋಂಕಿಗೆ ತುತ್ತಾಗಿದ್ದ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ಬಲಿಯಾಗಿದ್ದಾರೆ.
ಅರಳಗೋಡು ಗ್ರಾಮ ಪಂಚಾಯಿತಿ ಸದಸ್ಯ ರಾಮಸ್ವಾಮಿ (55) ಮೃತರು. ಏಪ್ರಿಲ್ 24ರಂದು ರಾಮಸ್ವಾಮಿ ಅವರಿಗೆ ಜ್ವರ ಬಂದಿತ್ತು. ಈ ಹಿನ್ನೆಲೆ ಸಾಗರದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ರಾಮಸ್ವಾಮಿ ಅವರಿಗೆ ಕೆಎಫ್’ಡಿ (ಮಂಗನ ಕಾಯಿಲೆ) ಸೋಂಕು ತಗುಲಿರುವುದು ದೃಢವಾಗಿತ್ತು.
ಜ್ವರ ಹೆಚ್ಚಾದ ಹಿನ್ನೆಲೆ ಏಪ್ರಿಲ್ 26ರಂದು ಮಣಿಪಾಲದ ಕಸ್ತೂರಬಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆಗೆ ಸ್ಪಂದಿಸದೆ ರಾಮಸ್ವಾಮಿ ಅವರು ಇವತ್ತು ಮೃತರಾಗಿದ್ದಾರೆ.
ಅರಳಗೋಡು ಗ್ರಾಮದಲ್ಲಿ ಮತ್ತೆ ಆತಂಕ
ಅರಳಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಈ ಹಿಂದೆ ಮಂಗನ ಕಾಯಿಲೆ ತೀವ್ರ ಸ್ವರೂಪದಲ್ಲಿ ಬಾಧಿಸಿತ್ತು. 2019ರಲ್ಲಿ 28 ಜನರು ಮಂಗನ ಕಾಯಿಲೆಗೆ ಬಲಿಯಾಗಿದ್ದರು. ಇದು ಗ್ರಾಮಸ್ಥರಲ್ಲಿ ತೀವ್ರ ಆತಂಕ ಸೃಷ್ಟಿಸಿತ್ತು. ಗ್ರಾಮ ಪಂಚಾಯಿತಿ ಸದಸ್ಯ ರಾಮಸ್ವಾಮಿ ಅವರು ಸಾವನ್ನಪ್ಪಿರುವ ಹಿನ್ನೆಲೆ ಮತ್ತೆ ಭೀತಿ ಸೃಷ್ಟಿಯಾಗಿದೆ.
ಅಭಯಾರಣ್ಯ ವ್ಯಾಪ್ತಿಯಲ್ಲಿ ಕೂಂಬಿಂಗ್
ಅರಳಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯು ಅತ್ಯಂತ ಕುಗ್ರಾಮವಾಗಿದೆ. ಶರಾವತಿ ಕಣಿವೆ ಸಿಂಗಳೀಕ ಅಭಯಾರಣ್ಯ ವ್ಯಾಪ್ತಿಗೆ ಹೊಂದಿಕೊಂಡಿದೆ. ಇಲ್ಲಿನ ಹತ್ತಿಗೋಡು ಗ್ರಾಮದ ಬಳಿ ಕಳೆದ ಹತ್ತು ದಿನದ ಹಿಂದೆ ಮಂಗವೊಂದು ಸಾವನ್ನಪ್ಪಿತ್ತು. ವನ್ಯಜೀವಿ ವಿಭಾಗದ ಅಧಿಕಾರಿಗಳು ಸತ್ತ ಮಂಗದ ಕಳೆಬರವನ್ನು ಸುಟ್ಟು ಅಗತ್ಯ ಪ್ರತಿಬಂಧಕ ಸುರಕ್ಷಾ ಕ್ರಮ ಕೈಗೊಂಡಿತ್ತು. ಆದರೂ ಸೋಂಕು ಹರಡುತ್ತಿರುವುದರಿಂದ ಅರಣ್ಯ ವ್ಯಾಪ್ತಿಯಲ್ಲಿ ಕೂಂಬಿಂಗ್ ಕಾರ್ಯಾಚರಣೆ ನಡೆಸಲಾಗುತ್ತದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಶೇ.90ರಷ್ಟು ಮಂದಿಗೆ ಲಸಿಕೆ
ಕೆಎಫ್’ಡಿ ಸೋಂಕು ಹರಡದಂತೆ ತಡೆಯಲು ಲಸಿಕೆ ಅಭಿಯಾನ ನಡೆಸಲಾಗಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶೇ.90ರಷ್ಟು ಮಂದಿಗೆ ಮೊದಲನೆ ಮತ್ತು ಎರಡನೆ ಹಂತದ ಲಸಿಕೆ ನೀಡಲಾಗಿದೆ. ಶೇ.75ರಷ್ಟು ಜನರಿಗೆ ಬೂಸ್ಟರ್ ಡೋಸ್ ಕೂಡ ನೀಡಲಾಗಿದೆ ಎಂದು ಅರಳಗೋಡು ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ವೀರಭದ್ರಪ್ಪ ಗೌಡ ತಿಳಿಸಿದ್ದಾರೆ.
ಸರಿಯಾದ ವ್ಯವಸ್ಥೆಯಿಲ್ಲದ ಆರೋಪ
ಅರಳಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯು ಅತ್ಯಂತ ಕುಗ್ರಾಮವಾಗಿದೆ. ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸಲು ಆರೋಗ್ಯ ಇಲಾಖೆ ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ. ಇವರಿಗೆ ಸೂಕ್ತ ವಾಹನ ವ್ಯವಸ್ಥೆ ಮಾಡಿಲ್ಲ ಎಂಬ ಆರೋಪವಿದೆ. ಇನ್ನು, ಕಾಡಿಗೆ ಮೇಯಲು ಹೋಗಿ ಬರುವ ಜಾನುವಾರುಗಳಿಗೆ ಲೇಪನ ಮಾಡಲು ದ್ರಾವಣ ನೀಡಿಲ್ಲ. ಹಾಗಾಗಿ ಜಾನುವಾರುಗಳು ಕೆಎಫ್’ಡಿ ಸೋಂಕು ಹರಡುವ ಉಣ್ಣೆಗಳನ್ನು ಕಾಡಿನಿಂದ ಸುಲಭವಾಗಿ ಹೊತ್ತು ಬರುತ್ತಿವೆ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ.
ಏನಿದು ಮಂಗನ ಕಾಯಿಲೆ?
ಕ್ಯಾಸನೂರು ಫಾರೆಸ್ಟ್ ಡಿಸೀಸ್ (KFD) ಅಥವಾ ಮಂಗನ ಕಾಯಿಲೆ ಮಲೆನಾಡು ಭಾಗದಲ್ಲಿ ತೀವ್ರ ತಲ್ಲಣ ಸೃಷ್ಟಿಸಿದೆ. 1956ರಲ್ಲಿ ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಕ್ಯಾಸನೂರು ಗ್ರಾಮದಲ್ಲಿ ಕಾಯಿಲೆ ಪತ್ತೆಯಾಯಿತು. ಆದ್ದರಿಂದ ಈ ಕಾಯಿಲೆಗೆ ಕ್ಯಾಸನೂರ ಫಾರೆಸ್ಟ್ ಡಿಸೀಸ್ ಎಂದು ಕರೆಯಲಾಗುತ್ತದೆ. ಕಾಡಿನಲ್ಲಿರುವ ಸೋಂಕಿತ ಉಣ್ಣೆಗಳು ಕಚ್ಚುವುದರಿಂದ ಈ ಸೋಂಕು ಹರಡುತ್ತದೆ.
ಕಾಡಿನಲ್ಲಿ ಮಂಗಗಳು ಈ ಸೋಂಕಿಗೆ ಬೇಗ ತುತ್ತಾಗುತ್ತವೆ. ಮಂಗಗಳು ಸಾಯುವುದೆ ಈ ಸೋಂಕಿನ ಮುನ್ಸೂಚನೆಯಾಗಿದೆ. ಹಾಗಾಗಿ ಜನರು ಇದನ್ನು ಮಂಗನ ಕಾಯಿಲೆ ಎಂದು ಕರೆಯುತ್ತಾರೆ. ಇನ್ನು, ಈ ಸೋಂಕು ಮನುಷ್ಯರಿಂದ ಮನುಷ್ಯರಿಗೆ ಹರಡುವುದಿಲ್ಲ. ಉಣ್ಣೆಗಳು ಕಚ್ಚುವುದರಿಂದ ಮಾತ್ರ ಮನುಷ್ಯರಿಗೆ ಸೋಂಕು ತಗುಲುತ್ತವೆ.
ಹೇಗೆ ಬರುತ್ತೆ ಮಂಗನ ಕಾಯಿಲೆ?
ಕಾಡಿನಲ್ಲಿರುವ ಉಣ್ಣೆಗಳೊಂದಿಗೆ ಸಂಪರ್ಕಕ್ಕೆ ಬಂದರೆ ಮಂಗನ ಕಾಯಿಲೆ ಹರಡುತ್ತದೆ. ಮಲೆನಾಡು ಭಾಗದಲ್ಲಿ ಧರಗು ತರಲು, ಸೌದೆ ಆರಿಸುವುದು ಸೇರಿದಂತೆ ಕಾಡಿನೊಂದಿಗೆ ನಿಕಟ ಸಂಪರ್ಕ ಇರಲಿದೆ. ಅಲ್ಲದೆ ಜಾನುವಾರುಗಳನ್ನು ಮೇಯಲು ಕಾಡಿಗೆ ಬಿಡಲಾಗುತ್ತದೆ. ಇವುಗಳ ಮೈಗೆ ಅಂಟಿಕೊಂಡು ಉಣ್ಣೆಗಳು ಮನೆಗೆ ಬರುತ್ತವೆ. ಈ ಉಣ್ಣೆಗಳು ಕಚ್ಚುವುದರಿಂದ ಜಾನುವಾರುಗಳಿಗೆ ಯಾವುದೆ ಸಮಸ್ಯೆ ಆಗುವುದಿಲ್ಲ. ಆದರೆ ಮನುಷ್ಯರಿಗೆ ಕಚ್ಚಿದರೆ ಸೋಂಕು ಹರಡುತ್ತದೆ. ಇದೆ ಕಾರಣಕ್ಕೆ ಜನರಿಗೆ ಲಸಿಕೆ ನೀಡಲಾಗುತ್ತದೆ. ಕಾಡಿಗೆ ಹೋಗುವಾಗ ಮೈಗೆ ಡಿಎಂಪಿ ತೈಲ ಹಚ್ಚಿಕೊಂಡು ಹೋಗುವಂತೆ ವಿತರಣೆ ಮಾಡಲಾಗುತ್ತದೆ. ಜಾನುವಾರುಗಳಿಗೆ ಕೂಡ ದ್ರಾವಣ ಲೇಪನ ಮಾಡಿ ಕಾಡಿಗೆ ಬಿಡಲಾಗುತ್ತದೆ.
ಮಂಗನ ಕಾಯಿಲೆ ಲಕ್ಷಣಗಳೇನು?
ಕೆಎಫ್’ಡಿ ಸೋಂಕಿಗೆ ತುತ್ತಾದವರಲ್ಲಿ ಮೊದಲು ಜ್ವರ ಕಾಣಿಸುತ್ತದೆ. ಐದರಿಂದ ಏಳು ದಿನ ಜ್ವರ ಬಾಧಿಸುತ್ತದೆ. ತಲೆನೋವು, ಮೈಕೈ ನೋವು, ಕೀಲು ನೋವು, ನಿಶಕ್ತಿ, ವಾಂತಿ ಭೇದಿ, ಹೊಟ್ಟೆ ನೋವು, ಕಣ್ಣು ಕೆಂಪಾಗುವುದು ಕೂಡ ಈ ಸೋಂಕಿನ ಲಕ್ಷಣವಾಗಿದೆ.
ಮಂಗನ ಕಾಯಿಲೆಗೆ ಯಾವುದೆ ಔಷಧವಿಲ್ಲ. ಮುಂಜಾಗ್ರತೆ ವಹಿಸಿದರೆ ಈ ಸೋಂಕಿನಿಂದ ಸುರಕ್ಷಿತವಾಗಿ ಇರಬಹುದಾಗಿದೆ. ಸದ್ಯ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕು ಕನ್ನಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಈಗ ಸಾಗರ ತಾಲೂಕು ಅರಳಗೋಡು ಗ್ರಾಮದಲ್ಲಿ ಸೋಂಕು ಪತ್ತೆಯಾಗಿದ್ದು, ಒಬ್ಬರು ಸಾವನ್ನಪ್ಪಿದ್ದಾರೆ. ಇದು ಮಲೆನಾಡು ಭಾಗದಲ್ಲಿ ಮತ್ತೆ ಆತಂಕಕ್ಕೆ ಕಾರಣವಾಗಿದೆ.
ಇದನ್ನೂ ಓದಿ – ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ