SHIVAMOGGA LIVE NEWS | 20 FEBRURARY 2023
SHIMOGA : ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ 25 ವರ್ಷ ಪೂರೈಸಿದ ನಟಿ (Actress) ಪ್ರೇಮಾ ಅವರಿಗೆ ಶಿವಮೊಗ್ಗದಲ್ಲಿ ಶ್ರೀಗಂಧದ ಗೊಂಬೆ ಬಿರುದು ನೀಡಿ ಸನ್ಮಾನಿಸಲಾಯಿತು. ಬಳಿಕ ನಟಿ ಪ್ರೇಮಾ ತಮ್ಮ ಮನದಾಳದ ಮಾತುಗಳನ್ನಾಡಿ, ತಮ್ಮ ಸಿನಿಮಾದ ಹಾಡುಗಳನ್ನು ಹೇಳಿ ಪ್ರೇಕ್ಷಕರನ್ನು ರಂಜಿಸಿದರು.
ಸಮನ್ವಯ ಟ್ರಸ್ಟ್ ವತಿಯಿಂದ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಸಮಾರಂಭ ಆಯೋಜಿಸಲಾಗಿತ್ತು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ನಟಿ ಪ್ರೇಮ ಹೇಳಿದ್ದೇನು?
ಕಾರ್ಯಕ್ರಮದಲ್ಲಿ ಮಾತನಾಡಿದ ನಟಿ (Actress) ಪ್ರೇಮಾ ಅವರು, ಸಿನಿಮಾಗಳ ನಿರ್ದೇಶಕರು ನನ್ನೊಳಗಿನ ಪ್ರತಿಭೆ ಹೊರತೆಗೆದರು. ಸುನಿಲ್ ಕುಮಾರ್ ದೇಸಾಯಿ, ಉಪೇಂದ್ರ ಸೇರಿದಂತೆ ಎಲ್ಲಾ ನಿರ್ದೇಶಕರನ್ನು ಸ್ಮರಿಸಿಕೊಳ್ಳುತ್ತೇನೆ. ಆಗ ಪ್ರೇಮಾಗಾಗಿಯೇ ಕಥೆ ಮಾಡುತ್ತಿದ್ದರು. ಹಲವು ರೀತಿಯ ಪಾತ್ರಗಳನ್ನು ನಿರ್ವಹಿಸಿದ್ದೆ. ಈಚೆಗೆ ಸವಾಲಿನ ಪಾತ್ರಗಳು ಸಿಗದ ಹಿನ್ನೆಲೆ ಚಿತ್ರರಂಗದಿಂದ ವಿರಾಮ ಪಡೆದುಕೊಂಡಿದ್ದೆ ಎಂದರು.
ಸಾಧನೆ ಎಲ್ಲರಿಗು ಸಾಧ್ಯವಿಲ್ಲ
ನಿರ್ದೇಶಕ ಸುನಿಲ್ ಕುಮಾರ್ ದೇಸಾಯಿ ಅವರು ಮಾತನಾಡಿ, ನಟಿ ಪ್ರೇಮಾ ಅವರು ಪ್ರತಿ ಪಾತ್ರವನ್ನು ಅನುಭವಿಸಿ, ಅಭಿನಯಿಸಿದ್ದಾರೆ. ನಮ್ಮೂರ ಮಂದಾರ ಹೂವೆ ಚಿತ್ರದ ಚಿತ್ರೀಕರಣದ ವೇಳೆ ಕೆಲವು ವೇಳೆ ಇವರ ಅಭಿನಯ ನನ್ನಲ್ಲಿ ಕಣ್ಣೀರು ತರಿಸಿತ್ತು. ಪ್ರೇಮಾ ಅವರು ಸಾಧನೆಯ ಶಿಖರವನ್ನು ಏರಿದ್ದಾರೆ. ಸಾಧನೆ ಮಾಡುವವರ ಬದುಕು ಹೋರಾಟವಾಗಿರುತ್ತದೆ. ಈ ಹಾದಿಯಲ್ಲಿ ಸುಖ, ದುಃಖವನ್ನು ನಿಭಾಯಿಸಿದರೆ ಶಿಖರವನ್ನು ಏರಬಹುದಾಗಿದೆ ಎಂದರು.
ಮಗನ ಹೆಸರಿಗೆ ದೇಸಾಯಿ ಸಿನಿಮಾ ಪ್ರೇರಣೆ
ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರು ಮಾತನಾಡಿ, ಚಲನಚಿತ್ರ ಕ್ಷೇತ್ರದಲ್ಲಿ ಅವಕಾಶಗಳು ಕಡಿಮೆ. ಆದರೆ ನೂರಾರು ಸಿನಿಮಾಗಳನ್ನು ನಿರ್ದೇಶಿಸಿ, ಯಾಣದಂತಹ ಪ್ರವಾಸಿ ತಾಣವನ್ನು ಜನರಿಗೆ ಪರಿಚಯಿಸಿದ ಕೀರ್ತಿ ಸುನಿಲ್ ಕುಮಾರ್ ದೇಸಾಯಿ ಮತ್ತು ಪ್ರೇಮಾ ಅವರಿಗೆ ಸಲ್ಲುತ್ತದೆ. ಸುನಿಲ್ ಕುಮಾರ್ ದೇಸಾಯಿ ಅವರ ಬೆಳದಿಂಗಳ ಬಾಲೆ ಸಿನಿಮಾದಲ್ಲಿ ರೇವಂತ್ ಎಂಬ ಪಾತ್ರವಿದೆ. ನನ್ನ ಮಗನಿಗೆ ಹೆಸರಿಡಲು ಆ ಪಾತ್ರವೆ ಪ್ರೇರಣೆಯಾಯಿತು ಎಂದರು.
ಶ್ರೀಗಂಧದ ಗೊಂಬೆಯ ಹಾಡು
ನಟಿ ಪ್ರೇಮಾ ಅಭಿನಯದ ವಿವಿಧ ಸಿನಿಮಾಗಳ ಹಾಡು, ಡಾನ್ಸ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ನಟಿ ಪ್ರೇಮಾ ಅವರು ಗಾಯಕರೊಂದಿಗೆ ಹಾಡು ಹೇಳಿ ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿದರು. ಇದೆ ವೇಳೆ ವಿವಿಧ ಚಿತ್ರ ತಾರೆಯರು ಪ್ರೇಮಾ ಅವರ ಕುರಿತು ಮಾತನಾಡಿದ ವಿಡಿಯೋಗಳನ್ನು ವೇದಿಕೆಯಲ್ಲಿ ಪ್ರಸಾರ ಮಾಡಲಾಯಿತು.
ಇದನ್ನೂ ಓದಿ – ಶಿವಮೊಗ್ಗ ವಿಮಾನ ನಿಲ್ದಾಣದ ಹೈಟೆಕ್ ಟರ್ಮಿನಲ್, ಒಳಗೆ ಹೇಗಿದೆ? ಏನೇನು ಸೌಲಭ್ಯವಿದೆ? ಇಲ್ಲಿದೆ ಕಂಪ್ಲೀಟ್ ಮಾಹಿತಿ
ಸಮನ್ವಯ ಟ್ರಸ್ಟ್ ನಿರ್ವಾಹಕ ನಿರ್ದೇಶಕ ಕಾಶಿ, ಹಾರ್ಟ್ ಫುಲ್‌ನೆಸ್ ಸಂಸ್ಥೆ ರಾಜ್ಯ ಸಂಚಾಲಕ ಕೆ.ಮಧುಸೂದನ್, ಅರವಿಂದ ಶಶಿ ಇದ್ದರು. ಕಾರ್ಯಕ್ರಮದ ಬಳಿಕ ನಟಿ ಪ್ರೇಮಾ ಅವರೊಂದಿಗೆ ಸೆಲ್ಫಿ, ಫೋಟೋಗೆ ಜನರು ಮುಗಿಬಿದ್ದರು.