SHIVAMOGGA LIVE NEWS | 25 FEBRURARY 2023
SHIMOGA : ವಿಮಾನ ನಿಲ್ದಾಣ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ. ಈ ನಡುವೆ ವಿಮಾನ ನಿಲ್ದಾಣದವನ್ನು ಕಣ್ತುಂಬಿಕೊಳ್ಳಲು ಜನರು ಗುಂಪು ಗುಂಪಾಗಿ (Visitors) ಆಗಮಿಸುತ್ತಿದ್ದಾರೆ. ಭದ್ರತೆ ದೃಷ್ಟಿಯಿಂದ ಯಾರನ್ನೂ ಒಳಗೆ ಬಿಡದಿರುವುದರಿಂದ ನಿರಾಶರಾಗಿ ಗೇಟ್ ಮುಂದೆಯೇ ನಿಲ್ಲುತ್ತಿದ್ದಾರೆ.
ವಿಮಾನ ನಿಲ್ದಾಣ ಕಾಮಗಾರಿ ಬಹುತೇಕ ಮುಗಿದಿದೆ. ಫೆ.27ರಂದು ಪ್ರಧಾನಿ ನರೇಂದ್ರ ಮೋದಿ ಅವರು ವಿಮಾನ ನಿಲ್ದಾಣವನ್ನು ಲೋಕಾರ್ಪಣೆ ಮಾಡುತ್ತಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆ ಜನರು ತಂಡೋಪ ತಂಡವಾಗಿ ವಿಮಾನ ನಿಲ್ದಾಣದೆಡೆಗೆ ಆಗಮಿಸುತ್ತಿದ್ದಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಇದನ್ನೂ ಓದಿ – ವಿಮಾನ ನಿಲ್ದಾಣದ ರನ್ ವೇ ಪಕ್ಕದಲ್ಲಿ ಶಕ್ತಿಶಾಲಿ ಆಂಜನೇಯ, ಕೊನೆತನಕ ಉಳಿದಿದ್ದ ಗುಡಿ ದಿಢೀರ್ ತೆರವಾಗಿದ್ದೇಕೆ?
ಕುಟುಂಬ ಸಹಿತ ಬರುತ್ತಿದ್ದಾರೆ
ವಿಮಾನ ನಿಲ್ದಾಣ ಕುರಿತು ಜನರಲ್ಲಿ (Visitors) ಸಹಜ ಕುತೂಹಲವಿದೆ. ಟರ್ಮಿನಲ್, ರನ್ ವೇ ನೋಡಬೇಕು, ಫೋಟೊ, ಸೆಲ್ಫಿ ಕ್ಲಿಕ್ಕಿಸಿಕೊಳ್ಳಬೇಕು ಎಂಬ ತವಕವಿದೆ. ಇದೆ ಕಾರಣಕ್ಕೆ ಹಲವರು ತಮ್ಮ ಕುಟುಂಬ, ಸ್ನೇಹಿತರೊಂದಿಗೆ ವಿಮಾನ ನಿಲ್ದಾಣದ ಬಳಿಗೆ ಬರುತ್ತಿದ್ದಾರೆ.
ಗೇಟ್ ಬಳಿ ತಡೆ
ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯಾತಿಗಣ್ಯರು ಆಗಮಿಸುತ್ತಿರುವ ಹಿನ್ನೆಲೆ ವಿಮಾನ ನಿಲ್ದಾಣಕ್ಕೆ ಭಾರಿ ಭದ್ರತೆ ಒದಗಿಸಲಾಗಿದೆ. ಅನಾವಶ್ಯಕವಾಗಿ ಯಾರನ್ನು ಆವರಣದೊಳಗೆ ಬಿಡುತ್ತಿಲ್ಲ. ವಿಮಾನ ನಿಲ್ದಾಣ ನೋಡಬೇಕು ಎಂದು ಬರುವ ಸಾರ್ವಜನಿಕರಿಗೆ ಗೇಟಿನಲ್ಲೆ ತಡೆಯೊಡ್ಡಲಾಗುತ್ತಿದೆ. ನಿರಾಸೆಯಿಂದ ಗೇಟ್ ಬಳಿಯೇ ನಿಂತು ಟರ್ಮಿನಲ್ ಕಟ್ಟಡ, ಉದ್ಘಾಟನಾ ಕಾರ್ಯಕ್ರಮದ ಸಿದ್ಧತೆಗಳನ್ನು ನೋಡಿಕೊಂಡು ಜನರು ತೆರಳುತ್ತಿದ್ದಾರೆ.
‘ಒಂದು ಸರ್ತಿ ಒಳಗೆ ಬಿಡಿ’
ವಿಮಾನ ನಿಲ್ದಾಣದ ಗೇಟ್ ಬಳಿ ಬರುತ್ತಿರುವ ಸಾರ್ವಜನಿಕರು ಒಂದೇ ಒಂದು ಬಾರಿ ಒಳಗೆ ಬಿಡಿ ಎಂದು ಪೊಲೀಸರಿಗೆ ಮನವಿ ಮಾಡುವುದು ಸಾಮಾನ್ಯವಾಗಿದೆ. ಕೆಲವರು ತಮಗೆ ಗೊತ್ತಿರುವ ರಾಜಕಾರಣಿಗಳು, ಅಧಿಕಾರಿಗಳ ಬಳಿ ಫೋನ್ ಮಾಡಿ, ಪ್ರಭಾವ ಬಳಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಆದರೆ ಅನಾವಶ್ಯಕವಾಗಿ ಯಾರನ್ನೂ ಒಳಗೆ ಬಿಡದಿರಲಿ ಖಡಕ್ ಸೂಚನೆ ಇರುವುದರಿಂದ ಪೊಲೀಸರು ಗೇಟ್ ಬಳಿಯೇ ಜನರಿಗೆ ತಡೆಯೊಡ್ಡುತ್ತಿದ್ದಾರೆ.
‘ನಾಳೆಯಿಂದ ಒಳಗೆ ಬಿಡ್ತಾರೋ ಇಲ್ಲವೊ, ಇವತ್ತೆ ಮಗಳಿಗೆ ವಿಮಾನ ನಿಲ್ದಾಣ ತೋರಿಸೋಣ ಅಂತಾ ಬಂದಿದ್ದೆ. ಆದರೆ ಗೇಟ್ ಹತ್ತಿರಕ್ಕು ಬಿಡ್ತಿಲ್ಲ. ಅದಕ್ಕೆ ಇಲ್ಲಿಂದಲೇ ತೋರಿಸಿದೆ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಶಿವಮೊಗ್ಗದ ಸ್ಮಿತಾ. ‘ವಿಮಾನ ನಿಲ್ದಾಣದ ಕೆಲಸ ಪೂರ್ತಿ ಮುಗಿದಿದೆ ಅಂತಾ ಪೇಪರಲ್ಲಿ ಓದಿದೆ. ಅಪ್ಪ, ಅಮ್ಮನಿಗೆ ತೋರಿಸೋಣ ಅಂತಾ ಬಂದೆ. ಐದು ನಿಮಿಷ ಒಳಗೆ ಬಿಟ್ಟರೂ ಸಾಕು’ ಅನ್ನುತ್ತಾರೆ ರಾಜೇಶ್.
ವಿಮಾನ ನಿಲ್ದಾಣದ ಗೇಟ್ ಬಳಿ ಕಾರು, ಬೈಕುಗಳ ಸಂಖ್ಯೆ ಹೆಚ್ಚಾಗಿದೆ. ಪ್ರವಾಸಿಗರು, ಪ್ರಮುಖ ಅಧಿಕಾರಿಗಳು, ರಾಜಕೀಯ ಮುಖಂಡರ ಕಾರುಗಳನ್ನು ನಿಲ್ಲಿಸಲಾಗುತ್ತಿದೆ. ಬೈಕುಗಳ ಸಂಖ್ಯೆಯು ಹೆಚ್ಚಿದೆ. ಸದ್ಯ, ವಿಮಾನ ನಿಲ್ದಾಣ ಜಿಲ್ಲೆಯ ಪ್ರವಾಸಿ ತಾಣಗಳ ಪಟ್ಟಿಗೆ ಸೇರ್ಪಡೆಯಾಗಿದೆ.