ಶಿವಮೊಗ್ಗ ಲೈವ್.ಕಾಂ | SHIMOGA | 1 ಫೆಬ್ರವರಿ 2020

ಶಿವಮೊಗ್ಗದ KSRTC ಮತ್ತು ಖಾಸಗಿ ಬಸ್ ನಿಲ್ದಾಣಕ್ಕೆ ಕಳೆದ ಏಳು ತಿಂಗಳಿಂದ ನೀರಿನ ಪೂರೈಕೆ ಕಟ್ ಮಾಡಲಾಗಿದೆ. ಸರಿಯಾದ ಸಮಯಕ್ಕೆ ಬಿಲ್ ಕಟ್ಟಿದರು, ದುಡ್ಡು ಕೊಡ್ತೀವಿ ಅಂದರು ನೀರಿನ ಸಂಪರ್ಕ ಸಿಗುತ್ತಿಲ್ಲ. ಇದೇ ಕಾರಣಕ್ಕೆ ಗುತ್ತಿಗೆದಾರರು ಟ್ಯಾಂಕರ್’ಗಳಲ್ಲಿ ನೀರು ತರಿಸುತ್ತಿದ್ದಾರೆ.
ಯಡಿಯೂರಪ್ಪ ಅವರು ಈ ಹಿಂದೆ ಮುಖ್ಯಮಂತ್ರಿ ಆಗಿದ್ದಾಗ 2008ರಲ್ಲಿ ಬಸ್ ನಿಲ್ದಾಣವನ್ನು ಹೈಟೆಕ್’ಗೊಳಿಸಿದ್ದರು. ಆದರೆ ಇದೇ ಹೈಟೆಕ್ ಬಸ್ ನಿಲ್ದಾಣಕ್ಕೆ ಏಳು ತಿಂಗಳಿಂದ ನೀರಿನ ಪೂರೈಕೆ ಆಗುತ್ತಿಲ್ಲ. ಎಲ್ಲ ಪೈಪ್’ಲೈನ್’ಗಳನ್ನು ಕಟ್ ಮಾಡಲಾಗಿದೆ.
ಬಸ್ ನಿಲ್ದಾಣಕ್ಕೆ ನೀರು ಕಟ್ ಮಾಡಿದ್ದೇಕೆ?
ಪ್ರತಿ ದಿನ ಸಾವಿರಾರು ಜನರು ಈ ಎರಡು ಬಸ್ ನಿಲ್ದಾಣಕ್ಕೆ ಬರುತ್ತಾರೆ. ಬಸ್ ನಿಲ್ದಾಣದಲ್ಲಿ ಹೊಟೇಲ್’ಗಳಿವೆ, ಅಂಗಡಿಗಳಿವೆ, ಶೌಚಾಲಯಗಳಿವೆ, ನಿಲ್ದಾಣದ ಸ್ವಚ್ಛತಾ ಕಾರ್ಯವು ನಿರಂತರವಾಗಿ ನಡೆಯುತ್ತಿದೆ. ನೀರಿನ ಪೂರೈಕೆಯೆ ಇಲ್ಲದೆ ಇಷ್ಟೆಲ್ಲ ಕೆಲಸಗಳು ಆಗಬೇಕಿದೆ. ಏಳು ತಿಂಗಳಿಂದ ಈ ಸಮಸ್ಯೆ ಇದ್ದು, ಇದನ್ನು ಬಗೆಹರಿಸುವತ್ತ ಯಾರೂ ಗಮನ ಹರಿಸದೆ ಇರುವುದು ವಿಪರ್ಯಾಸ.

ರಸ್ತೆ ಕಾಮಗಾರಿ ವೇಳೆ KSRTC ಮತ್ತು ಖಾಸಗಿ ಬಸ್ ನಿಲ್ದಾಣಕ್ಕೆ ನೀರು ಪೂರೈಕೆ ಮಾಡುವ ಮೇನ್ ಪೈಪ್ ಕಟ್ ಮಾಡಲಾಗಿದೆ. ಹಾಗಾಗಿ ಎರಡು ಬಸ್ ನಿಲ್ದಾಣಕ್ಕೆ ಪಾಲಿಕೆ ವತಿಯಿಂದ ಒಂದೇ ಒಂದು ಹನಿ ನೀರು ಬರುತ್ತಿಲ್ಲ.
ನೀರಿಗಾಗಿ ಗುತ್ತಿಗೆದಾರರ ಪರದಾಟ
KSRTC ಬಸ್ ನಿಲ್ದಾಣದಕ್ಕೆ ಪ್ರತಿದಿನ ಅಂದಾಜು 25 ಸಾವಿರ ಲೀಟರ್ ನೀರು ಬೇಕು. ಬೇಸಿಗೆಯಲ್ಲಿ ಈ ಬೇಡಿಕೆ ಹೆಚ್ಚಳವಾಗುತ್ತದೆ. 10 ಸಾವಿರ ಲೀಟರ್’ನಷ್ಟಾದರೂ ಹೆಚ್ಚು ನೀರು ಬೇಕಾಗುತ್ತದೆ. ಆದರೆ ನೀರನ ಸಂಪರ್ಕ ಕಡಿತಗೊಂಡಿರುವುದರಿಂದ ಬಸ್ ನಿಲ್ದಾಣದ ಬಳಕೆಗೆ ಎರಡು ಬೋರ್’ವೆಲ್ ಮತ್ತು ಟ್ಯಾಂಕರ್’ಗಳ ಮೇಲೆ ಅವಲಂಬಿತವಾಗಬೇಕಾಗಿದೆ.

KSRTC ನಿಲ್ದಾಣದಲ್ಲಿ 10 ವರ್ಷ ಹಿಂದೆ ಕೊರೆಸಲಾಗಿರುವ ಎರಡು ಬೋರ್’ವೆಲ್’ಗಳಿವೆ. ಇವುಗಳಲ್ಲಿ ಸಾಕಷ್ಟು ಪ್ರಮಾಣ ನೀರು ಲಭ್ಯವಾಗುತ್ತಿಲ್ಲ. ಹಾಗಾಗಿ ಪ್ರತಿದಿನ 3 ಟ್ಯಾಂಕರ್’ನಲ್ಲಿ ನೀರು ತರಿಸಲಾಗುತ್ತಿದೆ. ಒಂದು ವೇಳೆ ಬೋರ್’ವೆಲ್’ನಿಂದ ನೀರು ಸ್ಥಗಿತಗೊಂಡರೆ, ಬಸ್ ನಿಲ್ದಾಣದಲ್ಲಿ ತೀವ್ರ ಸಮಸ್ಯೆ ಉಂಟಾಗುತ್ತದೆ. ಈ ಕುರಿತು ಮಹಾನಗರ ಪಾಲಿಕೆಗೆ ಹಲವು ಬಾರಿ ಮನವರಿಕೆ ಮಾಡಿಕೊಟ್ಟರು, ಪ್ರಯೋಜನವಾಗಿಲ್ಲ.

ಕ್ಯಾರೆ ಅನ್ನದ ಅಧಿಕಾರಿಗಳು, ಕೇಳೋರಿಲ್ಲ ಗೋಳು
ಸಾಮಾನ್ಯವಾಗಿ ನೀರಿಗಾಗಿ ಅನಧಿಕೃತವಾಗಿ ಪೈಪ್’ಲೈನ್ ಹಾಕಿಕೊಂಡಿದ್ದರೂ, ಅದನ್ನು ಕಡಿತಗೊಳಿಸುವುದಿಲ್ಲ. ಬದಲಾಗಿ ಅಧಿಕೃತಗೊಳಿಸುವಂತೆ ಸೂಚಿಸಲಾಗುತ್ತದೆ. ಅದರಲ್ಲೂ ಬಸ್ ನಿಲ್ದಾಣದಂತಹ ಸಾರ್ವಜನಿಕ ಸ್ಥಳಗಳ ಕುರಿತು ಹೆಚ್ಚಿನ ಮುತುವರ್ಜಿ ವಹಿಸಲಾಗುತ್ತದೆ. ಆದರೆ KSRTC ಬಸ್ ನಿಲ್ದಾಣದಲ್ಲಿ ಅಧಿಕಾರಿಗಳು ನಿರ್ಲಕ್ಷ ತೋರಿದಂತೆ ಕಾಣುತ್ತದೆ. ಬಸ್ ನಿಲ್ದಾಣ ನಿರ್ವಹಣೆಯನ್ನು ಗುತ್ತಿಗೆ ನೀಡಲಾಗಿದೆ. ಹಾಗಾಗಿ ನೀರು ಪೂರೈಕೆ ಮಾಡುವುದು ಗುತ್ತಿಗೆದಾರನ ಜವಾಬ್ದಾರಿ.

ಇದೇ ಕಾರಣಕ್ಕೆ ಅಧಿಕಾರಿಗಳು ಕ್ಯಾರೆ ಅನ್ನುತ್ತಿಲ್ಲ. KSRTC ಅಧಿಕಾರಿಗಳು ಜಲ ಮಂಡಳಿ, ಮಹಾನಗರ ಪಾಲಿಕೆಗೆ ಮನವಿ ಸಲ್ಲಿಸಿದರೆ, ಕೆಲಸ ಚುರುಕುಗೊಳ್ಳುತ್ತದೆ. ನೀರನ ಸಂಪರ್ಕವು ಸಿಗಲಿದೆ. ಶಿವಮೊಗ್ಗದ ಪ್ರಮುಖ ಬಸ್ ನಿಲ್ದಾಣಗಳಲ್ಲಿನ ನೀರಿನ ತತ್ವಾರವನ್ನು ನೀಗಿಸುವತ್ತ ಅಧಿಕಾರಿಗಳು ಕ್ರಮ ವಹಿಸಬೇಕಿದೆ.

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]
Water Supply to KSRTC and Private Bus Stand has been stopped. From Seven Months Mahanagara Palike and Water Board has stopped water Supply to Bus Stands in Shimoga.