ಶಿವಮೊಗ್ಗ ಲೈವ್.ಕಾಂ | SAGARA NEWS | 27 ಜೂನ್ 2020
KSRTC ಬಸ್ ಚಾಲಕರೊಬ್ಬರ ಸಮಯಪ್ರಜ್ಞೆಯಿಂದಾಗಿ ಇವತ್ತು 16 ಮಕ್ಕಳು ಸರಿಯಾದ ಸಮಯಕ್ಕೆ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಕ್ಕೆ ತಲುಪುವಂತಾಗಿದೆ. ಚಾಲಕ ಮತ್ತು ರೂಟ್ ಆಫೀಸರ್ ಯಶೋಗಾಥೆಗೆ ಶಿಕ್ಷಣ ಇಲಾಖೆಯ ಪ್ರಶಂಸೆ ವ್ಯಕ್ತಪಡಿಸಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಅಷ್ಟಕ್ಕೂ ಆಗಿದ್ದೇನು?
ಸಾಗರ ತಾಲೂಕಿನ ನಾಗವಳ್ಳಿ ಗ್ರಾಮದ 16 ಎಸ್ಸೆಸ್ಸೆಲ್ಸಿ ಮಕ್ಕಳು ಗಣಿತ ಪರೀಕ್ಷೆ ಬರೆಯಲು ಕಾರ್ಗಲ್ನ ಪರೀಕ್ಷಾ ಕೇಂದ್ರಕ್ಕೆ ಬರಬೇಕಿತ್ತು. ನಾಗವಳ್ಳಿಯಿಂದ ಪರೀಕ್ಷಾ ಕೇಂದ್ರವು 50 ಕಿ.ಮೀ ದೂರದಲ್ಲಿದೆ. ಹಾಗಾಗಿ KSRTC ಬಸ್ ವ್ಯವಸ್ಥೆ ಮಾಡಲಾಗಿದೆ. ಇವತ್ತು ಬೆಳಗ್ಗೆ 6.30ಕ್ಕೆ ಮಕ್ಕಳನ್ನು ಹೊತ್ತ ಬಸ್, ನಾಗವಳ್ಳಿಯಿಂದ ಕಾರ್ಗಲ್ಗೆ ಬರುತ್ತಿದ್ದಾಗ ಮಾರ್ಗ ಮಧ್ಯೆ ಮರ ಬಿದ್ದಿತ್ತು.
ಕೈಯಲ್ಲೇ ರೆಂಬೆ ಮುರಿದರು
ರಸ್ತೆಗೆ ಅಡ್ಡಲಾಗಿ ಮರ ಬಿದ್ದಿದ್ದರಿಂದ ಬಸ್ ಮುಂದಕ್ಕೆ ಹೋಗುವುಷ್ಟು ಕಷ್ಟವಿತ್ತು. ರಸ್ತೆಯ ಪಕ್ಕಕ್ಕೆ ಬಸ್ ಇಳಿಸಿದರೆ ಚಕ್ರಗಳು ಮಣ್ಣಿನಲ್ಲಿ ಹುದುಗುವ ಆತಂಕವಿತ್ತು. ಹಾಗಾಗಿ ಚಾಲಕ ಡ್ಯಾನಿ ಫರ್ನಾಂಡಿಸ್ ಬಸ್ಸಿನಿಂದ ಕೆಳಗಿಳಿದು, ಕೈಯಲ್ಲೇ ಮರದ ರೆಂಬೆಗಳನ್ನು ಮರಿಯಲು ಆರಂಭಿಸಿದ್ದರು. ರೂಟ್ ಆಫೀಸರ್ ಆಗಿದ್ದ ನಾಗವಳ್ಳಿ ಶಾಲೆಯ ಶಿಕ್ಷಕರೊಬ್ಬರು ಚಾಲಕನಿಗೆ ನೆರವಾದರು.
ಅಪದ್ಭಾಂದವನಂತೆ ಬಂತು ಬೈಕ್
ಇದೇ ವೇಳೆ ಆ ಮಾರ್ಗವಾಗಿ ಬೈಕ್ನಲ್ಲಿ ಬಂದ ವ್ಯಕ್ತಿಯೊಬ್ಬ, ಚಾಲಕ ಮತ್ತು ಶಿಕ್ಷಕನ ಪರಿಸ್ಥಿತಿ ಗಮನಿಸಿ, ನೆರವಿಗೆ ಧಾವಿಸಿದರು. ಶಿಕ್ಷಕರನ್ನು ಕರೆದೊಯ್ದು ಸಮೀಪದ ಹಳ್ಳಿಯೊಂದರಿಂದರಲ್ಲಿ ಪರಿಸ್ಥಿತಿ ವಿವರಿಸಿ, ಮತ್ತಿಬ್ಬರನ್ನು ಕರೆತಂದರು. ಇವರೆಲ್ಲ ಹಿಂತಿರುಗುವವರೆಗೂ ಚಾಲಕ ಡ್ಯಾನಿ ಫರ್ನಾಂಡಿಸ್ ಕೈಯಲ್ಲೆ ಮರದ ರೆಂಬೆ ತುಂಡು ಮಾಡುತ್ತಿದ್ದರು. ಕೊನೆಗೆ ಕೊಡಲಿ ಸಿಗುತ್ತಿದ್ದಂತೆ ಬಸ್ಸು ಹೋಗುವಷ್ಟು ಜಾಗ ಮಾಡಿಕೊಂಡರು.
ಸರಿಯಾದ ಸಮಯಕ್ಕೆ ಬಂತು ಬಸ್
ಮರ ಬಿದ್ದು ತಡವಾಗುತ್ತೆ ಅನ್ನುವ ಒತ್ತಡದಲ್ಲಿದ್ದ ವಿದ್ಯಾರ್ಥಿಗಳಿಗೆ ಶಿಕ್ಷಕ ಮತ್ತು ಚಾಲಕ ಆತ್ಮವಿಶ್ವಾಸ ತುಂಬಿದ್ದಾರೆ. ಬೆಳಗ್ಗೆ 8.20ರ ಹೊತ್ತಿಗೆ ಕಾರ್ಗಲ್ ಪರೀಕ್ಷಾ ಕೇಂದ್ರಕ್ಕೆ ಮಕ್ಕಳನ್ನು ತಲುಪಿಸಿದ್ದಾರೆ. ಇನ್ನು, ಮಕ್ಕಳಿಗೆ ತೊಂದರೆ ಆಗಬಾರದು ಅಂತಾ ಘಟನೆ ಕುರಿತು ಶಿಕ್ಷಣಾಧಿಕಾರಿಗೆ ಮಾಹಿತಿ ನೀಡಿದ್ದಾರೆ. ಚಾಲಕನ ಸಮಯ ಪ್ರಜ್ಞೆ, ಶಿಕ್ಷಕರು ಮತ್ತು ಗ್ರಾಮಸ್ಥರ ನೆರವಿನಿಂದಾಗಿ 16 ಮಕ್ಕಳು ಸರಿಯಾದ ಸಮಯಕ್ಕೆ ಪರೀಕ್ಷಾ ಕೇಂದ್ರಕ್ಕೆ ತಲುಪಿದ್ದು, ಪರೀಕ್ಷೆ ಬರೆದಿದ್ದಾರೆ.
‘ಮಕ್ಕಳನ್ನು ಸೇಫಾಗಿ ಕರೆದೊಯ್ಯಬೇಕಿತ್ತು’
ಈ ಕುರಿತು ಶಿವಮೊಗ್ಗ ಲೈವ್.ಕಾಂ ಜೊತೆಗೆ ಮಾತನಾಡಿದ ಚಾಲಕ ಡ್ಯಾನಿ ಫರ್ನಾಂಡಿಸ್, ಇಷ್ಟು ವರ್ಷ ಎಸ್ಸೆಸ್ಸೆಲ್ಸಿ ಮಕ್ಕಳು ಹತ್ತು ನಿಮಿಷ, ಕಾಲ್ ಗಂಟೆ ಮುಂಚೆ ಹೋಗಿದ್ದರೆ ಸಾಕಿತ್ತು. ಈಗ ಪರಿಸ್ಥಿತಿ ಬೇರೆ ಇದೆ. ಒಂದು ಗಂಟೆ ಮೊದಲಾದರೂ ಪರೀಕ್ಷಾ ಕೇಂದ್ರ ತಲುಪಬೇಕಿದೆ. ನಮ್ಮ ಹಿರಿಯ ಅಧಿಕಾರಿಗಳು ನಮ್ಮ ಜವಾಬ್ದಾರಿ ಬಗ್ಗೆ ತಿಳಿಸಿದ್ದಾರೆ. ತುಂಬಾ ಎಚ್ಚರ ವಹಿಸುವಂತೆ ಸೂಚಿಸಿದ್ದಾರೆ. ಮಕ್ಕಳನ್ನು ಸರಿಯಾದ ಸಮಯಕ್ಕೆ ತಲುಪಿಸಬೇಕಿತ್ತು. ಅದನ್ನು ನಿಭಾಯಿಸಿದ್ದೇವೆ ಎಂದು ಸಂತಸ ವ್ಯಕ್ತಪಡಿಸಿದರು.
ಯಶೋಗಾಥೆಗೆ ಇಲಾಖೆ ಪ್ರಶಂಸೆ
ಮತ್ತೊಂದೆಡೆ ಚಾಲಕ ಮತ್ತು ರೂಟ್ ಆಫೀಸರ್ ಸಾಹಸಗಾಥೆಯನ್ನು ಶಿಕ್ಷಣ ಇಲಾಖೆ ಯಶೋಗಾಥೆ ಎಂದು ಬಣ್ಣಿಸಿದೆ. ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಸಾಗರ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ, ಚಾಲಕ ಮತ್ತು ರೂಟ್ ಆಫೀಸರ್ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿದೆ. ಈ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]