ಶಿವಮೊಗ್ಗ ಲೈವ್.ಕಾಂ |SHIMOGA NEWS | 24 NOVEMBER 2020
ಗ್ರಾಮ ಲೆಕ್ಕಾಧಿಕಾರಿಯ ಎಡವಟ್ಟಿನಿಂದ ತಮಗೆ ಪರಿಹಾರ ದೊರೆತಿಲ್ಲ. ಈ ಬಗ್ಗೆ ವಿಚಾರಿಸಿದರೆ ಗ್ರಾಮ ಲೆಕ್ಕಾಧಿಕಾರಿ ಉದ್ಧಟತನದಿಂದ ಉತ್ತರಿಸುತ್ತಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಂಡು ನ್ಯಾಯ ದೊರಕಿಸಿಕೊಡಬೇಕು. ಇಲ್ಲವಾದಲ್ಲಿ ಉಪವಾಸ ಸತ್ಯಾಗ್ರಹ ಮಾಡುವುದಾಗಿ ವೃದ್ಧೆಯೊಬ್ಬರು ಜಿಲ್ಲಾಧಿಕಾರಿಗೆ ನೀಡಿರುವ ದೂರಿನಲ್ಲಿ ಎಚ್ಚರಿಸಿದ್ದಾರೆ.
ಉಳ್ಳೂರು ಗ್ರಾಮದ ಮಂಚಾಲೆ ಗ್ರಾಮದ ಸರಸ್ವತಮ್ಮ (86), ಗ್ರಾಮ ಲೆಕ್ಕಾಧಿಕಾರಿ ವಿರುದ್ಧ ಜಿಲ್ಲಾಧಿಕಾರಿ ಅವರಿಗೆ ದೂರು ನೀಡಿದ್ದಾರೆ.
ಗ್ರಾಮ ಲೆಕ್ಕಾಧಿಕಾರಿ ಎಡವಟ್ಟೇನು?
ಸರಸ್ವತಮ್ಮ ಅವರಿಗೆ ಸಿರಗುಪ್ಪ ಗ್ರಾಮದ ಸರ್ವೇ ನಂ.9ರಲ್ಲಿ 6 ಎಕರೆ 18 ಗುಂಟೆ ಖುಷ್ಕಿ ಜಮೀನಿದೆ. ಸರ್ವೇ ನಂ.2ರಲ್ಲಿ 2 ಎಕರೆ 34 ಗುಂಟೆ ತರಿ ಜಮೀನು ಇದೆ. ನಿಯಮಾನುಸಾರ ಕಂದಾಯವನ್ನು ಕಟ್ಟುತ್ತಿರುವುದಾಗಿ ತಿಳಿಸಿದ್ದಾರೆ. ಹವಾಮಾನ ವೈಪರಿತ್ಯ, ಅತಿವೃಷ್ಟಿ, ಅನಾವೃಷ್ಟಿ, ಕರೋನ ಸಂದರ್ಭದಲ್ಲಿ ಉಂಟಾದ ಬೆಳೆ ನಷ್ಟಕ್ಕೆ ಸರ್ಕಾರದ ಪರಿಹಾರ ಸಿಕ್ಕಿಲ್ಲ.
ಈ ಕುರಿತು ತೋಟಗಾರಿಕೆ ಇಲಾಖೆಯಲ್ಲಿ ವಿಚಾರಿಸಿದಾಗ, ಗ್ರಾಮ ಲೆಕ್ಕಾಧಿಕಾರಿ ಅವರು ಬೆಳೆ ವಿವರ ದಾಖಲಿಸಿಲ್ಲ ಎಂಬುದು ಗೊತ್ತಾಗಿದೆ. ಈ ಕುರಿತು ಉಳ್ಳೂರು ಗ್ರಾಮ ಲೆಕ್ಕಾಧಿಕಾರಿ ಅವರನ್ನು ವಿಚಾರಿಸಿದಾಗ ಉದ್ಧಟತನ ತೋರಿಸಿದ್ದಾರೆ ಎಂದು ಸರಸ್ವತಮ್ಮ ದೂರಿದ್ದಾರೆ.
ಈ ಸಂಬಂಧ ಜಿಲ್ಲಾಧಿಕಾರಿ ಅವರಿಗೆ ದೂರು ನೀಡಿದ್ದು, ಕ್ರಮ ಕೈಗೊಳ್ಳದೆ ಇದ್ದರೆ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಎಚ್ಚರಿಸಿದ್ದಾರೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]