ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE | 6 JULY 2023
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
SHIMOGA : ಕೊಲೆ ಪ್ರಕರಣವೊಂದರ ನಾಲ್ವರು ಆರೋಪಿಗಳಿಗೆ ಶಿವಮೊಗ್ಗ ನ್ಯಾಯಾಲಯವು ಜೀವಾವಧಿ ಶಿಕ್ಷೆ (Life Time Imprisonment) ಮತ್ತು ತಲಾ 50 ಸಾವಿರ ರೂ. ದಂಡ ವಿಧಿಸಿದೆ. ಅಣ್ಣಾನಗರ ಮುಖ್ಯರಸ್ತೆಯಲ್ಲಿ 2017ರಲ್ಲಿ ಹಯಾತುಲ್ಲಾಖಾನ್ ಎಂಬಾತನ ಹತ್ಯೆ ಮಾಡಲಾಗಿತ್ತು. ಅರ್ಬಾಜ್, ಶಾರುಕ್ ಖಾನ್, ಸದಾಬ್, ಅಲ್ಯಾಜ್ ಅಶುಗೆ ಜೀವಾವಧಿ ಶಿಕ್ಷೆಯಾಗಿದೆ.
ಏನಿದು ಪ್ರಕರಣ? ಹತ್ಯೆಗೇನು ಕಾರಣ?
ಅಣ್ಣಾನಗರ ವಾಸಿ ಹಯಾತುಲ್ಲಾಖಾನ್ ಅಲಿಯಾಸ್ ಬಚ್ಚಾ (19) ಗ್ಯಾಂಗ್ ಮತ್ತು ಟಿಪ್ಪು ನಗರ ನಿವಾಸಿಗಳಾದ ಕುರ್ರಮ್ ಮತ್ತು ಇಮ್ರಾನ್ ಷರೀಫ್ ಗ್ಯಾಂಗ್ ಮಧ್ಯೆ ಹಳೆ ದ್ವೇಷವಿತ್ತು. 2016ರಲ್ಲಿ ಕುರ್ರಮ್‌ನ ಸಹಚರ ಶಾಹಿದ್ ಬಾಷಾ ಎಂಬಾತನಿಗೆ ಹಯಾತುಲ್ಲಾ ಖಾನ್ ಮತ್ತು ಗ್ಯಾಂಗ್ ಚಾಕು ಚುಚ್ಚಿ ಕೊಲೆಗೆ ಯತ್ನಿಸಿತ್ತು. ಈ ಪ್ರಕರಣದಲ್ಲಿ ಹಯಾತುಲ್ಲಾ ಖಾನ್ ಜೈಲಿಗೆ ಹೋಗಿದ್ದ. ಬಿಡುಗಡೆಯಾಗಿ ಬಂದ ಮೇಲೆ ಕುರ್ರಮ್ ಗ್ಯಾಂಗಿನವರು ಹಯಾತುಲ್ಲಾನ ಕೊಲೆಗೆ ಸಂಚು ರೂಪಿಸಿದ್ದರು.
ಸ್ಟೂಡಿಯೋ ಮುಂದೆ ಒಬ್ಬನೆ ಕುಳಿತಿದ್ದಾಗ ದಾಳಿ
2017ರ ಫೆಬ್ರವರಿ 8ರಂದು ಹಯಾತುಲ್ಲಾ ಖಾನ್ ಅಣ್ಣಾ ನಗರ ಮುಖ್ಯ ರಸ್ತೆಯಲ್ಲಿರುವ ಸ್ಟೂಡಿಯೋ ಒಂದರ ಮುಂದೆ ಒಬ್ಬನೆ ಕುಳಿತಿದ್ದ. ಮಾಹಿತಿ ತಿಳಿಯುತ್ತಿದ್ದಂತೆ ಕುರ್ರಮ್ ಗ್ಯಾಂಗ್ ಮಾರಕಾಸ್ತ್ರ ಸಹಿತ ದಾಳಿ ನಡೆಸಿತ್ತು. ಅರ್ಬಾಜ್, ಶಾರುಕ್ ಖಾನ್, ಸದಾಬ್, ಅಲ್ಯಾಜ್ ಅಶು ಚಾಕುವಿನಿಂದ ಹಯಾತುಲ್ಲಾಖಾನ್‌ನ ಹೊಟ್ಟೆ, ಎದೆ, ಪಕ್ಕೆಗೆ ಚುಚ್ಚಿ ಕೊಲೆ ಮಾಡಿದ್ದರು. ಬಳಿಕ ಬಚ್ಚಾ ಮರ್‌ಗಯಾ ಎಂದು ಕೂಗುತ್ತ ಬೈಕಿನಲ್ಲಿ ಹೋಗಿದ್ದರು.
ಇದನ್ನೂ ಓದಿ – ಗ್ಯಾಸ್ ಏಜೆನ್ಸಿ ಶುರು ಮಾಡುವುದು ಹೇಗೆ? ಗೂಗಲ್‌ನಲ್ಲಿ ಹುಡುಕಿದ ನಿವೃತ್ತ ಉದ್ಯೋಗಿಗೆ ಕೊನೆಗೆ ಕಾದಿತ್ತು ಶಾಕ್
ಆರೋಪ ಸಬೀತು, ಶಿಕ್ಷೆ ಪ್ರಕಟ
ಘಟನೆ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖಾಧಿಕಾರಿ ಕೆ.ಟಿ.ಗುರುರಾಜ್ ಅವರು ತನಿಖೆ ನಡೆಸಿ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ದೊಡ್ಡಪೇಟೆ ಠಾಣೆಯ ಸಿಬ್ಬಂದಿ ಸುರೇಶ್ ಮತ್ತು ತುಂಗಾ ನಗರ ಠಾಣೆಯ ಸಿಬ್ಬಂದಿ ಉಮೇಶ್ ತನಿಖೆ ವೇಳೆ ಸಹಕರಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಕೆ.ಎಸ್. ಮಾನು ಅವರು ನಾಲ್ವರು ಅಪರಾಧಿಗಳಿಗೆ ಜೀವವಾಧಿ ಶಿಕ್ಷೆ (Life Time Imprisonment), ತಲಾ 50 ಸಾವಿರ ರೂ. ದಂಡ ವಿಧಿಸಿದ್ದಾರೆ. ದಂಡ ಕಟ್ಟಲು ವಿಫಲವಾದರೆ ಆರು ತಿಂಗಳು ಹೆಚ್ಚುವರಿ ಶಿಕ್ಷೆ ವಿಧಿಸುವಂತೆ ಶಿಕ್ಷೆ ಪ್ರಕಟಿಸಲಾಗಿದೆ.
ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾಗಿ ಜೆ.ಶಾಂತರಾಜ್ ವಾದ ಮಂಡಿಸಿದ್ದರು.