ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 25 ಆಗಸ್ಟ್ 2021
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಕೆಸರು ಗದ್ದೆಯಂತಾದ ರಸ್ತೆಯಲ್ಲಿ ಗ್ರಾಮಸ್ಥರು ಸಸಿ ನೆಟ್ಟು ವಿಭಿನ್ನವಾಗಿ ಪ್ರತಿಭಟನೆ ನಡೆಸಿದ್ದಾರೆ. ಇದರ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅಷ್ಟೆ ಅಲ್ಲ, ಗ್ರಾಮಸ್ಥರನ್ನು ಸಂಕಷ್ಟಕ್ಕೆ ದೂಡಿದ ಆಡಳಿತದ ವಿರುದ್ಧ ಆಕ್ರೋಶವು ವ್ಯಕ್ತವಾಗುತ್ತಿದೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ತೀರ್ಥಹಳ್ಳಿ ತಾಲೂಕು ನೊಣಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೊಂಬಳಿಗೆ ಗ್ರಾಮದ ಸಂಪರ್ಕ ರಸ್ತೆ ಹದಗೆಟ್ಟು ಹೋಗಿದೆ. ರಸ್ತೆಗಳಲ್ಲಿ ಗುಂಡಿಗಳಿವೆಯೋ, ಗುಂಡಿಯ ನಡುವೆ ರಸ್ತೆ ನಿರ್ಮಾಣವಾಗಿದೆಯೋ ಅನ್ನುವುದು ಗೊತ್ತಾಗುವುದಿಲ್ಲ. ಅಷ್ಟೇ ಅಲ್ಲ, ಕೆಲವು ಕಡೆಯಂತೂ ಕೆಸರು ಗದ್ದೆಯನ್ನೂ ನಾಚಿಸುವಷ್ಟು ರಸ್ತೆ ಹದವಾಗಿದೆ. ಇದೇ ಕಾರಣಕ್ಕೆ ಯುವಕರು, ಗ್ರಾಮಸ್ಥರು ಸಸಿ ನೆಟ್ಟು ಆಕ್ರೋಶ ಹೊರ ಹಾಕಿದ್ದಾರೆ.
‘ಸ್ವರ್ಗಕ್ಕೆ ಮೂರೇ ಗೇಣು’
ಬೊಂಬಳಿಗೆ ಗ್ರಾಮಸ್ಥರು ‘ಸ್ವರ್ಗಕ್ಕೆ ಮೂರೇ ಗೇಣು’ ಅನ್ನುವ ಅಭಿಯಾನ ಆರಂಭಿಸಿದ್ದಾರೆ. ತಮ್ಮೂರಿಗೆ ರಸ್ತೆ ಆಗುವವರೆಗೂ ಇದೇ ಮಾದರಿಯಲ್ಲಿ ಹೋರಾಟ ನಡೆಸಲು ನಿರ್ಧರಿಸಿದ್ದಾರೆ. ಮೊದಲ ಹಂತದಲ್ಲಿ ರಸ್ತೆಯಲ್ಲಿ ಸಸಿ ನೆಟ್ಟಿದ್ದಾರೆ. ‘ಇದು ಯಾವುದೆ ಪಕ್ಷದ ಪರ, ವಿರೋಧದ ಹೋರಟವಲ್ಲ. ತಮ್ಮೂರಿಗೆ ರಸ್ತೆ ಮಾಡಿಸಿಕೊಡಿ ಎಂಬ ಮನವಿಯಷ್ಟೆ’ ಅನ್ನುತ್ತಾರೆ ಸ್ಥಳೀಯರಾದ ಸುನಿಲ್.
ಬದುಕು ಕಟ್ಟಬೇಕಿದ್ದ ರಸ್ತೆಯಲ್ಲಿ ಬರಿ ಗುಂಡಿಗಳು
ಬೊಂಬಳಿಗೆ ಗ್ರಾಮದಲ್ಲಿ ಸುಮಾರು 70 ಮನೆಗಳಿಗೆ. ಅಂದಾಜು 300 ಮಂದಿ ಇಲ್ಲಿದ್ದಾರೆ. ಕೃಷಿ ನಂಬಿ ಬದುಕು ನಡೆಸುತ್ತಿದ್ದಾರೆ. ಗ್ರಾಮದಲ್ಲಿ ಸುಮಾರು 30 ರಿಂದ 35 ವಿದ್ಯಾರ್ಥಿಗಳಿದ್ದು, ಈಗ ಶಾಲೆ, ಕಾಲೇಜುಗಳು ಆರಂಭವಾಗಿದ್ದು, ನಿತ್ಯ ಈ ರಸ್ತೆಯಲ್ಲೇ ಓಡಾಡಬೇಕಿದೆ. ಗ್ರಾಮಸ್ಥರು ಬೆಳೆದ ಬೆಳೆಯನ್ನು ಇದೇ ರಸ್ತೆಯಲ್ಲಿ ಮಾರುಕಟ್ಟೆಗೆ ಸಾಗಿಸಬೇಕು. ಬೊಂಬಳಿಗೆಯಿಂದ ಮಲ್ಲೇಸರದ ಮುಖ್ಯರಸ್ತೆಗೆ ಎರಡು ಕಿ.ಮೀ ಹಾದಿ. ಗ್ರಾಮಕ್ಕೆ ಇರುವುದು ಇದೊಂದೇ ರಸ್ತೆ. ಬದುಕು ನಿರ್ಮಿಸಬೇಕಿರುವ ಈ ರಸ್ತೆಯೇ ಈಗ ಗುಂಡಿಮಯವಾಗಿದೆ.
ನೆಂಟರು, ಇಷ್ಟರು ಬರಲ್ಲ, ಆಂಬುಲೆನ್ಸ್ ಸುಳಿಯಲ್ಲ
ಗುಂಡಿಯುಕ್ತ ರಸ್ತೆಗಳಿಂದಾಗಿ ಬೊಂಬಳಿಗೆ ಗ್ರಾಮಸ್ಥರು ತಮ್ಮ ನೆಂಟರು, ಇಷ್ಟರಿಂದ ದೂರಾಗಿದ್ದಾರೆ. ‘ನಮ್ಮ ಊರಿಗೆ ನೆಂಟರುಗಳು ಬರುವುದಿಲ್ಲ. ಆ ರಸ್ತೆಯಲ್ಲಿ ಬರಲು ಸಾಧ್ಯವಾಗುವುದಿಲ್ಲ ಅಂತಾ ಯಾರೂ ನಮ್ಮೂರಿಗೆ ಬರುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ ಸುನಿಲ್. ಇದಿಷ್ಟೆ ಅಲ್ಲಾ, ರಸ್ತೆ ಕಾರಣಕ್ಕೆ ಬೊಂಬಳಿಗೆ ಗ್ರಾಮಕ್ಕೆ ಆಂಬುಲೆನ್ಸ್ ಕೂಡ ಬರುತ್ತಿಲ್ಲ. ‘ಆರೋಗ್ಯ ಸಮಸ್ಯೆಯಾದರೆ ಬೊಂಬಳಿಗೆಯಿಂದ ಮಲ್ಲೇಸರದವರೆ ಹೋಗಲು ಕಷ್ಟಪಡಬೇಕಾಗುತ್ತದೆ. ಆಂಬುಲೆನ್ಸ್’ನವರು ಕೂಡ ಊರಿನೊಳಗೆ ಬರಲು ಹಿಂದೇಟು ಹಾಕುತ್ತಾರೆ’ ಅನ್ನುತ್ತಾರೆ ಗ್ರಾಮಸ್ಥರಾದ ಪ್ರಕಾಶ್.
ಜೆಲ್ಲಿ ಹಾಕಿ ರಸ್ತೆ ಮಾಡಿದ್ದರು
ಬೊಂಬಳಿಗೆ ಗ್ರಾಮಕ್ಕೆ ರಸ್ತೆ ಮಾಡಿಕೊಡುವಂತೆ ಇಲ್ಲಿನ ಗ್ರಾಮಸ್ಥರು ಗ್ರಾಮ ಪಂಚಾಯಿತಿಯಿಂದ ಶಾಸಕರ ತನಕ ಎಲ್ಲರಿಗೂ ಮನವಿ ಮಾಡಿದ್ದಾರೆ. ಇದರ ಪರಿಣಾಮ ಎಂಬಂತೆ ಒಂದೆರಡು ವರ್ಷದ ಹಿಂದೆ ಶಾಸಕರ ಅನುದಾನದಲ್ಲಿ ಆರು ಲಕ್ಷ ರೂ. ವೆಚ್ಚದಲ್ಲಿ ಜೆಲ್ಲಿ ರಸ್ತೆ ನಿರ್ಮಿಸಲಾಯಿತು. ‘ಜೆಲ್ಲಿ ರಸ್ತೆ ನಿರ್ಮಿಸಿದ್ದರು. ಆದರೆ ಅದು ಹೆಚ್ಚು ಕಾಲ ಉಳಿಯಲಿಲ್ಲ. ನಮ್ಮೂರಿನ ಅಕ್ಕಪಕ್ಕ ಒಂದೆರಡು ಮನೆಗಳಿರುವ ಗ್ರಾಮಕ್ಕೂ ಡಾಂಬಾರ್ ರಸ್ತೆ ನಿರ್ಮಿಸಲಾಗಿದೆ. ನಮ್ಮೂರಿನಲ್ಲಿ ಸುಮಾರು 70 ಮನೆಗಳಿವೆ. ಆದರೂ ಡಾಂಬಾರ್ ಹಾಕದಿರಲು ಕಾರಣವೇನು ಗೊತ್ತಾಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಸುನಿಲ್.
ರಸ್ತೆ ಮೇಲೆ ಡಿಪೆಂಡ್ ಆಗಿದೆ ಊರ ಭವಿಷ್ಯ
ಬೊಂಬಳಿಗೆ ಗ್ರಾಮಕ್ಕೆ ಇರುವುದು ಇದೊಂದೆ ರಸ್ತೆ. ಒಂದು ವೇಳೆ ಈ ರಸ್ತೆ ಸಂಪೂರ್ಣ ಹಾಳಾದರೆ ಪರ್ಯಾಯವಾಗಿ ಇರುವುದು ಒಂದೆ ಮಾರ್ಗ. ಗ್ರಾಮದ ಪಕ್ಕದಲ್ಲಿರುವ ಎಂಪಿಎಂ ಪ್ಲಾಂಟೇಷನ್ ಒಳಗಿಂದ ದಾರಿ ಇದೆ. ಇದು ಕೂಡ ಸಮರ್ಪಕವಾಗಿಲ್ಲ. ಹಾಗಾಗಿ ಈ ರಸ್ತೆ ಮೇಲೆ ಊರಿನ ಭವಿಷ್ಯ ನಿಂತಿದೆ. ಪಕ್ಕಾ ರಸ್ತೆ ನಿರ್ಮಾಣವಾದರೆ ಊರಿನವರು ಬದುಕು ಹಸನಾಗಲಿದೆ. ಈ ಬಗ್ಗೆ ಕ್ಷೇತ್ರದ ಶಾಸಕ, ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಗಮನ ಹರಿಸಬೇಕಿದೆ.
(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
[…] […]