ಶಿವಮೊಗ್ಗದ ಲೈವ್.ಕಾಂ | THIRTHAHALLI NEWS | 31 ಡಿಸೆಂಬರ್ 2021
ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಸರ್ಕಾರಿ ಶಾಲೆ ಮಕ್ಕಳು ಆಕ್ರೋಶ ವ್ಯಕ್ತಪಡಿಸಿ, ದಿಢೀರ್ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ಇದರಿಂದ ಶಿವಮೊಗ್ಗ ತೀರ್ಥಹಳ್ಳಿ ಹೆದ್ದಾರಿಯಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಸಂಚಾರ ವ್ಯತ್ಯಯ ಉಂಟಾಯಿತು. ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಮಧ್ಯ ಪ್ರವೇಶ ಮಾಡಿದ್ದರಿಂದ ವಿದ್ಯಾರ್ಥಿಗಳು ಪ್ರತಿಭಟನೆ ಹಿಂಪಡೆದರು.
ಮಾಳೂರು ಸರ್ಕಾರಿ ಶಾಲೆ ವಿದ್ಯಾರ್ಥಿಗಳು, ಪೋಷಕರು, ಸ್ಥಳೀಯರು ಇವತ್ತು ಪ್ರತಿಭಟನೆ ನಡೆಸಿದರು. ತರಗತಿ ಬಹಿಷ್ಕರಿಸಿ ರಾಷ್ಟ್ರೀಯ ಹೆದ್ದಾರಿ ಮೇಲೆ ಬಂದು ಕುಳಿತು ಪ್ರತಿಭಟನೆ ನಡೆಸಿದರು. ಅರಣ್ಯಾಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.
ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವೇನು?
ಮಾಳೂರು ಸರ್ಕಾರಿ ಶಾಲೆಯು ಅರಣ್ಯ ಇಲಾಖೆ ವ್ಯಾಪ್ತಿಗೆ ಒಳಪಡಲಿದೆ. ಆದ್ದರಿಂದ ಶಾಲೆಯನ್ನು ತೆರವು ಮಾಡಬೇಕಾಗುತ್ತದೆ ಎಂದು ಮಂಡಗದ್ದೆ ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಇದು ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಐವತ್ತು ವರ್ಷಕ್ಕಿಂತಲೂ ಹಳೆಯ ಶಾಲೆಯ ಜಾಗವನ್ನು ಈಗ ಅರಣ್ಯ ಇಲಾಖೆ ಅಧಿಕಾರಿಗಳು ತಮ್ಮದೆಂದು ತೆರವು ಮಾಡಲು ಮುಂದಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಇದೆ ಕಾರಣಕ್ಕೆ ಇವತ್ತು ವಿದ್ಯಾರ್ಥಿಗಳು ರಸ್ತೆಗಿಳಿದಿದ್ದರು.
‘ಭೂಗಳ್ಳರ ಜೊತೆಗೆ ಶಾಮೀಲು’
ಅರಣ್ಯ ಇಲಾಖೆ ಅಧಿಕಾರಿಗಳು ಭೂಗಳ್ಳರಿಗೆ ನೆರವು ನೀಡಲು ಸರ್ಕಾರಿ ಶಾಲೆಯನ್ನು ತೆರವು ಮಾಡಲು ಮುಂದಾಗಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ಮುಖಂಡ ಅಶೋಕ ಮೂರ್ತಿ ಅವರು, ‘ನಮ್ಮ ಭೂಮಿಯನ್ನು ಅತಿಕ್ರಮ ಮಾಡುವ ಹುನ್ನಾರ ನಡೆಯುತ್ತಿದೆ. ಇದರಲ್ಲಿ ಬರುವ ಲಕ್ಷ ಲಕ್ಷ ಹಣದಲ್ಲಿ ಅರಣ್ಯ ಇಲಾಖೆಗೂ ಒಂದು ಪಾಲು ಇದೆ. ಹಾಗಾಗಿ ನಾವು ಸ್ಥಳೀಯರು, SDMC ಸದಸ್ಯರೆಲ್ಲ ಸೇರಿ ಶಾಲೆ ಸುತ್ತಲು ಟ್ರಂಚ್ ಹೊಡೆಸುತ್ತಿದ್ದೇವೆ. ಇದನ್ನು ನೋಡಿ ಅರಣ್ಯ ಇಲಾಖೆ ಅಧಿಕಾರಿಗಳ ಹೊಟ್ಟೆಯಲ್ಲಿ ಬೆಂಕಿ ಬಿದ್ದ ಹಾಗೆ ಆಗಿದೆ. ಹಾಗಾಗಿ ಈಗ ಶಾಲೆ ತೆರವು ಮಾಡುವಂತೆ ಬಂದಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅರಣ್ಯಾಧಿಕಾರಿಗಳ ಜೊತೆಗೆ ವಾಗ್ವಾದ
ಇನ್ನು, ಸ್ಥಳಕ್ಕೆ ಆಗಮಿಸಿದ ಮಂಡಗದ್ದೆ ವಲಯ ಅರಣ್ಯ ಇಲಾಖೆ ಅಧಿಕಾರಿಗಳ ಜೊತೆಗೆ ಪ್ರತಿಭಟನಾಕಾರರು ವಾಗ್ವಾದ ನಡೆಸಿದರು. ‘ಸರ್ವೆ ಪ್ರಕಾರ ಶಾಲೆಯು ಅರಣ್ಯ ಇಲಾಖೆ ವ್ಯಾಪ್ತಿಗೆ ಬರಲಿದೆ’ ಎಂದು ಅರಣ್ಯಾಧಿಕಾರಿಗಳು ತಿಳಿಸಿದರು. ಆದರೆ ‘ಸರ್ವೆ ನಂಬರ್ ಬದಲಾಗಿದ್ದು, ಸರಿಯಾಗಿ ಪರಿಶೀಲಿಸಬೇಕು. ಯಾರಿಗೂ ಗೊತ್ತಾಗದೆ ಸರ್ವೆ ನಡೆಸಿದ್ದು ಯಾವಾಗ?’ ಎಂದು ಸ್ಥಳೀಯರು ಪ್ರಶ್ನಿಸಿದರು. ಇದರಿಂದ ಕೆಲ ಹೊತ್ತು ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಗೃಹ ಸಚಿವರಿಂದ ಫೋನ್ ಕರೆ
ಇನ್ನು, ಮಾಳೂರು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ರಸ್ತೆ ತಡೆ ನಡೆಸಿರುವ ವಿಚಾರ ತಿಳಿಯುತ್ತಿದ್ದಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಕರೆ ಮಾಡಿ ಮಾಹಿತಿ ಪಡೆದರು. ಅರಣ್ಯಾಧಿಕಾರಿಗಳ ಜೊತೆಗೆ ಫೋನ್ ಮೂಲಕ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು, ‘ಯಾವುದೆ ಕಾರಣಕ್ಕೂ ಶಾಲೆಗೆ ತೊಂದರೆ ಮಾಡಬಾರದು. ಹಾಗೇನಾದರೂ ಮಾಡಿದಲ್ಲಿ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಸಿದರು. ಆ ಬಳಿಕ ವಿದ್ಯಾರ್ಥಿಗಳು ಪ್ರತಿಭಟನೆ ಕೈ ಬಿಟ್ಟರು.
ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್
ವಿದ್ಯಾರ್ಥಿಗಳು ದಿಢೀರ್ ರಸ್ತೆ ತಡೆ ನಡೆಸಿದ್ದರಿಂದ ಶಿವಮೊಗ್ಗ ತೀರ್ಥಹಳ್ಳಿ ಮಧ್ಯೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಯಿತು. ರಸ್ತೆಯ ಎರಡೂ ಬದಿಯಲ್ಲಿ ವಾಹನಗಳು ಸರತಿಯಲ್ಲಿ ನಿಂತಿದ್ದವು. ಪ್ರತಿಭಟನೆ ಬಳಿಕ ವಾಹನಗಳ ಸಂಚಾರ ಸಹಜ ಸ್ಥಿತಿಗೆ ಬರಲು ಒಂದು ಗಂಟೆಗೂ ಹೆಚ್ಚು ಹೊತ್ತು ಹಿಡಿಯಿತು.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200