ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 22 OCTOBER 2023
SHIMOGA : ನವರಾತ್ರಿ ಅಂಗವಾಗಿ ಸಿಗಂದೂರು (Sigandur) ಶ್ರೀ ಚೌಡೇಶ್ವರಿ ಸನ್ನಿಧಿಯಲ್ಲಿ 8ನೇ ದಿನದ ಉತ್ಸವ ನಡೆಯಿತು. ಶಿಕ್ಷಣ ಸಚಿವ ಮಧು ಬಂಗಾರಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಇದೆ ವೇಳೆ ಮಾತನಾಡಿದ ಮಧು ಬಂಗಾರಪ್ಪ ಪ್ರಮುಖ ವಿಚಾರಗಳನ್ನು ತಿಳಿಸಿದರು.
ಮಿನಿಸ್ಟರ್ ಹೇಳಿದ 5 ಪ್ರಮುಖ ಸಂಗತಿ
ರಾಜ್ಯದಲ್ಲಿ ಶಿಕ್ಷಕರ ಕೊರತೆ ನೀಗಿಸಲು ಮೂರು ವರ್ಷದಲ್ಲಿ 20 ಸಾವಿರ ಶಿಕ್ಷಕರ ನೇಮಕ ಮಾಡಲಾಗುತ್ತದೆ. ಈಗಾಗಲೆ 13,500 ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಮುಗಿಸಿ ಆದೇಶ ನೀಡಲಾಗಿದೆ. 52 ಸಾವಿರ ಶಿಕ್ಷಕರ ಹುದ್ದೆ ಖಾಲಿ ಇದ್ದು ಮುಂದಿನ ಐದು ವರ್ಷದಲ್ಲಿ ಭರ್ತಿ ಮಾಡಲಾಗುವುದು.
ಗ್ರಾಮೀಣ ಪ್ರದೇಶದಲ್ಲಿ ಗುಣಾತ್ಮಕ ಶಿಕ್ಷಣದ ಜೊತೆಗೆ ಮೂಲ ಸೌಕರ್ಯ ಒದಗಿಸುವ ಕಡೆ ಗಮನ ಹರಿಸಲಾಗುತ್ತದೆ. ಗ್ರಾಮೀಣ ಭಾಗದಲ್ಲಿ 3 ಸಾವಿರ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ತೆರೆದು ಕನ್ನಡ ಮತ್ತು ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ನೀಡಲಾಗುವುದು. ಸರ್ಕಾರಿ ಶಾಲೆಗಳ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು ನಮ್ಮ ಸರ್ಕಾರದ ಆದ್ಯತೆ. ಇದಕ್ಕಾಗಿ ಇನ್ಫೋಸಿಸ್, ವಿಪ್ರೊ , ದೇಶಪಾಂಡೆ ಫೌಂಡೇಷನ್ ಸೇರಿದಂತೆ ಅನೇಕ ಸಂಸ್ಥೆಗಳ ತಜ್ಞರಿಂದ ಸರ್ಕಾರಿ ಶಾಲೆ ಶಿಕ್ಷಕರಿಗೆ ತರಬೇತಿ ಕೊಡಿಸಲಾಗುತ್ತಿದೆ.
ಶರಾವತಿ ಸಂತ್ರಸ್ತರ ಸಮಸ್ಯೆ ಬಗೆಹರಿಸಲು ಸರ್ಕಾರದ ಹಂತದಲ್ಲಿ ಚರ್ಚೆ ನಡೆಸಲಾಗಿದೆ. ಕಾನೂನು ತಜ್ಞರ ಅಭಿಪ್ರಾಯ ಪಡೆಯಲಾಗಿದೆ. ಕೇಂದ್ರ ಸರ್ಕಾರ ಮತ್ತು ನ್ಯಾಯಾಲಯದಲ್ಲಿ ಕಾನೂನು ಹೋರಾಟ ಮಾಡಿ ಜನರಿಗೆ ನ್ಯಾಯ ಒದಗಿಸುತ್ತೇವೆ. ಬಗರ್‌ಹುಕುಂ ಸಾಗುವಳಿದಾರರಿಗೆ ಕಾನೂನು ವ್ಯಾಪ್ತಿಯಲ್ಲಿ ಹಕ್ಕು ಪತ್ರ ಕೊಡುವ ಕೆಲಸ ಮಾಡಲಾಗುತ್ತದೆ.
ಮಳೆ ಕೊರತೆಯಿಂದ ವಿದ್ಯುತ್ ಉತ್ಪಾದನೆ ಕುಂಠಿತವಾಗಿದೆ. ರೈತರಿಗೆ 5 ಗಂಟೆ ನಿರಂತರ ವಿದ್ಯುತ್ ಪೂರೈಸಲಾಗುವುದು. ಇಂಧನ ಸಚಿವ ಕೆ.ಜೆ.ಜಾರ್ಜ್ ಶೀಘ್ರ ಶಿವಮೊಗ್ಗ ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಆ ಸಂದರ್ಭ ಜಿಲ್ಲೆಯ ವಿದ್ಯುತ್ ಸಮಸ್ಯೆ ಬಗ್ಗೆ ಚರ್ಚೆ ನಡೆಸಲಾಗುವುದು.
ನಾಡಿನಾದ್ಯಂತ ಸಿಗಂದೂರು ದೇವಾಲಯ ಪ್ರಸಿದ್ಧಿ ಪಡೆದಿದೆ. ದೇಗುಲದ ಅಭಿವೃದ್ಧಿ ಮತ್ತು ಪ್ರಸಿದ್ಧಿಗೆ ಡಾ. ರಾಮಪ್ಪ ಅವರ ಚಿಂತನೆ ಮತ್ತು ಶ್ರಮ ಎಲ್ಲರಿಗು ಸ್ಪೂರ್ತಿ. ಸಿಗಂದೂರು ದೇವಾಲಯದ ಅಭಿವೃದ್ಧಿಗೆ ಸರ್ಕಾರ ಬದ್ಧ.
ಯಾರೆಲ್ಲ ಏನೇನು ಹೇಳಿದರು?
ಬಸ್ಸಿನಲ್ಲಿ ಬಂದಿಳಿದ ಮಿನಿಸ್ಟರ್
ಹೊಳೆಬಾಗಿಲಿನಿಂದ ದೇಗುಲದವರೆಗೆ ಸಚಿವ ಮಧು ಬಂಗಾರಪ್ಪ ಬಸ್ಸಿನಲ್ಲಿ ಆಗಮಿಸಿದರು. ದೇವಾಲಯದ ವತಿಯಿಂದ ಪೂರ್ಣ ಕುಂಭ ಸ್ವಾಗತ ನೀಡಲಾಯಿತು. ಪತ್ನಿ ಅನಿತಾ ಅವರೊಂದಿಗೆ ಸಚಿವ ಮಧು ಬಂಗಾರಪ್ಪ ಸಿಗಂದೂರು ಶ್ರೀ ಚೌಡೇಶ್ವರಿ ದೇವಿ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿದರು. ಇದೆ ವೇಳೆ ಕರೂರು ಹೋಬಳಿಯ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ಸಚಿವರಿಗೆ ಮನವಿ ಸಲ್ಲಿಸಿದರು.
ಇದನ್ನೂ ಓದಿ – ಸಿಗಂದೂರು ಚೌಡೇಶ್ವರಿ ದೇವಿ ಮೂಲ ಸನ್ನಿಧಿಯಲ್ಲಿ ವಿಶೇಷ ಪೂಜೆ
ಕಾರ್ಯಕ್ರಮದಲ್ಲಿ ಶಿರಸಿ ಸಿದ್ದಾಪುರ ಶಾಸಕ ಬೀಮಣ್ಣ ನಾಯ್ಕ್, ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್, ದೇವಾಲಯದ ಕಾರ್ಯದರ್ಶಿ ರವಿಕುಮಾರ್.ಹೆಚ್.ಆರ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮಂಜುನಾಥ ಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, ಕಾಂಗ್ರೆಸ್ ಮುಖಂಡ ನಾಗರಾಜ ಗೌಡ, ಈಡಿಗರ ಸಂಘದ ಜಿಲ್ಲಾಧ್ಯಕ್ಷ ಶ್ರೀಧರ ಹುಲ್ತಿಕೊಪ್ಪ, ಗಣಪತಿ ಹುಲ್ತಿಕೊಪ್ಪ, ರಾಘವೇಂದ್ರ ಮುಡುಬ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422