ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗದ ಲೈವ್.ಕಾಂ | THIRTHAHALLI NEWS | 30 ಡಿಸೆಂಬರ್ 2021
ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಅತಿಥಿ ಉಪನ್ಯಾಸಕರು ತೀರ್ಥಹಳ್ಳಿಯಿಂದ ಬೆಂಗಳೂರಿನ ವಿಧಾನಸೌಧದವರೆಗೆ ಪಾದಯಾತ್ರೆ ನಡೆಸುತ್ತಿದ್ದಾರೆ. ಇವತ್ತು ಪಾದಯಾತ್ರೆ ಎರಡನೇ ದಿನ ಪೂರ್ಣಗೊಳಿಸಿದ್ದು, ನಾಳೆ ಶಿವಮೊಗ್ಗಕ್ಕೆ ಪ್ರವೇಶಿಸಲಿದೆ.
ಅತಿಥಿ ಉಪನ್ಯಾಸಕರ ಸಂಘಟನೆಗಳ ಒಕ್ಕೂಟದ ವತಿಯಿಂದ ಪಾದಯಾತ್ರೆ ನಡೆಸಲಾಗುತ್ತಿದೆ. ತೀರ್ಥಹಳ್ಳಿಯಲ್ಲಿ ಹಲವು ವಿದ್ಯಾರ್ಥಿ ಸಂಘಟನೆಗಳು, ವಿದ್ಯಾರ್ಥಿಗಳು, ಸಾರ್ವಜನಿಕರು ಪಾದಯಾತ್ರೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಪಾದಯಾತ್ರೆಗೆ ಕಾರಣವೇನು?
ಸೇವಾ ಭದ್ರತೆಗೆ ಆಗ್ರಹಿಸಿ ಅತಿಥಿ ಉಪನ್ಯಾಸಕರು ಹಲವು ವರ್ಷದಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಈತನಕ ಸರ್ಕಾರ ಯಾವುದೆ ಕ್ರಮ ಕೈಗೊಂಡಿಲ್ಲ. ಇತ್ತೀಚೆಗೆ ಅತಿಥಿ ಉಪನ್ಯಾಸಕ ಹರ್ಷಾ ಶಾನುಭೋಗ್ ಅವರು ಆರ್ಥಿಕ ಸಮಸ್ಯೆಯಿಂದಾಗಿ ನೊಂದು ಅತ್ಮಹತ್ಯೆ ಮಾಡಿಕೊಂಡಿದ್ದರು. ಹಾಗಾಗಿ ಸೇವಾ ಭದ್ರತೆ ಮತ್ತು ಹರ್ಷ ಶಾನುಭೋಗ್ ಕುಟುಂಬಕ್ಕೆ ನೆರವು ನೀಡಬೇಕು ಎಂದು ಆಗ್ರಹಿಸಿ ಪಾದಯಾತ್ರೆ ಆರಂಭಿಸಲಾಗಿದೆ.
ಯಾರೆಲ್ಲ ಪಾಲ್ಗೊಳ್ಳುತ್ತಿದ್ದಾರೆ?
ತೀರ್ಥಹಳ್ಳಿಯಿಂದ ವಿಧಾನಸೌಧದವರೆಗಿನ ಪಾದಯಾತ್ರೆಯಲ್ಲಿ ರಾಜ್ಯದ ವಿವಿಧೆಡೆಯ ಅತಿಥಿ ಉಪನ್ಯಾಸಕರು ಪಾಲ್ಗೊಳ್ಳಲಿದ್ದಾರೆ. ತೀರ್ಥಹಳ್ಳಿ, ಶಿವಮೊಗ್ಗದ ಅತಿಥಿ ಉಪನ್ಯಾಸಕರ ಜೊತೆಗೆ, ಕಲಬುರಗಿ, ಬೀದರ್, ಬಿಜಾಪುರ, ಯಾದಗಿರಿ, ರಾಯಚೂರು, ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಕೊಪ್ಪ, ಬಳ್ಳಾರಿ, ಚಿಕ್ಕಮಗಳೂರು, ಹಾವೇರಿ, ಉತ್ತರ ಕನ್ನಡ, ದಾವಣಗೆರೆ, ಹಾಸನ, ಚಿತ್ರದುರ್ಗ, ಉಡುಪಿ, ದಕ್ಷಿಣ ಕನ್ನಡ, ಕೊಡಗು, ಚಿಕ್ಕಬಳ್ಳಾಪುರ, ವಿಜಯಪುರ, ಮಂಡ್ಯ, ತುಮಕೂರು, ಕೋಲಾರ, ರಾಮನಗರ, ಮೈಸೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರದ ಅತಿಥಿ ಉಪನ್ಯಾಸಕರು ಹಂತ ಹಂತವಾಗಿ ಪಾದಯಾತ್ರೆಯಲ್ಲಿ ಜೊತೆಯಾಗಲಿದ್ದಾರೆ.
ಯಡೂರಿನಿಂದ ಪಾದಯಾತ್ರೆ ಶುರು
ಆತ್ಮಹತ್ಯೆ ಮಾಡಿಕೊಂಡ ಅತಿಥಿ ಉಪನ್ಯಾಸಕ ಹರ್ಷ ಶಾನುಭೋಗ್ ಅವರ ಮನೆಯಿಂದ ಪಾದಯಾತ್ರೆ ಆರಂಭಿಸಲಾಯಿತು. ಮಾಸ್ತಿಕಟ್ಟೆ ಸಮೀಪದ ಯಡೂರಿನಿಂದ ಪಾದಯಾತ್ರೆ ಶುರುವಾಗಿದೆ. ಮೊದಲ ದಿನ ಪಾದಯಾತ್ರೆ ತೀರ್ಥಹಳ್ಳಿ ತಲುಪಿತು. ಇವತ್ತು ತೀರ್ಥಹಳ್ಳಿಯಿಂದ ಮಂಡಗದ್ದೆವರೆಗೆ ಪಾದಯಾತ್ರೆ ನಡೆಯಿತು.
ಡಿ.31ರಂದು ಪಾದಯಾತ್ರೆ ಶಿವಮೊಗ್ಗಕ್ಕೆ ತಲುಪಲಿದೆ. ಮರುದಿನ ಶಿವಮೊಗ್ಗದಿಂದ ಭದ್ರಾವತಿವರೆಗೆ, ಬಳಿಕ ತರೀಕೆರೆ, ಕಡೂರು, ಬಾಣವರ, ಅರಸೀಕೆರೆ, ತಿಪಟೂರು, ಕೆ.ಬಿ.ಕ್ರಾಸ್, ಗುಬ್ಬಿ, ತುಮಕೂರು, ನಂದಿಗ್ರಾಮ, ನೆಲಮಂಗಲ, ಯಶವಂತಪುರ ತಲುಪಲಿದೆ. ಜನವರಿ 13ರಂದು ಪಾದಯಾತ್ರೆ ವಿಧಾನಸೌಧಕ್ಕೆ ತಲುಪಲಿದೆ.
ತೀರ್ಥಹಳ್ಳಿಯಲ್ಲಿ ವಿದ್ಯಾರ್ಥಿಗಳ ಬೆಂಬಲ
ಇವತ್ತು ತೀರ್ಥಹಳ್ಳಿಯಿಂದ ಮಂಡಗದ್ದೆವರೆಗೆ ಪಾದಯಾತ್ರೆ ನಡೆಯಿತು. ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ವಿದ್ಯಾರ್ಥಿಗಳು ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು, ಎಬಿವಿಪಿ ಸಂಘಟನೆಯ ಕಾರ್ಯಕರ್ತರು, ನಾಗರೀಕರು ಕೂಡ ಅತಿಥಿ ಉಪನ್ಯಾಸಕರ ಪಾದಯಾತ್ರೆಯಲ್ಲಿ ಜೊತೆಯಾದರು. ಸರ್ಕಾರ ಕೂಡಲೆ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಒದಗಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆ, ತರಗತಿಗಳು ಸ್ಥಗಿತ
ರಾಜ್ಯದಲ್ಲಿ ಸುಮಾರು 14 ಸಾವಿರ ಅತಿಥಿ ಉಪನ್ಯಾಸರು ವಿವಿಧ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸೇವಾ ಭದ್ರತೆಗೆ ಆಗ್ರಹಿಸಿ ಕಳೆದ 20 ದಿನದಿಂದ ನಿರಂತರ ಪ್ರತಿಭಟನೆ ನಡೆಸುತ್ತಿದ್ದಾರೆ. ಅತಿಥಿ ಉಪನ್ಯಾಸಕರು ತರಗತಿಗಳನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸುತ್ತಿರುವುದರಿಂದ, ವಿದ್ಯಾರ್ಥಿಗಳಿಗೆ ಪಾಠಗಳು ಮುಂದುವರೆಯುತ್ತಿಲ್ಲ. ಪರೀಕ್ಷೆಗಳು ಹತ್ತಿರುವಾಗುತ್ತಿದ್ದರೂ ತರಗತಿ ನಡೆಯುದೆ ಶಿಕ್ಷಣ ವಂಚಿತರಾಗುತ್ತಿದ್ದಾರೆ.
ಬೆಳಗಾವಿ ಅಧಿವೇಶನದ ಸಂದರ್ಭ ಸುವರ್ಣ ವಿಧಾನಸೌಧದ ಮುಂದೆಯು ಅತಿಥಿ ಉಪನ್ಯಾಸಕರು ಪ್ರತಿಭಟನೆ ನಡೆಸಿದ್ದರು. ಆದರೆ ಇವರ ಬೇಡಿಕೆಗಳು ಈಡೇರಿಸುವತ್ತ ಸರ್ಕಾರ ಸದನದಲ್ಲಿ ಚರ್ಚೆ ನಡೆಸಲಿಲ್ಲ. ಇದೆ ಕಾರಣಕ್ಕೆ ಅತಿಥಿ ಉಪನ್ಯಾಸಕರು ನಿತ್ಯ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಮಧ್ಯೆ ಅತಿಥಿ ಉಪನ್ಯಾಸಕ ಹರ್ಷ ಶಾನುಭೋಗ್ ಅವರ ಅತ್ಮಹತ್ಯೆ ಪ್ರಕರಣ ಹೋರಾಟದ ದಿಕ್ಕು ಬದಲಿಸಿದೆ. ಅತಿಥಿ ಉಪನ್ಯಾಸಕರು ತರಗತಿ ಬಹಿಷ್ಕರಿಸಿ ಬೆಂಗಳೂರಿನವರೆಗೆ ಪಾದಯಾತ್ರೆ ನಡೆಸುತ್ತಿದ್ದಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422