ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | PADAYATRE | 06 ಮೇ 2022
ಕೇಂದ್ರ ಮತ್ತು ರಾಜ್ಯ ಸರ್ಕಾರದ ದುರಾಡಳಿತ, ಪಿಎಸ್ಐ ನೇಮಕಾತಿ ಹಗರಣ, ಗೃಹ ಸಚಿವರ ವೈಫಲ್ಯ ಖಂಡಿಸಿ ಕಾಂಗ್ರೆಸ್ ಪಕ್ಷದ ವತಿಯಿಂದ ತೀರ್ಥಹಳ್ಳಿಯಲ್ಲಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಪುತ್ರಿ ಡಾ.ರಾಜನಂದಿನಿ ಅವರು ಪಾದಯಾತ್ರೆಗೆ ಚಾಲನೆ ನೀಡಿದ್ದಾರೆ.
ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ತವರೂರು ಗುಡ್ಡೆಕೊಪ್ಪದಿಂದ ಪಾದಯಾತ್ರೆ ಆರಂಭವಾಗಿದೆ. ಐದು ದಿನ ನಿರಂತರ ಪಾದಯಾತ್ರೆ ನಡೆಯಲಿದೆ. ಮೇ 10ರಂದು ಪಾದಯಾತ್ರೆ ಶಿವಮೊಗ್ಗ ತಲುಪಲಿದೆ.
ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ
ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರ ನೇತೃತ್ವದಲ್ಲಿ ಪಾದಯಾತ್ರೆ ನಡೆಯುತ್ತಿದೆ. ಪಾದಯಾತ್ರೆ ಹಾದಿಯುದ್ದಕ್ಕೂ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ನೇತೃತ್ವದ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಿದ್ದಾರೆ. ಬಿಜೆಪಿ ಸರ್ಕಾರದ ದುರಾಡಳಿತದ ವಿರುದ್ಧ ಜನ ಜಾಗೃತಿ ಮೂಡಿಸುತ್ತಿದ್ದಾರೆ.
ಕಿಮ್ಮನೆ ರತ್ನಾಕರ್ ಹೇಳಿದ್ದೇನು?
ಪಾದಯಾತ್ರೆಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರು, ಗೃಹ ಸಚಿವರು ಆರಗ ಜ್ಞಾನೇಂದ್ರ ಅವರು ಆರಂಭದಿಂದಲೂ ದುರ್ಬಲರಾಗಿದ್ದಾರೆ. ಅವರು ನೀಡುತ್ತಿರುವ ಹೇಳಿಕೆಯೆ ಅದಕ್ಕೆ ಸಾಕ್ಷಿ. ಪಿಎಸ್ಐ ಹಗರಣದಲ್ಲಿ ತೀರ್ಥಹಳ್ಳಿಯ ಮೂವರು ವ್ಯವಹಾರ ಮಾಡಿದ್ದಾರೆ ಎಂಬ ಆಪಾದನೆ ಇದೆ. ಕಮ್ಮರಡಿ ಮತ್ತು ಮಂಡಗದ್ದೆ ಕಡೆಯ ಇಬ್ಬರು ವ್ಯವಹಾರದಲ್ಲಿ ಭಾಗಿದಾರರು ಎಂಬ ಆಪಾದನೆ ಇದೆ. ಇನ್ನೂ ಒಬ್ಬರಿದ್ದಾರೆ. ಈ ಕುರಿತು ವಾಟ್ಸಪ್ ಮೂಲಕ ಮಾಹಿತಿ ಹರಿದಾಡುತ್ತಿದೆ. ಪೊಲೀಸರು ಈ ಕುರಿತು ತನಿಖೆ ನಡೆಸಲಿ ಎಂದರು.
ಬಿಜೆಪಿಯವರು 24 ಗಂಟೆಯು ಮರಳು ಹೊಡೆಯಬಹುದು, ಬಂಡೆ ಒಡೆಯಬಹುದು, ಕಾಡಿನಲ್ಲಿ ಮನೆ ಕಟ್ಟಿಕೊಳ್ಳಬಹುದು. ಬೇರೆಯವರು ಮಾಡಿದರೆ ಕೇಸ್ ದಾಖಲಾಗುತ್ತದೆ. ತಾಲೂಕು ಕಚೇರಿ, ಅರಣ್ಯ ಇಲಾಖೆ ರೇಂಜರ್ ಆಫೀಸು, ಪೊಲೀಸರು ಠಾಣೆಗಳೆಲ್ಲವು ಬಿಜೆಪಿ ಕಚೇರಿಯಾಗಿವೆ ಎಂದು ಆರೋಪಿಸಿದರು
300 ಕೋಟಿಯ ಹಗರಣ
ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಕಾಂಗ್ರೆಸ್ ನಾಯಕಿ ಡಾ.ರಾಜನಂದಿನಿ ಅವರು, ಪಿಎಸ್ಐ ನೇಮಕಾತಿಯದ್ದು 50 ಕೋಟಿಯ ಹಗರಣ ಎಂದುಕೊಂಡಿದ್ದೆವು. ಆದರೆ ಇದು 300 ಕೋಟಿ ರೂ. ನಷ್ಟು ದೊಡ್ಡ ಹಗರಣವಾಗಿದೆ ಎಂದು ನಮ್ಮ ನಾಯಕರಾದ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಪ್ರತಿ ಅಭ್ಯರ್ಥಿಯಿಂದ 40 ಲಕ್ಷದಿಂದ 1 ಕೋಟಿ ರೂ. ವರೆಗೂ ವಸೂಲಿ ಮಾಡಿದ್ದಾರೆ. ಪ್ರಮಾಣಿಕ ಅಭ್ಯರ್ಥಿಗಳಿಗೆ ಸಮಸ್ಯೆ ಉಂಟಾಗಿದೆ. ಈಗ ಮರು ಪರೀಕ್ಷೆ ಮಾಡಿದರೆ ತೀವ್ರ ಸಮಸ್ಯೆ ಆಗುತ್ತದೆ ಎಂದು ಬಡ ಮಕ್ಕಳು ನೋವು ತೋಡಿಕೊಳ್ಳುತ್ತಿದ್ದಾರೆ. ಇದಕ್ಕೆಲ್ಲ ಗೃಹ ಸಚಿವರೆ ಹೊಣೆ ಎಂದು ಆಪಾದಿಸಿದರು.
ಐದು ದಿನದ ಪಾದಯಾತ್ರೆಯಲ್ಲಿ ಜನ ಜಾತ್ರೆ ಕಾಣುತ್ತಿದೆ. ಅಕ್ರಮಗಳು, ಬಿಜೆಪಿ ಸರ್ಕಾರದ ದುರಾಡಳಿತದ ಕುರಿತು ಜನರಿಗೆ ತಿಳಿಸುತ್ತಾ ಹೋಗುತ್ತೇವೆ. ಕಿಮ್ಮನೆ ರತ್ನಾಕರ್ ಅವರು ಅದರ ರೂವಾರಿಯಾಗಿದ್ದಾರೆ ಎಂದರು.
ಐದು ದಿನದ ಪಾದಯಾತ್ರೆ
ಇವತ್ತು ಗುಡ್ಡೆಕೊಪ್ಪದಿಂದ ಪಾದಯಾತ್ರೆ ಆರಂಭವಾಗಿದೆ. ತೀರ್ಥಹಳ್ಳಿಯ ಹೊದಲ ಮಾರ್ಗವಾಗಿ ಬೆಜ್ಜವಳ್ಳಿಗೆ ತಲುಪಲಿದೆ. ಅಲ್ಲಿಂದ ಮಂಡಗದ್ದೆ ಮೂಲಕ ಮೇ 10ರಂದು ಶಿವಮೊಗ್ಗ ತಲುಪಲಿದೆ. ಮೇ 10ರಂದು ಕಾಂಗ್ರೆಸ್ ಪಕ್ಷದ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಕೆಪಿಸಿಸಿ ಡಿ.ಕೆ.ಶಿವಕುಮಾರ್ ಸೇರಿದಂತೆ ಹಿರಿಯ ನಾಯಕರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಪಾದಯಾತ್ರೆಯಲ್ಲಿ ಆಗಮಿಸುವವರು ಈ ಪ್ರತಿಭಟನೆಯಲ್ಲಿ ಸೇರಲಿದ್ದಾರೆ.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಗ್ರಾಮ ಪಂಚಾಯಿತಿ 5 ಸ್ಥಾನಕ್ಕೆ ಚುನಾವಣೆ, ನೀತಿ ಸಂಹಿತೆ ಜಾರಿ, ಹೇಗಿರುತ್ತೆ ಪ್ರಕ್ರಿಯೆ?
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422