ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 8 NOVEMBER 2020
ಸಿಗಂದೂರು ಶ್ರೀ ಚೌಡೇಶ್ವರಿ ದೇವಸ್ಥಾನಕ್ಕೆ ಸರ್ಕಾರ ನೇಮಿಸಿರುವ ಮೇಲುಸ್ತುವಾರಿ ಸಮಿತಿ ಸದ್ಯ ನಾಲ್ಕು ತಿಂಗಳವರೆಗೆ ಮುಂದುವರೆಯಲಿದೆ. ಆ ಬಳಿಕ ಸಮಿತಿ ಇರಬೇಕೊ ಬೇಡವೊ ಅನ್ನುವ ಕುರಿತು ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ಬೆಂಗಳೂರಿನ ಮುಖ್ಯಮಂತ್ರಿ ಗೃಹ ಕಚೇರಿಯಲ್ಲಿ ಹಿಂದುಳಿದ ವರ್ಗಗಳ ಸ್ವಾಮೀಜಿಗಳ ನೇತೃತ್ವದ ನಿಯೋಗ ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಈ ಕುರಿತು ಚರ್ಚಿಸಿದರು.
ಸ್ವಾಮೀಜಿಗಳ ಮನವಿ ಏನು?
- ನಿಟ್ಟೂರು ನಾರಾಯಣಗುರು ಮಹಾಸಂಸ್ಥಾನದ ಶ್ರೀ ರೇಣುಕಾನಂದ ಸ್ವಾಮೀಜಿ ನೇತೃತ್ವದಲ್ಲಿ ಹಿಂದುಳಿದ ವರ್ಗಗಳ 20ಕ್ಕೂ ಹೆಚ್ಚು ಸ್ವಾಮೀಜಿಗಳು ಸಭೆಯಲ್ಲಿ ಭಾಗವಹಿಸಿದ್ದರು.
- ಸಿಗಂದೂರು ದೇವಸ್ಥಾನದ ಮೇಲುಸ್ತುವಾರಿಗೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ರಚಿಸಿರುವ ಸಮಿತಿಯನ್ನು ಪುನರ್ ಪರಿಶೀಲಿಸಬೇಕು.
- ಈಡಿಗ ಸಮುದಾಯದ ಡಾ.ರಾಮಪ್ಪ ನೇತೃತ್ವದಲ್ಲಿ 30 ವರ್ಷದಿಂದ ಸೇವಾ ಕಾರ್ಯದಲ್ಲಿ ತೊಡಗಿರುವ ಧರ್ಮದರ್ಶಿ ಮಂಡಳಿಯನ್ನು ಪರಿಗಣಿಸಬೇಕು.
- ಧರ್ಮದರ್ಶಿ ನೇತೃತ್ವದ ಮಂಡಳಿ ದೇಗುಲವನ್ನು ಧಾರ್ಮಿಕ, ಸಾಮಾಜಿಕ ಚಟುವಟಿಕೆ ಮೂಲಕ ದೇವಸ್ಥಾನದ ಪ್ರಸಿದ್ಧಿಯನ್ನು ಹೆಚ್ಚಿಸಿದೆ.
- ಸಣ್ಣಪುಟ್ಟ ಲೋಪಗಳು ಆಗಿದ್ದರೆ ಅದನ್ನು ಸರಿಪಡಿಸಿಕೊಳ್ಳಲು ಅವಕಾಶ ನೀಡಬೇಕು. ಟ್ರಸ್ಟ್ ಮೂಲಕ ದೇಗುಲದ ಧಾರ್ಮಿಕ ಮತ್ತು ಸಾಮಾಜಿಕ ಚುಟುವಟಿಕೆ ಮುಂದುವರೆಯಲು ಅವಕಾಶ ನೀಡಬೇಕು.
ಸಿಎಂ ಯಡಿಯೂರಪ್ಪ ಹೇಳಿದ್ದೇನು?
ಸ್ವಾಮೀಜಿಗಳ ಮನವಿ ಸ್ವೀಕರಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಪ್ರಮುಖ ಭರವಸೆಗಳನ್ನ ನೀಡಿದ್ದಾರೆ.
- ಸಿಗಂದೂರು ಚೌಡೇಶ್ವರಿ ದೇವಸ್ಥಾನವನ್ನು ಯಾವುದೆ ಕಾರಣಕ್ಕೂ ಮುಜರಾಯಿ ಇಲಾಖೆ ವ್ಯಾಪ್ತಿಗೆ ತರುವುದಿಲ್ಲ. ಈ ಬಗ್ಗೆ ಯಾರೂ ಆತಂಕಪಡುವ ಅಗತ್ಯವಿಲ್ಲ.
- ಭಕ್ತರು ನೀಡುವ ಕಾಣಿಕೆ ಸೇರಿದಂತೆ ಹಲವು ಬಗೆಯ ವಸ್ತುಗಳ ಕುರಿತು ಪಾರದರ್ಶಕತೆ ಕಾಯ್ದುಕೊಳ್ಳಲು ಸಮಿತಿ ರಚಿಸಲಾಗಿದೆ.
- ಸಮಿತಿಗೆ ಶ್ರೀ ರೇಣುಕಾನಂದ ಸ್ವಾಮೀಜಿ ಅವರನ್ನು ಸೇರಿಸಿಕೊಳ್ಳುವಂತೆ ಮನವಿ ಮಾಡಲಾಗಿದ್ದು, ಅದಕ್ಕೆ ಒಪ್ಪಿಗೆ ಇದೆ. ಸ್ವಾಮೀಜಿ ಅವರ ಸಲಹೆ, ಮಾರ್ಗದರ್ಶನವನ್ನು ತೆಗೆದುಕೊಂಡು ಸಮಿತಿ ತನ್ನ ಕಾರ್ಯ ನಿರ್ವಹಿಸಲಿದೆ.
- ಈ ಸಮಿತಿಯು ನಾಲ್ಕು ತಿಂಗಳ ಅವಧಿಗೆ ಕಾರ್ಯನಿರ್ವಹಿಸಲಿದೆ. ಆ ಬಳಿಕ ಸಮಿತಿ ಇರಬೇಕೋ ಬೇಡವೋ ಎಂದು ನಿರ್ಧರಿಸಲಾಗುತ್ತದೆ.
ಬಂಜಾರ ಸಮಾಜದ ಸೇವಾಲಾಲ್ ಸ್ವಾಮೀಜಿ, ಅರೆಮಲ್ಲಾಪುರದ ಶ್ರೀ ಪ್ರಣವಾನಂದ ಸ್ವಾಮೀಜಿ, ಭಗೀರಥ ಮಠದ ಶ್ರೀ ಪುರುಷೋತ್ತಮಾನಂದ ಪುರಿ ಸ್ವಾಮೀಜಿ, ಕುಂಚಿಟಿಗ ಗುರುಪೀಠದ ಶ್ರೀ ಶಾಂತವೀರ ಸ್ವಾಮೀಜಿ, ಹೊಸದುರ್ಗ ಕನಕ ಗುರುಪೀಠದ ಶ್ರೀ ಈಶ್ವರಾನಂದ ಪುರಿ ಸ್ವಾಮೀಜಿ, ತಿಗಳರ ಶ್ರೀ ಲಕ್ಷ್ಮೀನರಸಿಂಹ ಸ್ವಾಮೀಜಿ, ಮಡಿವಾಳ ಸಮಾಜದ ಮಾಚಿದೇವ ಸ್ವಾಮೀಜಿ, ಚಿತ್ರದುರ್ಗದ ಮೇದಾರ ಪೀಠದ ಶ್ರೀ ಬಸವ ಛಲವಾದಿ ಸ್ವಾಮೀಜಿ, ಸಾಗರ ಶಾಸಕ ಹರತಾಳು ಹಾಲಪ್ಪ, ತೀರ್ಥಹಳ್ಳಿಯ ಬೇಗುವಳ್ಳಿ ಸತೀಶ್ ಅವರು ನಿಯೋಗದಲ್ಲಿದ್ದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422