ಶಿವಮೊಗ್ಗ ಲೈವ್.ಕಾಂ | SHIMOGA NEWS | 7 ಆಗಸ್ಟ್ 2020
ಶರಾವತಿ ನದಿ ನಡುವೆ ಲಾಂಚ್ ದಿಢೀರ್ ನಿಂತು ಆತಂಕ ಸೃಷ್ಟಿಸಿದ್ದ ಲಾಂಚ್, ಕೊನೆಗೂ ದಡ ಸೇರಿದೆ. ಇದರಿಂದ ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಲಾಂಚ್ ನಿಂತದ್ದು ಯಾಕೆ?
ಶರಾವತಿ ಹಿನ್ನೀರು ಭಾಗದಲ್ಲಿ ಜೋರು ಗಾಳಿಯ ರಭಸಕ್ಕೆ ಲಾಂಚ್ ಚಾಲಕನ ನಿಯಂತ್ರಣ ತಪ್ಪಿದೆ. ನಿರ್ದಿಷ್ಟ ರೂಟ್ ಬಿಟ್ಟು, ಅತ್ತಿತ್ತ ಸರಿದಿದೆ. ಸೇತುವೆ ನಿರ್ಮಿಸಲು ಹಾಕಿದ್ದ ಪಿಲ್ಲರ್ಗೆ ಲಾಂಚ್ ಸಿಕ್ಕಿಬಿದ್ದು, ಮುಂದೆ ಸಾಗಲು ಸಾದ್ಯವಾಗಲಿಲ್ಲ.
25ಕ್ಕೂ ಹೆಚ್ಚು ಪ್ರಯಾಣಿಕರಿಗೆ ಢವಢವ
ಲಾಂಚ್ನಲ್ಲಿ ಸುಮಾರು 25 ಪ್ರಯಾಣಿಕರಿದ್ದರು. ಕಾರುಗಳು, ಅಡುಗೆ ಅನಿಲ ಸಿಲಿಂಡರ್ ತುಂಬಿದ್ದ ಪಿಕಪ್ ವಾಹನ, ಬೈಕುಗಳು ಇದ್ದವು. ಲಾಂಚ್ ಸಿಕ್ಕಿಬಿದ್ದಿದ್ದರಿಂದ ಎಲ್ಲರೂ ಆತಂಕಕ್ಕೀಡಾದರು. ‘ಪಿಲ್ಲರ್ ಇದೆ ಅನ್ನುವುದು ಯಾರಿಗೂ ಕಾಣಿಸ್ತುತಿರಲಿಲ್ಲ. ಆದರೆ ಲಾಂಚ್ ನಿಂತಾಗ ಎಲ್ಲರೂ ಹೆದರಿಬಿಟ್ಟಿದ್ದೆವು’ ಅನ್ನುತ್ತಾರೆ ಪ್ರಯಾಣಿಕ ತೀರ್ಥೇಶ್.
ರಕ್ಷಣಾ ಕಾರ್ಯ ಶುರು
ಲಾಂಚ್ ಸಿಕ್ಕಿಬಿದ್ದ ವಿಚಾರ ಕೆಲವೇ ನಿಮಿಷದಲ್ಲಿ ಅಕ್ಕಪಕ್ಕದ ಊರುಗಳಿಗೆ ತಲುಪಿತ್ತು. ಬಂದರು ಮತ್ತು ಒಳನಾಡು ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದರು. ಸಂಸದ ರಾಘವೇಂದ್ರ, ಶಾಸಕ ಹರತಾಳು ಹಾಲಪ್ಪ ಸೇರಿದಂತೆ ಹಲವರಿಗೂ ವಿಚಾರ ತಿಳಿಸಲಾಯಿತು. ಪ್ರಯಾಣಿಕರನ್ನು ಸುರಕ್ಷಿತವಾಗಿ ದಡ ಸೇರಿಸುವಂತೆ ಜನಪ್ರತಿನಿಧಿಗಳು ಸೂಚಿಸಿದರು. ಆದರೆ ಕಾರ್ಯಾಚರಣೆ ಸುಲಭವಾಗಿರಲಿಲ್ಲ. ಮಳೆ, ಗಾಳಿಯ ರಭಸ, ಶರಾವತಿಯಲ್ಲಿ ನೀರಿಮ ಹೆಚ್ಚಳದಿಂದಾಗಿ ರಕ್ಷಣೆ ಮಾಡುವುದು ಕಷ್ಟಕರವಾಗಿತ್ತು. ಆದರೂ ವಿವಿಧೆಡೆಯಿಂದ ಬೋಟ್ಗಳನ್ನು ತರಿಸಲು ಅಧಿಕಾರಿಗಳು ಮುಂದಾಗಿದ್ದರು.
ಚಾಕಚಕ್ಯತೆ ಮೆರೆದ ಚಾಲಕ, ಸಿಬ್ಬಂದಿ
ಲಾಂಚ್ ಚಾಲಕ ರವಿ ಮತ್ತು ಸಿಬ್ಬಂದಿ ಸಿದ್ದರಾಜು ಅವರು ಸಮಯ ಪ್ರಜ್ಞೆ, ಎಲ್ಲರನ್ನು ಕಾಪಾಡಿದೆ. ಲಾಂಚ್ ಸಿಕ್ಕಬೀಳುತ್ತಿದ್ದಂತೆ ತೆಪ್ಪ ತರಿಸಿ, ಹಗ್ಗದಿಂದ ಒಂದು ಬದಿಗೆ ಲಾಂಚನ್ನು ಕಟ್ಟಿ ನಿಲ್ಲಿಸಿದರು. ಗಾಳಿಯಿಂದಾಗಿ ಲಾಂಚ್ ಅತ್ತಿತ್ತ ಹೋಗದಂತೆ ತಡೆಯುವಲ್ಲಿ ಸಫಲವಾದರು. ‘ಹಗ್ಗದಿಂದ ಬಿಗಿಯಾಗಿ ಲಾಂಚ್ ಕಟ್ಟಿ ಎಳೆಸುವ ಪ್ರಯತ್ನವಾಯ್ತು, ಸ್ವಲ್ಪ ಹೊತ್ತಿನ ನಂತರ ಗಾಳಿಯ ರಭಸ ಕಡಿಮೆಯಾದ ಮೇಲೆ ಲಾಂಚ್ ಶುರು ಮಾಡಿ, ಮುಂದಕ್ಕೆ ಹೊರಡಿಸಲಾಯಿತು’ ಅಂತಾರೆ ಪ್ರಯಾಣಿಕ ತೀರ್ಥೇಶ್.
ಚಾಲಕ ಏನಂತರೆ?
ಸಾಗರ ದಡದಿಂದ ಲಾಂಚ್ ಪ್ರಯಾಣ ಸಾಮಾನ್ಯವಾಗಿತ್ತು. ಆದರೆ ಮಧ್ಯಕ್ಕೆ ಹೋದಾಗ ಗಾಳಿ ಬೀಸಿ, ಸೇತುವೆಯ ಪಿಲ್ಲರ್ಗೆ ಲಾಂಚ್ ತಾಗಿತು. ಆ ಬಳಿಕ ಲಾಂಚನ್ನು ಚಾಲನೆ ಮಾಡಲಿಲ್ಲ. ಯಾಕಂದರೆ ಲಾಂಚ್ನ ಭಾಗ ಕಟ್ ಆಗುವ ಸಾದ್ಯತೆ ಇತ್ತು. ಗಾಳಿ, ಮಳೆಯ ತೀವ್ರತೆ ಕಡಿಮೆಯಾದ ಮೇಲೆ ಲಾಂಚನ್ನು ಸುರಕ್ಷಿತವಾಗಿ ಕೆ.ಬಿ.ಸರ್ಕಲ್ ಕಡೆಗೆ ತರಲಾಯಿತು ಅನ್ನುತ್ತಾರೆ ಲಾಂಚ್ ಚಾಲಕ ರವಿ.
ದಡ ಸೇರಿದ ಮೇಲೆ ನಿಟ್ಟುಸಿರು
ಸತತ ಒಂದೂವರೆ ಗಂಟೆ ಕಾರ್ಯಾಚರಣೆ ಬಳಿಕ ಲಾಂಚ್ ದಡ ಸೇರಿತು. ಚಾಲಕ ರವಿ, ಸಿಬ್ಬಂದಿ ಸಿದ್ದರಾಜು ಅವರ ಸಮಯ ಪ್ರಜ್ಞೆಯಿಂದಾಗಿ ಎಲ್ಲರು ದಡ ಸೇರುವಂತಾಯಿತು.
ಹಸಿರುಮಕ್ಕಿಯಲ್ಲಿ ಸೇತುವೆ ನಿರ್ಮಾಣ ಕಾರ್ಯ ನಡೆಯುತ್ತಿದೆ. ಪಿಲ್ಲರ್ಗಳನ್ನು ಹಾಕಲಾಗಿದೆ. ಪ್ರತಿದಿನ ಇದೇ ಹಾದಿಯಲ್ಲಿ ಲಾಂಚ್ ಸಾಗುತ್ತಿತ್ತು. ಆದರೆ ಮಳೆ ಪ್ರಮಾಣ ಹೆಚ್ಚಳ, ಶರಾವತಿ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳ, ಗಾಳಿಯ ರಭಸದಿಂದಾಗಿ ಲಾಂಚ್ ಚಾಲಕನ ನಿಯಂತ್ರಣ ತಪ್ಪಿತ್ತು. ಆದರೆ ಚಾಲಕ, ಸಿಬ್ಬಂದಿ ಸಮಯ ಪ್ರಜ್ಞೆ, ಅಧಿಕಾರಿಗಳ ನೆರವಿನಿಂದಾಗಿ ಲಾಂಚ್ ಸುರಕ್ಷಿತವಾಗಿ ದಡ ಸೇರಿದೆ. ಇವರ ಕಾರ್ಯಕ್ಕೆ ಶಾಸಕ ಹರತಾಳು ಹಾಲಪ್ಪ ಸೇರಿದಂತೆ ಜನಪ್ರತಿನಿಧಿಗಳು, ಜನರು ಅಭಿನಂದನೆ ಸಲ್ಲಿಸಿದ್ದಾರೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]