ಶಿವಮೊಗ್ಗ ಲೈವ್.ಕಾಂ | SHIKARIPURA NEWS | 23 ಜೂನ್ 2020
ಉಸಿರಾಟದ ಸಮಸ್ಯೆಯಿಂದ ಮೃತಪಟ್ಟ ವೃದ್ಧೆಯೊಬ್ಬರಲ್ಲಿ ಕರೋನ ಸೋಂಕು ಕಾಣಿಸಿಕೊಂಡಿದೆ. ಮೃತ ಮಹಿಳೆಯ ಗಂಟಲು ದ್ರವ ಮಾದರಿಯ ಸ್ಯಾಂಪಲ್ ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ತಗುಲಿರುವುದು ದೃಢವಾಗಿದೆ. ಇದು ತಾಲೂಕಿನಲ್ಲಿ ಆತಂಕ ಸೃಷ್ಟಿಸಿದೆ. ಇನ್ನು ಕರೋನ ಮಾರ್ಗಸೂಚಿಯಂತೆ ಅಂತ್ಯಕ್ರಿಯೆ ನಡೆಯದೆ ಇರುವುದು ಜಿಲ್ಲಾಡಳಿತಕ್ಕೆ ತಲೆ ನೋವು ತರಿಸಿದೆ.

ಯಾರಿದು ವೃದ್ಧೆ? ಎಲ್ಲಿಯವರು?
ಶಿಕಾರಿಪುರ ತಾಲೂಕಿನ ಖವಾಸಪುರದ ವೃದ್ಧೆಯೊಬ್ಬರು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಶನಿವಾರ ಇವರು ಮೃತಪಟ್ಟಿದ್ದಾರೆ. ವೃದ್ಧೆಯ ಅಂತ್ಯಕ್ರಿಯೆಯಲ್ಲಿ ಎಷ್ಟು ಮಂದಿ ಪಾಲ್ಗೊಂಡಿದ್ದರು. ಯಾರೆಲ್ಲ ಪಾಲ್ಗೊಂಡಿದ್ದರು ಎಂಬುದು ಇನ್ನು ಖಚಿತಗೊಂಡಿಲ್ಲ. ಇದು ತೀವ್ರ ಆತಂಕ ಮೂಡಿಸಿದೆ.
ವೃದ್ಧೆಗೆ ಸೋಂಕು ತಗುಲಿದ್ದು ಹೇಗೆ?
ಶನಿವಾರ ಬೆಳಗ್ಗೆ | ವೃದ್ಧೆಗೆ ಉಸಿರಾಟದ ಸಮಸ್ಯೆ ಮತ್ತು ಇನ್ನಿತರೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ಶಿಕಾರಿಪುರದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಫ್ಲೂ ಕಾರ್ನರ್ | ಉಸಿರಾಟದ ಸಮಸ್ಯೆ ಅಂದಾಕ್ಷಣ ವೈದ್ಯರು ವೃದ್ಧೆಯನ್ನು ಕೂಡಲೇ ಫ್ಲೂ ಕಾರ್ನರ್‍ಗೆ ಕಳುಹಿಸಿ ಚಿಕಿತ್ಸೆ ಆರಂಭಿಸಿದರು.
ಮಧ್ಯಾಹ್ನ ಸಾವು | ಚಿಕಿತ್ಸೆ ಫಲಕಾರಿ ಆಗದೆ ಶನಿವಾರ ಮಧ್ಯಾಹ್ನವೇ ವೃದ್ಧೆ ಮೃತಪಟ್ಟಿದ್ದಾರೆ. ಆಗ ವೈದ್ಯರು ಗಂಟಲು ದ್ರವ ಪರೀಕ್ಷೆ ನಡೆಸಿದ್ದಾರೆ.
ಸಂಜೆ ವೇಳೆಗೆ ಅಂತ್ಯಕ್ರಿಯೆ | ಸಂಜೆ ವೇಳೆ ವೃದ್ಧೆಯ ಅಂತ್ಯ ಸಂಸ್ಕಾರ ನಡೆಸಲಾಗಿದ್ದು, ಎಷ್ಟು ಮಂದಿ ಪಾಲ್ಗೊಂಡಿದ್ದರು, ಯಾರೆಲ್ಲ ಪಾಲ್ಗೊಂಡಿದ್ದರು ಅನ್ನುವುದು ಖಚಿತವಾಗಿಲ್ಲ.
ಸೋಮವಾರ ರಿಪೋರ್ಟ್ | ವೃದ್ಧೆಯ ಗಂಟಲು ದ್ರವ ಪರೀಕ್ಷೆಯ ವರದಿ ಬಂದಿದ್ದು, ಕರೋನ ಸೋಂಕು ಇರುವುದು ದೃಢಪಟ್ಟಿದೆ.
ವೃದ್ಧೆಗೆ ಟ್ರಾವಲ್ ಹಿಸ್ಟರಿಯೇ ಇಲ್ಲ
ಮೃತ ವೃದ್ಧೆಗೆ ಯಾವುದೇ ಟ್ರಾವಲ್ ಹಿಸ್ಟರಿ ಇಲ್ಲ. ಕರೋನ ಸೋಂಕು ಹೇಗೆ ತಗುಲಿತು ಅನ್ನುವುದು ತಿಳಿದು ಬಂದಿಲ್ಲ. ಕುಟುಂಬದವರಿಂದಲೂ ಮಾಹಿತಿ ಸರಿಯಾಗಿ ಸಿಗುತ್ತಿಲ್ಲ ಎಂದು ತಹಶೀಲ್ದಾರ್ ಎಂ.ಪಿ.ಕವಿರಾಜ್ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
20 ಮನೆ ಸೀಲ್ ಡೌನ್
ಲ್ಯಾಬ್ ರಿಪೋರ್ಟ್ ಬಂದ ಹಿನ್ನೆಲೆ ವೃದ್ಧೆಯ ಮನೆಯ ಸುತ್ತಮುತ್ತಲು 20 ಮನೆಯನ್ನು ಸೀಲ್ ಡೌನ್ ಮಾಡಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ವೃದ್ಧೆಯ ಕುಟುಂಬದವರು ಮತ್ತು ಪ್ರಾಥಮಿಕ ಸಂಪರ್ಕದಲ್ಲಿ ಇದ್ದವರನ್ನು ಕ್ವಾರಂಟೈನ್‍ಗೆ ಒಳಪಡಿಸಲಾಗಿದೆ.
ಜಿಲ್ಲೆಯಲ್ಲಿ ಎರಡನೇ ಸಾವು
ಶಿವಮೊಗ್ಗ ಜಿಲ್ಲೆಯಲ್ಲಿ ಕರೋನ ಸೋಂಕಿಗೆ ತುತ್ತಾಗಿ ಮೃತಪಟ್ಟ ಎರಡನೇ ಪ್ರಕರಣ ಇದು. ಚನ್ನಗಿರಿ ತಾಲೂಕಿನ ಮಹಿಳೆಯೊಬ್ಬರು ಉಸಿರಾಟದ ಸಮಸ್ಯೆಯಿಂದ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯಲ್ಲೇ ಕೊನೆ ಉಸಿರೆಳೆದಿದ್ದರು. ಮಹಿಳೆ ದಾವಣಗೆರೆ ಜಿಲ್ಲೆಯವರಾದರೂ ಮೆಗ್ಗಾನ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಕರೋನಾಗೆ ಮೃತಪಟ್ಟವರು ಎಂದು ಸೇರಿಸಲಾಗಿತ್ತು. ಈಗ ಶಿಕಾರಿಪುರದ ವೃದ್ಧೆ ಮೃತರಾಗಿರುವುದು ಜಿಲ್ಲೆಯಲ್ಲಿ ಎರಡನೇ ಪ್ರಕರಣವಾಗಿದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | shivamoggalive@gmail.com
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200