SHIVAMOGGA LIVE | 12 JUNE 2023
TUMARI : ಶರಾವತಿ ಹಿನ್ನೀರು ಭಾಗದಲ್ಲಿ ನೀರಿನ ಮಟ್ಟ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಇದರಿಂದ ಸಿಗಂದೂರು ಲಾಂಚ್ (Sigandur Launch) ಸೇವೆ ಸ್ಥಗಿತಗೊಳ್ಳುವ ಭೀತಿ ಎದುರಾಗಿದೆ. 18 ವರ್ಷದ ಹಿಂದಿನ ಪರಿಸ್ಥಿತಿ ಮರುಕಳಿಸುವ ಆತಂಕ ಸೃಷ್ಟಿಯಾಗಿದೆ.
ಈ ಬಾರಿ ನಿಗದಿಯಂತೆ ಮಳೆಯಾಗದೆ, ಬಿಸಿಲಿನ ಝಳ ಹೆಚ್ಚಿದ್ದರಿಂದ ಶರಾವತಿ ಹಿನ್ನೀರು ಭಾಗದಲ್ಲಿ ನೀರಿನ ಮಟ್ಟ ಸಂಪೂರ್ಣ ಇಳಿಕೆಯಾಗಿದೆ. ಹೊಳೆಯ ಆಳದಲ್ಲಿದ್ದ ಮರಗಳು ಮೇಲೆ ಕಾಣಿಸುತ್ತಿವೆ.
ಲಾಂಚ್ ಸೇವೆ ಸ್ಥಗಿತದ ಭೀತಿ
ಸಾಗರ ತಾಲೂಕು ಅಂಬಾರಗೋಡ್ಲು – ಕಳಸವಳ್ಳಿ ಮಧ್ಯೆ ಲಾಂಚ್ ಸಂಚರಿಸುತ್ತಿವೆ. ಸಿಗಂದೂರು ಶ್ರೀ ಚೌಡೇಶ್ವರಿ ದೇವಸ್ಥಾನಕ್ಕೆ ತೆರಳುವ ಭಕ್ತರು ಇದೆ ಲಾಂಚ್ ಬಳಸುತ್ತಾರೆ. ಶರಾವತಿ ನೀರಿನ ಮಟ್ಟ ಇಳಿಕೆ ಆಗಿರುವುದರಿಂದ ಲಾಂಚ್ ಸೇವೆ ಸ್ಥಗಿತಗೊಳ್ಳುವ ಭೀತಿ ಎದುರಾಗಿದೆ.
ನೀರಿನ ಮಟ್ಟ ಇದೆ ಪ್ರಮಾಣದಲ್ಲಿ ಇಳಿಕೆಯಾದರೆ ಇನ್ನೊಂದು ವಾರದಲ್ಲಿ ಲಾಂಚ್ ಸೇವೆ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಮೊದಲು ಲಾಂಚ್ ಮೇಲೆ ವಾಹನಗಳು ಹಾಕುವುದಕ್ಕೆ ನಿರ್ಬಂಧ ವಿಧಿಸಲಾಗುತ್ತದೆ. ಲಾಂಚ್ನಲ್ಲಿ ಜನರನ್ನು ಮಾತ್ರ ಕರೆದೊಯ್ಯಲಾಗುತ್ತದೆ. ಪರಿಸ್ಥಿತಿ ಬಿಗಡಾಯಿಸಿದರೆ ಲಾಂಚ್ ಸೇವೆಯನ್ನು ಸಂಪೂರ್ಣವಾಗಿ ನಿಲ್ಲಿಸಲಾಗುತ್ತದೆ.
ಪರ್ಯಾಯ ವ್ಯವಸ್ಥೆಗೆ ಸಿದ್ಧತೆ
ಶರಾವತಿ ನದಿಯಲ್ಲಿ ನೀರಿನ ಮಟ್ಟ ಇಳಿಕೆಯಾದರೆ ಆಳದಲ್ಲಿದ್ದ ಮರದ ದಿಮ್ಮಿಗಳು ಲಾಂಚ್ಗೆ ತಾಗುತ್ತವೆ. ಇದರಿಂದ ಲಾಂಚ್ಗೆ ಹಾನಿಯಾಗಬಹುದು. ಅಲ್ಲದೆ ನಡು ನೀರಲ್ಲಿ ಅಪಾಯ ಎದುರಾಗುವ ಸಾಧ್ಯತೆ ಇದೆ. ಈ ಹಿನ್ನೆಲೆ ನೀರಿನ ಮಟ್ಟ ಇಳಿಕೆಯಾಗುತ್ತಿದ್ದಂತೆ ಲಾಂಚ್ ಸೇವೆ ಸ್ಥಗಿತಗೊಳಿಸಲಾಗುತ್ತದೆ. ಇನ್ನೊಂದೆಡೆ, ಸ್ಥಳೀಯರ ಓಡಾಟಕ್ಕೆ ಅನುಕೂಲ ಕಲ್ಪಿಸಲು ಪರ್ಯಾಯ ವ್ಯವಸ್ಥೆ ಮಾಡಲಾಗುತ್ತಿದೆ. ಮೋಟರ್ ಬೋಟ್ ಮತ್ತು ಮಿನಿ ಲಾಂಚ್ ಬಳಕೆಗೆ ಯೋಜಿಸಲಾಗಿದೆ.
ತಾತ್ಕಾಲಿಕ ರ್ಯಾಂಪ್ ನಿರ್ಮಾಣ
ಲಾಂಚ್ಗೆ (Sigandur Launch) ಪ್ರಯಾಣಿಕರು, ವಾಹನಗಳು ಸುಲಭವಾಗಿ ಹತ್ತಲು ಅಂಬಾರಗೋಡ್ಲು ಮತ್ತು ಕಳಸವಳ್ಳಿಯಲ್ಲಿ ಸಿಮೆಂಟ್ ರ್ಯಾಂಪ್ಗಳನ್ನು ನಿರ್ಮಿಸಲಾಗಿದೆ. ನೀರಿನ ಮಟ್ಟ ಇಳಿಕೆಯಾದ್ದರಿಂದ ರ್ಯಾಂಪ್ಗಳು ಲಾಂಚ್ಗೆ ಸಿಗದಂತಾಗಿವೆ. ಹಾಗಾಗಿ ಅಧಿಕಾರಿಗಳು ತಾತ್ಕಾಲಿಕ ರ್ಯಾಂಪ್ಗಳನ್ನು ನಿರ್ಮಿಸಿದ್ದಾರೆ.
ಈ ಬಾರಿ ಮುಂಗಾರು ವಿಳಂಬವಾಗಿದೆ. ಇನ್ನೂ ಮಳೆಯಾಗದೆ ಇದ್ದರೆ ತುಮರಿಗೆ ತಲುಪಲು ಜನರು ಹರಸಾಹಸ ಪಡಬೇಕಾಗುತ್ತದೆ. ಸಿಗಂದೂರು ದೇಗುಲಕ್ಕೆ ಬರುವ ಪ್ರವಾಸಿಗರ ಸಂಖ್ಯೆಯು ದೊಡ್ಡ ಪ್ರಮಾಣದಲ್ಲಿ ಕುಸಿಯಲಿದೆ. 18 ವರ್ಷದ ಹಿಂದೆ ಇದೆ ರೀತಿ ಪರಿಸ್ಥಿತಿ ನಿರ್ಮಾಣವಾಗಿತ್ತು. ಆಗ ಲಾಂಚ್ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು.
ಇದನ್ನೂ ಓದಿ – ಶಿವಮೊಗ್ಗ ಜನ ಶತಾಬ್ದಿ, ಭಾನುವಾರ ರಾತ್ರಿ ಪ್ರಯಾಣಿಕರು ಕಕ್ಕಾಬಿಕ್ಕಿ, ಸೋಮವಾರ ಬೆಳಗ್ಗೆನು ಗೊಂದಲ, ಏನಾಯ್ತು?