SHIVAMOGGA LIVE | 4 JUNE 2023
SAGARA : ನೀರಿನ ಮಟ್ಟ ಇಳಿಕೆಯಾದ ಹಿನ್ನೆಲೆ ಶರಾವತಿ ಹಿನ್ನೀರು (Sharavati back water) ಭಾಗದ ಮತ್ತೊಂದು ಲಾಂಚ್ ಸೇವೆ ಸ್ಥಗಿತಗೊಂಡಿದೆ. ಹಸಿರುಮಕ್ಕಿ ಲಾಂಚ್ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಬೇಸಿಗೆ ಕಾರಣಕ್ಕೆ ಶರಾವತಿ ಹಿನ್ನೀರು (Sharavati back water) ಭಾಗದಲ್ಲಿ ನೀರಿನ ಮಟ್ಟ ಕುಸಿತವಾಗಿದೆ. ನೀರಿನ ಆಳದಲ್ಲಿದ್ದ ಮರದ ದಿಮ್ಮಿಗಳು ಮೇಲೆ ಬರಲು ಆರಂಭವಿಸಿವೆ. ಇವುಗಳು ಲಾಂಚ್‌ಗೆ ತಾಗಿ ಹಾನಿ ಉಂಟು ಮಾಡಲಿವೆ. ಈ ಹಿನ್ನೆಲೆ ಲಾಂಚ್ ಸೇವೆಯನ್ನು ತಾತ್ಕಾಲಿಕ ಅವಧಿಗೆ ಸ್ಥಗಿತಗೊಳಿಸಲಾಗಿದೆ. ಮಳೆ ಬಂದು ನೀರಿನ ಮಟ್ಟ ಹೆಚ್ಚಳವಾಗುವವರೆಗೆ ಹಸಿರುಮಕ್ಕಿ ಲಾಂಚ್ ಸೇವೆ ಇರುವುದಿಲ್ಲ.
ಪರಿಶೀಲನೆ ನಡೆಸಿದ ಅಧಿಕಾರಿಗಳು
ನೀರಿನ ಮಟ್ಟ ತಗ್ಗಿರುವ ಹಿನ್ನೆಲೆ ಕಡವು ಅಧಿಕಾರಿಗಳು ಹಸಿರುಮಕ್ಕಿ – ಕೊಲ್ಲೂರು ಮಾರ್ಗದಲ್ಲಿ ಪರಿಶೀಲನೆ ನಡೆಸಿದರು. ಸಹಾಯಕ ಕಡವು ನಿರೀಕ್ಷಕ ದಾಮೋದರ ನಾಯ್ಕ ಸ್ಥಳೀಯರೊಂದಿಗೆ ತೆಪ್ಪದಲ್ಲಿ ಸಂಚರಿಸಿ ಪರಿಸ್ಥಿತಿ ಅವಲೋಕಿಸಿದರು. ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿ, ಈ ಮಾರ್ಗದ ಲಾಂಚ್ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಸೂಚನೆ ನೀಡಿದರು.
ಪರ್ಯಾಯ ಮಾರ್ಗದಲ್ಲಿ ಸಂಚಾರ
ಹಸಿರುಮಕ್ಕಿ ಲಾಂಚ್ ಸೇವೆ ತಾತ್ಕಾಲಿಕವಾಗಿ ಸ್ಥಗಿತವಾಗಿರುವುದಿಂದ ಸಾಗರದಿಂದ ದಕ್ಷಿಣ ಕನ್ನಡದ ಪ್ರಮುಖ ಮಾರ್ಗ ಬಂದ್ ಆದಂತಾಗಿದೆ. ಈಗ ದಕ್ಷಿಣ ಕನ್ನಡದಿಂದ ಸಾಗರಕ್ಕೆ ಬರುವವರು ನಗರ, ಹೊಸನಗರ ಮಾರ್ಗವಾಗಿ ಸಾಗರಕ್ಕೆ ತಲುಪಬೇಕಾಗಿದೆ. ಇನ್ನು, ಹೊಸನಗರ ತಾಲೂಕಿನ ನಿಟ್ಟೂರು, ಸಂಪೆಕಟ್ಟೆ, ಕೊಲ್ಲೂರು ಭಾಗದ ಜನರ ಓಡಾಟಕ್ಕೂ ಅಡಚಣೆಯಾಗಿದೆ.
ಇದನ್ನೂ ಓದಿ- ಶರಾವತಿ ಹಿನ್ನೀರಿನ ಮುಪ್ಪಾನೆ ಲಾಂಚ್ ಸೇವೆ ತಾತ್ಕಾಲಿಕ ಸ್ಥಗಿತ, ಕಾರಣವೇನು?
ಶರಾವತಿ ಹಿನ್ನೀರು ಭಾಗದಲ್ಲಿ ನೀರಿನ ಮಟ್ಟ ಇಳಿಕೆಯಾಗಿದ್ದರಿಂದ ಕೆಲವು ದಿನದ ಹಿಂದೆ ಮುಪ್ಪಾನೆ ಲಾಂಚ್ ಸೇವೆ ಸ್ಥಗಿತಗೊಳಿಸಲಾಗಿತ್ತು. ಈಗ ಹಸಿರುಮಕ್ಕಿ ಲಾಂಚ್ ಸೇವೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಇದರಿಂದ ಸ್ಥಳೀಯರು ತೀವ್ರ ಸಮಸ್ಯೆ ಎದುರಿಸುವಂತಾಗಿದೆ.
<strong>WATCH VIDEO</strong>
ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ