ಶಿವಮೊಗ್ಗ ಲೈವ್.ಕಾಂ | TUMARI NEWS | 4 ಸೆಪ್ಟೆಂಬರ್ 2021
ಶರಾವತಿ ಹಿನ್ನೀರು ಭಾಗದಲ್ಲಿ ಪ್ರವಾಸಿಗರು ಮತ್ತು ಸ್ಥಳೀಯರನ್ನು ಸುರಕ್ಷಿತವಾಗಿ ದಡ ತಲುಪಿಸುವ ಲಾಂಚ್ ಸಿಬ್ಬಂದಿ ಬದುಕು, ನಡು ನೀರಿಗೆ ಬಂದು ನಿಂತಿದೆ. ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ನಿಧಾನಗತಿಯಿಂದಾಗಿ ಲಾಂಚ್ ಸಿಬ್ಬಂದಿ ಒಂಭತ್ತು ತಿಂಗಳಿಂದ ಸಂಬಳವಿಲ್ಲದೆ ಪರಿತಪಿಸುತ್ತಿದ್ದಾರೆ. ಇದಿಷ್ಟೆ ಅಲ್ಲ, ಭವಿಷ್ಯದ ಕುರಿತು ಆತಂಕ ಎದುರಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಸಿಗಂದೂರು ಶ್ರೀ ಚೌಡೇಶ್ವರಿ ದೇವಸ್ಥಾನಕ್ಕೆ ಬರುವ ಪ್ರವಾಸಿಗರನ್ನು ಹೆಚ್ಚಾಗಿ ಆಕರ್ಷಿಸುವುದು ಶರಾವತಿ ಹಿನ್ನೀರಿನ ಲಾಂಚ್’ಗಳು. ಅಂಬಾರಗೋಡ್ಲು – ಕಳಸವಳ್ಳಿ ಮಧ್ಯೆ ಲಾಂಚ್’ನಲ್ಲಿ ಪ್ರಯಾಣಿಸುವುದೆ ಹಿತ ಅನುಭವ. ಪ್ರವಾಸಿಗರು ಮತ್ತು ಸ್ಥಳೀಯರು ನಿರಂತರವಾಗಿ, ಸುರಕ್ಷಿತವಾಗಿ ದಡಕ್ಕೆ ತಲುಪಿಸುವ ಸಿಬ್ಬಂದಿಗಳು ಈ ವರ್ಷದ ಸಂಬಳವನ್ನೇ ಕಂಡಿಲ್ಲ.
2021ರಲ್ಲಿ ಸಂಬಳವನ್ನೇ ಕಂಡಿಲ್ಲ
ಶರಾವತಿ ಹಿನ್ನೀರು ಭಾಗದ ಅಂಬಾರಗೋಡ್ಲು – ಕಳಸವಳ್ಳಿ, ಹಸಿರುಮಕ್ಕಿ, ಮುಪ್ಪಾನೆ ಭಾಗದಲ್ಲಿ ಲಾಂಚ್’ಗಳು ಕಾರ್ಯನಿರ್ವಹಿಸುತ್ತಿವೆ.19 ಸಿಬ್ಬಂದಿಗಳು ಲಾಂಚ್’ನಲ್ಲಿ ಕೆಲಸ ಮಾಡುತ್ತಿದ್ದಾರೆ. ಎಲ್ಲರೂ ಗುತ್ತಿಗೆ ಆಧಾರದ ನೌಕರರು. ಪ್ರತಿದಿನ ಸೇವೆ ಒದಗಿಸುವುದು ಅನಿವಾರ್ಯ. ಕೆಲವು ಸಂದರ್ಭ ಹೆಚ್ಚುವರಿ ಅವಧಿ ಕರ್ತವ್ಯ ನಿರ್ವಹಿಸಬೇಕು. ಹೀಗಿದ್ದೂ, ಈ ಸಿಬಂದಿಗಳು 2021ರಲ್ಲಿ ಒಂದೇ ಒಂದು ತಿಂಗಳು ಸಂಬಳ ಪಡೆದಿಲ್ಲ.
ಸಂಬಳ ಕೊಡದಿರಲು ಕಾರಣವೇನು?
ಲಾಂಚ್ ಸಿಬ್ಬಂದಿಗಳು ಕಡವುಗಳು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಗುತ್ತಿಗೆ ನೌಕರರಾಗಿದ್ದಾರೆ. 2021ರ ಜನವರಿ ತಿಂಗಳಿಂದ ಇವರ ವೇತನಕ್ಕೆ ಇಲಾಖೆಯು ಹಣ ಬಿಡುಗಡೆ ಮಾಡಿಲ್ಲ. GST ಗೊಂದಲದಿಂದಾಗಿ ಹಣ ಬಿಡುಗಡೆಯಾಗಿಲ್ಲ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಈಗ ಹೊಸ ಬಿಲ್ ಸಿದ್ಧಪಡಿಸಲಾಗಿದ್ದು, ಇನ್ನೊಂದು ವಾರದಲ್ಲಿ ವೇತನ ಬಿಡುಗಡೆ ಆಗಬಹುದು ಎಂದು ಸಮಜಾಯಿಷಿ ನೀಡುತ್ತಿದ್ದಾರೆ.
19 ಸಿಬ್ಬಂದಿಯ ಒಟ್ಟು ವೇತನ 2 ಲಕ್ಷಕ್ಕಿಂತಲೂ ಕಡಿಮೆ ಇದೆ. ಹಾಗಾಗಿ 2 ಲಕ್ಷಕ್ಕಿಂತಲೂ ಕಡಿಮೆ ವೇತನವಿದ್ದರೆ ಜಿಎಸ್’ಟಿ ಪರಿಗಣಿಸುವ ಅಗತ್ಯವಿಲ್ಲ ಎಂದು ಭಾವಿಸಿದ ಅಧಿಕಾರಿಗಳು ಬಿಲ್ ಮಾಡಿದ್ದಾರೆ. ಆದರೆ ಖಜಾನೆ ಇಲಾಖೆ ಅಧಿಕಾರಿಗಳು 2 ಲಕ್ಷಕ್ಕಿಂತಲೂ ಕಡಿಮೆ ವೇತನವಿದ್ದರೂ ಜಿಎಸ್’ಟಿ ಕಡಿತ ಅಗತ್ಯ ಎಂಬ ನಿಯಮ ಸೂಚಿಸಿದ್ದಾರೆ. ಇದರಿಂದಾಗಿ ಒಂಭತ್ತು ತಿಂಗಳ ವೇತನ ಲಾಂಚ್ ಸಿಬ್ಬಂದಿ ಕೈಸೇರದಂತಾಗಿದೆ.
ಇನ್ನೊಂದು ವಾರದಲ್ಲಿ ಬರುತ್ತೆ
ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಡವು ಇಲಾಖೆ ಸಹಾಯಕ ನಿರೀಕ್ಷಕ ದಾಮೋದರ ನಾಯ್ಕ ಎರಡು ಲಕ್ಷಕ್ಕಿಂತಲೂ ಕಡಿಮೆ ವೇತನಕ್ಕೂ ಜಿಎಸ್’ಟಿ ಕಡಿತಗೊಳಿಸಬೇಕು ಎಂದು ಖಜಾನೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಬಂಧ ಪತ್ರ ವ್ಯವಹಾರ ನಡೆಸಲಾಗಿದೆ. ಇನ್ನೊಂದು ವಾರದಲ್ಲಿ ಲಾಂಚ್ ಸಿಬ್ಬಂದಿಯ ವೇತನ ಪಾವತಿಯಾಗಲಿದೆ ಎಂದು ತಿಳಿಸಿದ್ದಾರೆ.
ವಸತಿ ಸೌಲಭ್ಯ ಮರೀಚಿಕೆಯ ಭೀತಿ
ಲಾಂಚ್ ಸಿಬ್ಬಂದಿಗಳಿಗೆ ವಸತಿ ಸೌಲಭ್ಯ ಕಲ್ಪಿಸುವ ಕುರಿತು ಚಿಂತನೆಯಾಗಿತ್ತು. ಜನಪ್ರತಿನಿಧಿಗಳು ಕೂಡ ಈ ಕುರಿತು ಪ್ರಯತ್ನ ಮಾಡಿದ್ದರು. ಆದರೆ ಈಗ ಅದೂ ಮರೀಚಿಕೆಯಾಗುವ ಸಾಧ್ಯತೆ ಇದೆ. ಅಂಬಾರಗೋಡ್ಲು ಮತ್ತು ಕಳಸವಳ್ಳಿ ಸಂಪರ್ಕ ಸೇತುವೆ ನಿರ್ಮಿಸಲಾಗುತ್ತಿದೆ. ಹಾಗಾಗಿ ಲಾಂಚ್ ಸಿಬ್ಬಂದಿಗೆ ವಸತಿ ಸೌಲಭ್ಯ ಕೊಡುವ ಅಗತ್ಯವಿಲ್ಲ ಎಂದು ಇಲಾಖೆ ಅಧಿಕಾರಿಗಳು ಯೋಚಿಸುತ್ತಿದ್ದಾರೆ.
ಸಿಗಂದೂರಿಗೆ ಸಂಪರ್ಕ ಕಲ್ಪಿಸುವ ಸೇತುವೆ ನಿರ್ಮಾಣವಾದರೆ ಲಾಂಚ್ ಸೇವೆ ಹಂತ ಹಂತವಾಘಿ ಸ್ಥಗಿತವಾಗಬಹುದು ಅಥವಾ ಲಾಂಚ್’ಗಳ ಸಂಖ್ಯೆ ಕಡಿತಗೊಳ್ಳುವ ಸಾಧ್ಯತೆ ಇದೆ. ಹಾಗಾಗಿ ಲಾಂಚ್ ಸಿಬ್ಬಂದಿ ಆತಂಕದಿಂದಲೇ ದಿನ ದೂಡುವಂತಾಗಿದೆ. ಈ ಮಧ್ಯೆ ವೇತನವು ಸರಿಯಾಗಿ ಕೈಸೇರದೆ ಜೀವನ ನಡೆಸುವುದಕ್ಕೆ ಕಷ್ಟಪಡುವಂತಾಗಿದೆ. ಪ್ರತಿದಿನ ಸಾವಿರಾರು ಜನರನ್ನು ಸುರಕ್ಷಿತವಾಗಿ ದಡ ಸೇರಿಸುತ್ತಿರುವ ಲಾಂಚ್ ಸಿಬ್ಬಂದಿಯ ಜೀವನವನ್ನು ಸರ್ಕಾರ ದಡಕ್ಕೆ ಸೇರಿಸುವ ಅಗತ್ಯವಿದೆ.
(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್‍ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200