ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗದ ಲೈವ್.ಕಾಂ | SHIMOGA NEWS | 26 ಫೆಬ್ರವರಿ 2022
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ನಿಷೇಧಾಜ್ಞೆ ಸಡಿಲಗೊಳಿಸಿದ್ದರಿಂದ ಶಿವಮೊಗ್ಗ ನಗರ ಇವತ್ತು ಸಹಜ ಸ್ಥಿತಿಗೆ ಮರಳಿದೆ. ಅಗತ್ಯ ವಸ್ತುಗಳ ಖರೀದಿಗೆ ಜನರು ಮಾರುಕಟ್ಟೆಗೆ ಆಗಮಿಸುತ್ತಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ನಗರದ ವಿವಿಧೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಶಿವಮೊಗ್ಗ ನಗರದಲ್ಲಿ ಇವತ್ತು ಬೆಳಗ್ಗೆಯಿಂದ ನಿಷೇಧಾಜ್ಞೆ ಸಡಿಲಗೊಳಿಸಲಾಗಿದೆ. ಬೆಳಗ್ಗೆ 6 ಗಂಟೆಯಿಂದಲೆ ವ್ಯಾಪಾರ, ವಹಿವಾಟು ಆರಂಭವಾಗಿದೆ. ತರಕಾರಿ, ಹಣ್ಣು, ಹೂವು, ದಿನಸಿ ವ್ಯಾಪಾರ ನಡೆಯುತ್ತಿದೆ.
ಗಾಂಧಿ ಬಜಾರ್’ಗೆ ಜೀವ ಕಳೆ
ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣದ ಬಳಿಕ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಂದಿನಿಂದ ಗಾಂಧಿ ಬಜಾರ್ ಸಂಪೂರ್ಣ ಬಂದ್ ಆಗಿತ್ತು. ಇವತ್ತು ಗಾಂಧಿ ಬಜಾರ್’ಗೆ ಜೀವ ಕಳೆ ಬಂದಿದೆ. ಅಗತ್ಯ ವಸ್ತುಗಳ ಖರೀದಿಗೆ ಜನರು ಗಾಂಧಿ ಬಜಾರ್ ಕಡೆಗೆ ಬರುತ್ತಿದ್ದಾರೆ. ಇಲ್ಲಿನ ದಿನಸಿ ಅಂಗಡಿಗಳು, ತರಕಾರಿ ಮಾರುಕಟ್ಟೆ ಬಳಿ ಜನ ಹೆಚ್ಚಿನ ಸಂಖ್ಯೆಯಲ್ಲಿ ಜನರಿದ್ದಾರೆ. ಅಹಿತಕರ ಘಟನೆಗಳನ್ನು ನಿಯಂತ್ರಿಸಲು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.
ಇದನ್ನು ಓದಿ | ಗಾಂಧಿ ಬಜಾರ್ ವಹಿವಾಟು ಸ್ಥಗಿತ, ಇದರ ಪರಿಣಾಮವೇನು? ಇಲ್ಲಿದೆ ಟಾಪ್ 5 ಪಾಯಿಂಟ್
ನೆಹರೂ ರೋಡ್, ದುರ್ಗಿಗುಡಿ
ನೆಹರೂ ರಸ್ತೆ, ಬಿ.ಹೆಚ್.ರಸ್ತೆ, ದುರ್ಗಿಗುಡಿ ಸೇರಿದಂತೆ ನಗರದ ಬಹುಭಾಗದ ಅಂಗಡಿಗಳಲ್ಲಿ ವ್ಯಾಪಾರ ಗರಿಗೆದರಿದೆ. ಗ್ರಾಹಕರು ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚಿನ ದಿನಸಿ ಖರೀದಿ ಮಾಡುತ್ತಿದ್ದಾರೆ. ಶಿವಮೊಗ್ಗದ ಸಿಟಿ ಸೆಂಟರ್ ಮಾಲ್’ಗೂ ದೊಡ್ಡ ಸಂಖ್ಯೆಯಲ್ಲಿ ಜನರು ಭೇಟಿ ನೀಡುತ್ತಿದ್ದಾರೆ.
ಅಗತ್ಯ ವಸ್ತುಗಳಿಗೆ ಮಾತ್ರ ಅವಕಾಶ
ನಿಷೇಧಾಜ್ಞೆ ಸಡಿಲಗೊಳಿಸಿದ್ದರಿಂದ ಎಲ್ಲಾ ವರ್ಗದ ವ್ಯಾಪಾರಿಗಳು ಅಂಗಡಿ ಬಾಗಿಲು ತೆಗೆದಿದ್ದಾರೆ. ಕೆಲವು ಕಡೆ ಪೊಲೀಸರು ದಿನಸಿ, ತರಕಾರಿ, ಹಣ್ಣು ಸೇರಿದಂತೆ ಅಗತ್ಯ ವಸ್ತುಗಳ ಹೊರತು ಉಳಿದ ಅಂಗಡಿಗಳ ಬಾಗಿಲು ಬಂದ್ ಮಾಡಿಸಿದರು. ಆದರೆ ವ್ಯಾಪಾರವಿಲ್ಲದೆ ಕೈ ಸುಟ್ಟುಕೊಂಡಿರುವ ವ್ಯಾಪಾರಿಗಳು ಪೊಲೀಸರು ಬರುವವರೆಗೆ ಅಂಗಡಿ ಬಾಗಿಲು ತೆಗೆಯುತ್ತಿದ್ದಾರೆ. ಪೊಲೀಸರು ತೆರಳುವವರೆಗೆ ಬಾಗಿಲು ಬಂದ್ ಮಾಡಿಸುತ್ತಿದ್ದಾರೆ.
‘ಮದುವೆ, ಜಾತ್ರೆಗಳಿಗೆ ಖರೀದಿ ಮಾಡಲು ಜನರು ಬರುತ್ತಿದ್ದಾರೆ. ವ್ಯಾಪಾರವಿಲ್ಲದೆ ಈಗಾಗಲೆ ಬಹಳ ನಷ್ಟ ಅನುಭವಿಸಿದ್ದೇವೆ. ಈಗ ಅಂಗಡಿ ತೆಗೆಯಲು ಅವಕಾಶ ಕೊಡುತ್ತಿಲ್ಲ. ಪೊಲೀಸರು ಬಂದಾಗ ಅಂಗಡಿ ಮುಚ್ಚುತ್ತೇವೆ. ಆ ಬಳಿಕ ಸ್ವಲ್ಪ ವ್ಯಾಪಾರ ಮಾಡಿಕೊಳ್ಳುತ್ತಿದ್ದೇವೆ’ ಎಂದು ಹೆಸರು ಹೇಳಲು ಬಯಸದ ಜವಳಿ ವ್ಯಾಪಾರಿ ತಿಳಿಸಿದರು.
ಶನಿವಾರ ಮತ್ತು ಭಾನುವಾರ ಶಿವಮೊಗ್ಗ ನಗರದಲ್ಲಿ ಬೆಳಗ್ಗೆ 6 ರಿಂದ ಸಂಜೆ 4 ಗಂಟೆವರೆಗೆ ನಿಷೇಧಾಜ್ಞೆ ಸಡಿಲಗೊಳಿಸಲಾಗಿದೆ.
ಇದನ್ನು ಓದಿ | ಶಿವಮೊಗ್ಗ ನಗರದಲ್ಲಿ ಇನ್ನೆರಡು ದಿನ ನಿಷೇಧಾಜ್ಞೆ ವಿಸ್ತರಣೆ, ವ್ಯಾಪಾರಿಗಳಿಗೆ ಸ್ವಲ್ಪ ರಿಲ್ಯಾಕ್ಸ್