SHIVAMOGGA LIVE NEWS |10 JANUARY 2023
ಸಾಗರ : ಬಜರಂಗದಳ ಸಹ ಸಂಚಾಲಕ ಸುನಿಲ್ ಮೇಲಿನ ದಾಳಿ ಯತ್ನ ಪ್ರಕರಣದ ಆರೋಪಿ ಸಮೀರ್ ನ ಕುಟುಂಬದವರು (family) ಪತ್ರಿಕಾಗೋಷ್ಠಿ ನಡೆಸಿ, ಗಂಭೀರ ಆರೋಪ ಮಾಡಿದ್ದಾರೆ. ಸಮೀರ್ ಸಹೋದರಿಗೆ ಸುನಿಲ್ ಚುಡಿಯಿಸುತ್ತಿದ್ದ. ಇದೆ ಕಾರಣಕ್ಕೆ ಘಟನೆ ಸಂಭವಿಸಿದೆ ಎಂದು ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಾಮೀಯಾ ಮಸೀದಿ ಅಧ್ಯಕ್ಷ ಫಾರೂಕ್ ಶೇಕ್ ಅವರು, ಸೋಮವಾರ ಬೆಳಗ್ಗೆ ನಡೆದ ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಇಬ್ಬರ ನಡುವೆ ಜಗಳಕ್ಕೆ ಕಾರಣವೇನು ಅನ್ನುವುದು ಯಾರಿಗು ಸ್ಪಷ್ಟವಾಗಿಲ್ಲ. ಆದರೆ ಆ ಘಟನೆಯಿಂದ ನಗರದಲ್ಲಿ ಅಶಾಂತಿ ಸೃಷ್ಟಿಯಾಗಿದೆ. ಘಟನೆಯ ಮಾಹಿತಿ ಲಭಿಸುತ್ತಿದ್ದಂತೆ ಕುಟುಂಬದವರನ್ನು ಸಂಪರ್ಕಿಸಿದೆ ಎಂದರು. (family)
‘ನಾವೆ ಕರೆದೊಯ್ದು ಎಸ್ಪಿ ಕಚೇರಿಗೆ ಬಿಟ್ಟೆವು’
ಘಟನೆಯ ಬಳಿಕ ಸಮೀರ್ ಶಿವಮೊಗ್ಗಕ್ಕೆ ಹೋಗಿದ್ದ. ಅಲ್ಲಿ ಅವರ ಸಂಬಂಧಿಯೊಬ್ಬರ ಮನೆಯಲ್ಲಿದ್ದ. ನಾವೆ ಆತನನ್ನು ಎಸ್.ಪಿ ಕಚೇರಿಗೆ ಕರೆದೊಯ್ದು ಬಿಟ್ಟಿದ್ದೇವೆ ಎಂದು ತಿಳಿಸಿದರು.
ಇದನ್ನೂ ಓದಿ – ಬಜರಂಗದಳ ಕಾರ್ಯಕರ್ತನ ಮೇಲೆ ಮಚ್ಚು ಬೀಸಿದ್ದ ಕೇಸ್ ಗೆ ಬಿಗ್ ಟ್ವಿಸ್ಟ್
ವಾಟ್ಸಪ್ ನಲ್ಲಿ ಬಂದಿರುವ ವಿಡಿಯೋ ಗಮನಿಸಿದಾಗ ಸಮೀರ್ ಬಳಿ ಇರುವುದು ಕತ್ತಿಯೋ, ತಲ್ವಾರೋ, ಕಟ್ಟಿಗೆನೋ ಅನ್ನುವುದು ಸ್ಪಷ್ಟವಾಗಿ ಕಾಣಿಸುತ್ತಿಲ್ಲ. ಆದರೆ ಅವರ ಸಹೋದರಿ ಹೇಳುವ ಪ್ರಕಾರ, ತಾನು ಕಾಲೇಜಿಗೆ ಹೋಗುವಾಗ ಸುನಿಲ್ ಎಂಬಾತ ಹಿಜಾಬ್ ವಿಚಾರವಾಗಿ ಕಿರುಕುಳ ನೀಡುತ್ತಿದ್ದ. ತಮ್ಮ ಧರ್ಮಕ್ಕೆ ಮತಾಂತರವಾಗುವಂತೆ ಪೀಡಿಸುತ್ತಿದ್ದ ತಿಳಿಸಿದ್ದಾರೆ ಎಂದು ಹೇಳಿದರು.
ಯುವಕರ ಜಗಳಕ್ಕೆ ಕೋಮು ಬಣ್ಣ ಬೇಡ
ಅಂಜುಮನ್-ಎ-ಸಾಗರ ಸಮಿತಿ ಅಧ್ಯಕ್ಷ ಸಯ್ಯದ್ ಇಕ್ಬಾಲ್ ಅವರು ಪ್ರತ್ಯೇಕ ಪತ್ರಿಕಾಗೋಷ್ಠಿ ನಡೆಸಿ, ಇಬ್ಬರು ಯುವಕರ ನಡುವಿನ ಜಗಳಕ್ಕೆ ಕೋಮು ಬಣ್ಣ ಕಟ್ಟಿ, ನಗರದಲ್ಲಿ ಅಶಾಂತಿ ಸೃಷ್ಟಿಸುವುದು ಸರಿಯಲ್ಲ. ಕಾನೂನು ಬಾಹಿರ ಕೃತ್ಯ ಎಸಗುವವರ ಪರವಾಗಿ ಮುಸ್ಲಿಂ ಸಮುದಾಯ ಮತ್ತು ತಮ್ಮ ಸಮಿತಿ ನಿಲ್ಲುವುದಿಲ್ಲ ಎಂದರು.
ಇದನ್ನೂ ಓದಿ – ಬಜರಂಗದಳ ಕಾರ್ಯಕರ್ತನ ಮೇಲೆ ದಾಳಿ ಯತ್ನ, ಸಾಗರ ಪಟ್ಟಣ ಬಂದ್, ಹೇಗಿತ್ತು? ಏನೇನೆಲ್ಲ ಆಯ್ತು?
ಪೊಲೀಸ್ ಇಲಾಖೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿ. ಅಲ್ಲದೆ ಸತ್ಯಾಸತ್ಯತೆಯನ್ನು ಜನತೆಗೆ ತಿಳಿಸಲಿ. ಆದರೆ ವಿಚಾರಣೆ ನೆಪದಲ್ಲಿ ಅಮಾಯಕರಿಗೆ ಕಿರುಕುಳ ನೀಡಬಾರದು. ಸಾಗರ ಪಟ್ಟಣದಲ್ಲಿ ಶಾಂತಿ ನೆಲಸಬೇಕು. ಇದು ನಮ್ಮ ಪ್ರಮುಖ ಧ್ಯೇಯ ಎಂದು ಸಯ್ಯದ್ ಇಕ್ಬಾಲ್ ತಿಳಿಸಿದರು.