ಶಿವಮೊಗ್ಗದ ಲೈವ್.ಕಾಂ | SHIMOGA NEWS | 3 ಫೆಬ್ರವರಿ 2022
ಹಾವಿನ ಮೇಲೆ ಹತ್ತುವುದನ್ನು ತಪ್ಪಿಸಲು ಹೋಗಿ ಕಾರೊಂದು ತುಂಗಾ ಚಾನೆಲ್’ನಲ್ಲಿ ಮುಳುಗಿದೆ. ಘಟನೆಯಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ.
ಶಿವಮೊಗ್ಗ ತಾಲೂಕು ಗಾಜನೂರು ಬಳಿ ಇವತ್ತು ಬೆಳಗಿನ ಜಾವ ಘಟನೆ ಸಂಭವಿಸಿದೆ. ಚಾನಲ್’ಗೆ ಬೀಳುತ್ತಿದ್ದಂತೆ ಕಾರಿನಲ್ಲಿದ್ದ ದಂಪತಿ ರಕ್ಷಣೆಗಾಗಿ ಕೂಗಿಕೊಂಡಿದ್ದಾರೆ. ಬಹು ಹೊತ್ತು ಯಾರೂ ಬಾರದಿದ್ದರಿಂದ ಮಹಿಳೆ ಸಾವನ್ನಪ್ಪಿದ್ದಾರೆ.
ಸುಷ್ಮಾ (28) ಮೃತ ಮಹಿಳೆ. ನವೋದಯ ಶಾಲೆಯಲ್ಲಿ ಅವರು ಕೆಲಸ ಮಾಡುತ್ತಿದ್ದರು. ಪತಿ ಚೇತನ್ ಕುಮಾರ್ ಜೊತೆಗೆ ಕಾರಿನಲ್ಲಿ ತುಮಕೂರಿಗೆ ತೆರಳುತ್ತಿದ್ದರು. ಈ ವೇಳೆ ಅವಘಡ ಸಂಭವಿಸಿದೆ.
ಹೇಗಾಯ್ತು ಘಟನೆ?
ಚೇತನ್ ಅವರ ತಾಯಿ ತುಮಕೂರಿನಲ್ಲಿದ್ದಾರೆ. ಅವರಿಗೆ ಎದೆ ನೋವು ಕಾಣಿಸಿಕೊಂಡಿರುವ ಬಗ್ಗೆ ಮಾಹಿತಿ ಬಂದಿತ್ತು. ಆದ್ದರಿಂದ ಚೇತನ್ ಕುಮಾರ್ ತಮ್ಮ ಪತ್ನಿ ಸುಷ್ಮಾ ಅವರೊಂದಿಗೆ ಬೆಳಗಿನ ಜಾವ ಕಾರಿನಲ್ಲಿ ಹೊರಟಿದ್ದಾರೆ. ನವೋದಯ ಶಾಲೆ ಕ್ವಾರ್ಟರ್ಸ್’ನಲ್ಲಿದ್ದ ಮನೆಯಿಂದ ಇಬ್ಬರು ಹೊರಟಿದ್ದಾರೆ.
ತುಂಗಾ ಎಡದಂಡೆ ನಾಲೆ ಪಕ್ಕದ ರಸ್ತೆ ಮೇಲೆ ಕಾರು ಚಲಿಸುತ್ತಿತ್ತು. ಈ ವೇಳೆ ಒಂದು ಹಾವು ದಿಢೀರ್ ರಸ್ತೆಗೆ ಬಂದಿದೆ ಎಂದು ಹೇಳಲಾಗುತ್ತಿದೆ. ಹಾವಿನ ಮೇಲೆ ಕಾರು ಹತ್ತುವುದನ್ನು ತಪ್ಪಿಸಲು ಹೋಗಿ ಚೇತನ್ ಅವರು ಕಾರನ್ನು ಪಕ್ಕಕ್ಕೆ ತಿರುಗಿಸಿದ್ದಾರೆ. ವೇಗದಲ್ಲಿದ್ದ ಕಾರು ನಿಯಂತ್ರಣ ತಪ್ಪಿ ಚಾನಲ್’ಗೆ ಬಿದ್ದಿದೆ.
ರಕ್ಷಣೆಗಾಗಿ ಬಹು ಹೊತ್ತು ಕೂಗಿದರು
ಚಾನೆಲ್’ಗೆ ಬಿದ್ದು ಕಾರು ಮುಳುಗುತ್ತಿದ್ದಂತೆ ಚೇತನ್ ಕುಮಾರ್ ಬಾಗಿಲು ತೆಗೆದು ಹೊರಗೆ ಬಂದಿದ್ದಾರೆ. ಪತ್ನಿಯ ಕಡೆಯ ಬಾಗಿಲನ್ನು ತೆಗೆದು ಅವರನ್ನು ಹೊರಗೆಳೆದಿದ್ದಾರೆ ಎಂದು ಹೇಳಲಾಗುತ್ತಿದೆ. ಬಳಿಕ ಇಬ್ಬರೂ ರಕ್ಷಣೆಗಾಗಿ ಕೂಗಿಕೊಂಡಿದ್ದಾರೆ. ಸುಮಾರು ಒಂದು ಗಂಟೆಯ ಬಳಿಕ ಗಾಜನೂರು ಗ್ರಾಮಸ್ಥರಾದ ಮಂಜುಳಾ, ವಾಸುದೇವ್, ಜ್ಯೋತಿ, ಶಿವರಾಜ್ ಅವರು ಶಬ್ದ ಕೇಳಿ ನಾಲೆ ಬಳಿಗೆ ಬಂದಿದ್ದಾರೆ.
ನೀರಿನಲ್ಲೇ ಸುಷ್ಮಾ ಕೊನೆಯುಸಿರು
ಒಂದು ಗಂಟೆಗೂ ಹೆಚ್ಚು ಹೊತ್ತು ನೀರಿನಲ್ಲಿದ್ದ ಸುಷ್ಮಾ, ಅಲ್ಲಿಯೇ ಪ್ರಾಣ ಬಿಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸುಷ್ಮಾ ನೀರು ಕುಡಿದು ಮೃತಪಟ್ಟಿರುವ ಸಾದ್ಯತೆ ಇದೆ. ಸ್ಥಳೀಯರು ಬಂದು ಸುಷ್ಮಾ ಮತ್ತು ಚೇತನ್ ಕುಮಾರ್ ಅವರ ರಕ್ಷಣೆ ಮಾಡಿದ್ದಾರೆ. ಆ ಹೊತ್ತಿಗಾಗಲೆ ಸುಷ್ಮಾ ಪ್ರಜ್ಞಾಹೀನರಾಗಿದ್ದರು.
ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
About Shivamogga Live | Shimoga District Profile