ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 16 DECEMBER 2022
ಸಾಗರ : ಮೈಸೂರಿನ ಧರ್ಮಾಪುರ ಪ್ರೌಢಶಾಲೆಯ ವಿದ್ಯಾರ್ಥಿಗಳು ಪ್ರವಾಸಕ್ಕೆ ಬಂದಿದ್ದ ಖಾಸಗಿ ಬಸ್ (tourist bus) ಗುರುವಾರ ಸಿಗಂದೂರು ಸಮೀಪ ಅಪಘಾತಕ್ಕೀಡಾಯಿತು. ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್ ಪಲ್ಟಿಯಾದ ವಿಚಾರ ತಿಳಿಯುತ್ತಿದ್ದಂತೆ ತುಮರಿ, ಸಿಗಂದೂರು ಸುತ್ತಮುತ್ತಲ ಗ್ರಾಮಸ್ಥರು, ಲಾಂಚ್ ಸಿಬ್ಬಂದಿ, ವೈದ್ಯಕೀಯ ಸಿಬ್ಬಂದಿ ಸೇರಿದಂತೆ ಹಲವರು ನೆರವಿಗೆ ನಿಂತರು. ಮಕ್ಕಳಿಗೆ, ಪೋಷಕರಿಗೆ ಧೈರ್ಯ ಹೇಳಿದರು.
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಹೇಗಾಯಿತು ಅಪಘಾತ? (tourist bus)
ಹುಣಸೂರು ತಾಲೂಕು ಧರ್ಮಾಪುರ ಪ್ರೌಢಶಾಲೆಯ ವಿದ್ಯಾರ್ಥಿಗಳು ನಾಲ್ಕು ದಿನದ ಪ್ರವಾಸ ಕೈಗೊಂಡಿದ್ದರು. ಹೊರನಾಡು, ಶೃಂಗೇರಿ, ಕೊಲ್ಲೂರು ಪ್ರವಾಸ ಮುಗಿಸಿ ಸಿಗಂದೂರಿಗೆ ತೆರಳುತ್ತಿದ್ದರು. ಸಿಗಂದೂರು ದೇವಸ್ಥಾನದಿಂದ 12 ಕಿ.ಮೀ ದೂರದ ವಕ್ಕೋಡಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಬಸ್ ಪಲ್ಟಿಯಾಗಿದೆ. ಬಸ್ಸಿನಲ್ಲಿ 31 ಬಾಲಕಿಯರು, 33 ಬಾಲಕರು, ಐವರು ಶಿಕ್ಷಕರು, ಚಾಲಕ, ನಿರ್ವಾಹಕ ಇದ್ದರು.
(tourist bus)
ಊರಿಗೂರೆ ನೆರವಿಗೆ ಧಾವಿಸಿತು
ಶಾಲಾ ಮಕ್ಕಳಿದ್ದ ಬಸ್ ಅಪಘಾತಕ್ಕೀಡಾದ ವಿಚಾರ ತಿಳಿಯುತ್ತಿದ್ದಂತೆ ಶರಾವತಿ ಹಿನ್ನೀರಿನ ದ್ವೀಪದ ಜನರು ಕೆಲಸ, ಕಾರ್ಯಗಳನ್ನು ಬಿಟ್ಟು ನೆರವಿಗೆ ಧಾವಿಸಿದರು. ಆಂಬುಲೆನ್ಸ್ ಮತ್ತು ಇತರೆ ವಾಹನಗಳ ಮೂಲಕ ಮಕ್ಕಳನ್ನು ತುಮರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಿದರು.
(tourist bus)
ಆಂಬುಲೆನ್ಸ್, ವಿಶೇಷ ಲಾಂಚ್ ವ್ಯವಸ್ಥೆ
ಸಣ್ಣಪುಟ್ಟ ಗಾಯಗಳಾದವರಿಗೆ ತುಮರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೇ ಚಿಕಿತ್ಸೆ ನೀಡಲಾಯಿತು. ಹೆಚ್ಚಿನ ಚಿಕಿತ್ಸೆ ಅಗತ್ಯ ಇದ್ದವರನ್ನು ಸಾಗರದ ಉಪ ವಿಭಾಗೀಯ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಇದಕ್ಕಾಗಿ ತುಮರಿ ಭಾಗದ ನಾಲ್ಕು ಆಂಬುಲೆನ್ಸ್ ಗಳನ್ನು ಬಳಸಲಾಯಿತು. ಜಿ.ಶಂಕರ ಟ್ರಸ್ಟ್, ಸಿಗಂದೂರು ಟ್ರಸ್ಟ್ ಮತ್ತು 2 ಸರ್ಕಾರಿ ಆಂಬುಲೆನ್ಸ್ ಗಳನ್ನು ಮಕ್ಕಳನ್ನು ಆಸ್ಪತ್ರೆಗೆ ಕರೆದೊಯ್ಯಲು ಬಳಸಲಾಯಿತು. ಮಕ್ಕಳನ್ನು ತುರ್ತಾಗಿ ಶರಾವತಿ ಹಿನ್ನೀರು ದಾಟಿಸಬೇಕಿದ್ದರಿಂದ ಲಾಂಚ್ ಸಿಬ್ಬಂದಿ ಒಂದು ಲಾಂಚ್ ಅನ್ನು ವಿಶೇಷವಾಗಿ ಮಕ್ಕಳಾಗಿ ಕಾಯ್ದಿರಿಸಿದರು.
ಹಾಸ್ಟೆಲ್ ನಲ್ಲಿ ಮಕ್ಕಳಿಗೆ ವ್ಯವಸ್ಥೆ
ಉಳಿದ ಮಕ್ಕಳಿಗೆ ಬ್ಯಾಕೋಡಿನ ಬಾಲಕರ ಹಾಸ್ಟೆಲ್ ನಲ್ಲಿ ತಾತ್ಕಾಲಿಕವಾಗಿ ಉಳಿಯಲು ವ್ಯವಸ್ಥೆ ಕಲ್ಪಿಸಲಾಯಿತು. ಬೆಳಗ್ಗೆ ಮತ್ತು ಮಧ್ಯಾಹ್ನ ತಿಂಡಿ, ಊಟದ ವ್ಯವಸ್ಥೆ ಮಾಡಲಾಯಿತು. ಬ್ಯಾಕೋಡು ಆಸ್ಪತ್ರೆ ವೈದ್ಯೆ ಡಾ. ಅನನ್ಯಾ ಅವರ ನೇತೃತ್ವದಲ್ಲಿ ಹಾಸ್ಟೆಲ್ ನಲ್ಲಿದ್ದ ಮಕ್ಕಳ ಆರೋಗ್ಯ ತಪಾಸಣೆ ನಡೆಸಲಾಯಿತು.
ಸಾಗರದಲ್ಲು ವಿಶೇಷ ಕಾಳಜಿ
ಪ್ರವಾಸಕ್ಕೆ ಬಂದ ಮಕ್ಕಳಿದ್ದ ಬಸ್ ಅಪಘಾತದ ವಿಚಾರ ತಿಳಿಯುತ್ತಿದ್ದಂತೆ, ಸಾಗರ ಉಪ ವಿಭಾಗೀಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸಿದ್ಧತೆ ಮಾಡಿಕೊಳ್ಳಲಾಯಿತು. ಡಾ.ಪರಪ್ಪ ಮತ್ತು ವೈದ್ಯಕೀಯ ತಂಡ ಮಕ್ಕಳಿಗೆ ಬೆಡ್ ಕಾಯ್ದಿರಿಸಿ, ಯಾವುದೆ ತೊಂದರೆ ಆಗದಂತೆ ಮುತುವರ್ಜಿ ವಹಿಸಿದರು. ಆಂಬುಲೆನ್ಸ್ ಗಳಲ್ಲಿ ಮಕ್ಕಳನ್ನು ಕರೆ ತರುತ್ತಿದ್ದಂತೆ ತಕ್ಷಣ ಚಿಕಿತ್ಸೆ ಆರಂಭಿಸಿದರು. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದ ಒಬ್ಬ ಬಾಲಕನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕಳುಹಿಸಲಾಯಿತು.
ಸ್ಟೆಥೋಸ್ಕೋಪ್ ಹಿಡಿದ ಕಾಗೋಡು ಪುತ್ರಿ
ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಪುತ್ರಿ ಡಾ. ರಾಜನಂದಿನಿ ಅವರು ಸಾಗರ ಉಪ ವಿಭಾಗೀಯ ಆಸ್ಪತ್ರೆಗೆ ಭೇಟಿ ನೀಡಿದರು. ವೃತ್ತಿಯಲ್ಲಿ ವೈದ್ಯೆಯಾಗಿರುವ ಡಾ. ರಾಜನಂದಿನಿ ಅವರು ಸಾಗರ ಉಪ ವಿಭಾಗೀಯ ಆಸ್ಪತ್ರೆಯಲ್ಲಿ ತುರ್ತು ಸಂದರ್ಭ ವೈದ್ಯರಿಗೆ ನೆರವಾದರು. ಸ್ಟೆಥೋಸ್ಕೋಪ್ ಹಿಡಿದು ಮಕ್ಕಳ ಆರೋಗ್ಯ ಪರಿಶೀಲಿಸಿದರು. ಮಕ್ಕಳಿಗೆ ಧೈರ್ಯ ಹೇಳಿದರು.
ಅಪಘಾತ ವಲಯ ವಕ್ಕೋಡಿ ಕ್ರಾಸ್
ರಾಷ್ಟ್ರೀಯ ಹೆದ್ದಾರಿ 369ಇ ವಕ್ಕೋಡಿ ಕ್ರಾಸ್ ಅಪಘಾತ ವಲಯವಾಗಿದೆ. ಈ ತಿರುವಿನಲ್ಲಿ ಅಪಘಾತ ಸಾಮಾನ್ಯ ಎಂಬಂತಾಗಿದೆ. ಬಸ್ ಚಾಲಕನಿಗೆ ರಸ್ತೆಯ ಅಂದಾಜು ಸಿಗದಿರುವುದು ಮತ್ತು ಅತಿ ವೇಗದಿಂದಾಗಿ ಅಪಘಾತ ಸಂಭವಿಸಿರುವ ಸಾದ್ಯತೆ ಇದೆ. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ – ಮೈಸೂರಿನಿಂದ ಐರಾವತ ಬಸ್ಸಲ್ಲಿ ಬಂದ ಇಂಜಿನಿಯರ್, ಶಿವಮೊಗ್ಗದಲ್ಲಿ ಇಳಿಯುವಾಗ ಕಾದಿತ್ತು ಶಾಕ್
ಸಿಗಂದೂರು ದೇವಾಲಯ ಕಾರ್ಯದರ್ಶಿ ರವಿಕುಮಾರ್, ಬ್ಯಾಕೋಡು ಸೊಸೈಟಿ ಅಧ್ಯಕ್ಷ ವಿಜಯಕುಮಾರ್, ದೇವರಾಜ ಕಬ್ಬದೂರು, ಜಿ.ಟಿ.ಸತ್ಯನಾರಾಯಣ, ಬಾಬು, ವಿಜಯ ಅಡಗಳಲೆ, ಲೋಕಪಾಲ್ ಜೈನ್, ಸಂಧ್ಯಾ ಸಿಗಂದೂರು ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ಮಕ್ಕಳಿಗೆ ನೆರವಾದರು.