ಶಿವಮೊಗ್ಗ ಲೈವ್.ಕಾಂ | SHIMOGA | 10 ಜನವರಿ 2020
ಸತತವಾಗಿ ಶಾಲೆಗೆ ಗೈರಾಗುತ್ತಿರುವ ವಿದ್ಯಾರ್ಥಿಗಳು, ಹಾಜರಾತಿಗೆ ಸಹಿ ಹಾಕಿ ಶಾಲೆಯಿಂದ ಹೊರ ಹೋದ ಶಿಕ್ಷಕ. ಶಾಲಾ ಕಟ್ಟಡ ನಿರ್ವಹಣೆಯಿಲ್ಲದೆ ಶಿಥಿಲಗೊಂಡಿರುವುದು. ಇದೆಲ್ಲ ಉಪಲೋಕಾಯುಕ್ತರ ಅನಿರೀಕ್ಷಿತ ಶಾಲಾ ಭೇಟಿ ಸಂದರ್ಭದಲ್ಲಿ ಈ ಕಂಡುಬಂದ ಸಂಗತಿಗಳು.

ಉಪಲೋಕಾಯುಕ್ತ ಬಿ.ಎಸ್.ಪಾಟೀಲ್ ಅನಿರೀಕ್ಷಿತವಾಗಿ ಶಿವಮೊಗ್ಗದಲ್ಲಿ ಸರ್ಕಾರಿ ಶಾಲೆ, ಆಸ್ಪತ್ರೆ, ಹಾಸ್ಟೆಲ್’ಗಳಿಗೆ ದಿಢೀರ್ ಭೇಟಿ ನೀಡಿದ ಸಂದರ್ಭದಲ್ಲಿ ಕೆಲ ವಿಷಯಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಅದೇ ಸಮಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದರು.
ಜಿಪಂ ಸಭಾಂಗಣದಲ್ಲಿ ಅರ್ಧ ಗಂಟೆ ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಉಪಲೋಕಾಯುಕ್ತರು, ಸಾರ್ವಜನಿಕರಿಗೆ ಸರ್ಕಾರದ ಸವಲತ್ತು ನ್ಯಾಯಬದ್ಧವಾಗಿ ಕಾರ್ಯ ತಲುಪಿಸಿ, ಆಗ ಲೋಕಾಯುಕ್ತಕ್ಕೆ ಸಲ್ಲಿಕೆಯಾಗುವ ದೂರುಗಳ ಸಂಖ್ಯೆ ಕಡಿಮೆ ಆಗುತ್ತದೆ ಎಂದು ಸೂಚನೆ ನೀಡಿದರು.
ಬಳಿಕ ವಿವಿಧೆಡೆ ಭೇಟಿಗೆ ತೆರಳಿದರು, ಜಿಲ್ಲಾಧಿಕಾರಿ, ಜಿಪಂ ಸಿಇಒಗೂ ತಾವು ಎಲ್ಲಿಗೆ ತೆರಳುತ್ತಿದ್ದೇವೆ ಎಂಬುದರ ಗುಟ್ಟು ಬಿಟ್ಟು ಕೊಡಲಿಲ್ಲ.
ಶಾಲೆಯಿಂದ ಹೊರಗುಳಿದ ಮಕ್ಕಳು
ಗಾಡಿಕೊಪ್ಪ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮೊದಲು ಶಿಕ್ಷಕರ ಹಾಜರಾತಿ ಪುಸ್ತಕ ತರಿಸಿಕೊಂಡು ಎಲ್ಲ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆಯೇ ಎಂದು ಉಪ ಲೋಕಾಯುಕ್ತ ಬಿ.ಎಸ್.ಪಾಟೀಲ್ ಪರಿಶೀಲಿಸಿದರು. ಈ ವೇಳೆ ಶಿಕ್ಷಕರೊಬ್ಬರು ಸಹಿ ಹಾಕಿ ಹೊರ ಹೋಗಿರುವುದು ಬೆಳಕಿಗೆ ಬಂತು. ಶಾಲೆಯಲ್ಲಿ ವಿದ್ಯುತ್ ಸಂಪರ್ಕದ ಸಮಸ್ಯೆಯಿತ್ತು. ಹೀಗಾಗಿ ಮೆಸ್ಕಾಂ ಅಧಿಕಾರಿಗಳನ್ನು ಭೇಟಿಯಾಗಲು ಶಿಕ್ಷಕ ತೆರಳಿದ್ದಾರೆ ಎಂದು ಶಾಲೆ ಸಿಬ್ಬಂದಿ ಹೇಳಿದರೂ ಉಪ ಲೋಕಾಯುಕ್ತರು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.

ಬಳಿಕ ಮಕ್ಕಳ ಹಾಜರಾತಿ ಪರಿಶೀಲನೆ ವೇಳೆ 8ನೇ ತರಗತಿಯ ಮೂವರು ಮಕ್ಕಳು ಸತತವಾಗಿ ಗೈರಾಗುತ್ತಿರುವುದು ಗಮನಕ್ಕೆ ಬಂತು. ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮತ್ತೆ ಕರೆ ತರಲು ಕೈಗೊಂಡ ಕ್ರಮಗಳು, ಪಾಲಕರಿಗೆ ನೋಟಿಸ್ ನೀಡಿರುವುದರ ಪ್ರತಿಯನ್ನು ಉಪಲೋಕಾಯುಕ್ತರು ಪಡೆದುಕೊಂಡರು. ಬಿಸಿಯೂಟ, ದಿನಸಿ ಹಾಗೂ ಪಡಿತರ ಸಂಗ್ರಹದ ರಿಜಿಸ್ಟರ್ ಪರಿಶೀಲಿಸಿದರು. ಶಾಲೆ ಕಟ್ಟಡ ಶಿಥಿಲಗೊಂಡಿರುವ ಬಗ್ಗೆ ಡಿಡಿಪಿಐ ಎಚ್.ಮಂಜುನಾಥ್ ಬಳಿ ಅಸಮಾಧಾನ ವ್ಯಕ್ತಪಡಿಸಿದರು.




ವಿದ್ಯಾರ್ಥಿನಿಯರ ಹಾಸ್ಟೆಲ್ ಬಗ್ಗೆ ಮೆಚ್ಚುಗೆ
ಬಾಪೂಜಿ ನಗರದ ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿ ನಿಲಯಕ್ಕೆ ಭೇಟಿ ನೀಡಿದ ಬಿ.ಎಸ್.ಪಾಟೀಲ್, ಮಕ್ಕಳ ಕೋಣೆ, ಶೌಚಗೃಹ, ಅಡುಗೆ ಮನೆ, ವಿದ್ಯುತ್ ಸಂಪರ್ಕ, ನೀರಿನ ಪೂರೈಕೆ ಎಲ್ಲವನ್ನೂ ಪರಿಶೀಲಿಸಿದರು. ಅಲ್ಲಿನ ವಾರ್ಡನ್ ಸಯೀದಾಬಾನು, ವಾರಕ್ಕೊಮ್ಮೆ ಮಕ್ಕಳಿಗೆ ಸಾಂಸ್ಕೃತಿಕ ಕಾರ್ಯಕ್ರಮ, ವಿವಿಧ ಸ್ಪರ್ಧೆ ಆಯೋಜಿಸುವುದಾಗಿ ಮಾಹಿತಿ ನೀಡಿದರು. ಇಡೀ ಹಾಸ್ಟೆಲ್ ವ್ಯವಸ್ಥೆ ಹಾಗೂ ವಾರ್ಡನ್ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.





ಆಸ್ಪತ್ರೆಯಲ್ಲಿ ಪರಿಶೀಲನೆ
ಬಾಪೂಜಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಉಪಲೋಕಾಯುಕ್ತರು, ಔಷಧಗಳ ದಾಸ್ತಾನು, ಸಿಬ್ಬಂದಿಯ ಹಾಜರಾತಿ, ಕಾರ್ಯನಿರ್ವಹಣೆ ಬಗ್ಗೆ ಪರಿಶೀಲನೆ ನಡೆಸಿದರು. ಹಾಜರಾತಿಗೆ ಆಳವ ಅಡಿಸಿರುವ ಬಯೋಮೆಟ್ರಿಕ್ ವ್ಯವಸ್ಥೆ ಸರಿಯಾಗಿ ಕೆಲಸ ಮಾಡುತ್ತಿದೆಯೇ ಎಂಬುದನ್ನು ಪರೀಕ್ಷಿಸಿದರು. ಯಾವ ಔಷಧಗಳ ಅಗತ್ಯತೆ ಹೆಚ್ಚಿದೆ, ಪೂರೈಕೆ ಹೇಗಿದೆ ಎಂಬ ಬಗ್ಗೆಯೂ ಮಾಹಿತಿ ಪಡೆದರು.




ಓಡೋಡಿ ಬಂದ ಶಿಕ್ಷಕ, ರಂಗೋಲಿ ಹಾಕಿ ಕಾದ ಸಿಬ್ಬಂದಿ
ಉಪ ಲೋಕಾಯುಕ್ತರ ಭೇಟಿ ವೇಳೆ ಶಾಲೆಯಲ್ಲಿ ಇರದ ಶಿಕ್ಷಕರೊಬ್ಬರು, ಕೊನೆಗೆ ಓಡೋಡಿ ಬಂದಿದ್ದರು. ಆಸ್ಪತ್ರೆ ಪರಿಶೀಲನೆ ವೇಳೆ ಓಡೋಡಿ ಬಂದ ಶಿಕ್ಷಕರು ತಾವು ಶಾಲೆಯಲ್ಲಿ ಇರದಿದ್ದಕ್ಕೆ ಸಮಜಾಯಿಷಿ ನೀಡಿದರು. ಇನ್ನು, ಉಪ ಲೋಕಾಯುಕ್ತರು ಭೇಟಿ ನೀಡುತ್ತಿದ್ದಾರೆ ಎಂದು ತಿಳಿದ ಕೂಡಲೇ ಬಾಪೂಜಿನಗರದ ಹಾಸ್ಟೆಲ್ ಒಂದರ ಮುಂದೆ ರಂಗೋಲಿ ಹಾಕಿ, ಮುಂಬಾಗಿಲುಗಳನ್ನು ತೆರೆದು ಉಪ ಲೋಕಾಯುಕ್ತರ ಆಗಮನಕ್ಕಾಗಿ ಸಿಬ್ಬಂದಿಗಳು ಕಾದು ನಿಂತಿದ್ದರು. ಆದರೆ ಆ ಹಾಸ್ಟೆಲ್’ಗೆ ಉಪ ಲೋಕಾಯುಕ್ತರು ಭೇಟಿಯನ್ನೇ ಕೊಡಲಿಲ್ಲ.

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]