ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 13 JUNE 2024
SHIMOGA : ಜಿಲ್ಲೆಯಲ್ಲಿ ಡೆಂಗ್ಯು (Dengue) ಪ್ರಕರಣ ನಿಯಂತ್ರಣಕ್ಕೆ ಜಿಲ್ಲಾಡಳಿತ, ಆರೋಗ್ಯ ಇಲಾಖೆ, ಪಾಲಿಕೆ ವತಿಯಿಂದ ಸಾಲು ಸಾಲು ಸಭೆ ನಡೆಸಲಾಗುತ್ತಿದೆ. ಆದರೆ ಅಧಿಕಾರಿಗಳು, ಗುತ್ತಿಗೆದಾರರ ನಿರ್ಲಕ್ಷ್ಯಕ್ಕೆ ಬೊಮ್ಮನಕಟ್ಟೆ ಮುಖ್ಯ ರಸ್ತೆಯಲ್ಲಿ ‘ಡೆಂಗ್ಯೂ ಕಾರ್ಖಾನೆʼಯೆ ಸ್ಥಾಪನೆಯಾಗಿದೆ. ಇನ್ನಷ್ಟು ದಿನ ಪರಿಸ್ಥಿತಿ ಹೀಗೇ ಮುಂದುವರೆದರೆ ನೂರಾರು ಮಂದಿ ಇಲ್ಲಿ ಡೆಂಗ್ಯುಗೆ ತುತ್ತಾಗುವುದು ನಿಶ್ಚಿತ.
ಏನಾಗಿದೆ ಬೊಮ್ಮನಕಟ್ಟೆಯಲ್ಲಿ?
ಸಾನ್ವಿ ಲೇಔಟ್ ಕೆರೆ ಪಕ್ಕದಲ್ಲಿ ಬೊಮ್ಮನಕೆಟ್ಟೆ ಮುಖ್ಯ ರಸ್ತೆಯಲ್ಲಿ ಪಾಲಿಕೆ ವತಿಯಿಂದ ಚರಂಡಿ ಕಾಮಗಾರಿ ಶುರು ಮಾಡಲಾಗಿದೆ. ಸುಮಾರು 15 ದಿನದ ಹಿಂದೆ ಜೆಸಿಬಿ ಬಳಸಿ ಅಂದಾಜು 200 ಮೀಟರ್ ದೂರದವರೆಗೆ ರಸ್ತೆ ಅಗೆದು ಹಾಗೆ ಬಿಡಲಾಗಿದೆ. ಅಗೆದಿರುವ ಎರಡೂ ತುದಿಯಲ್ಲೂ ನೀರು ಹರಿದು ಹೋಗದ ಹಾಗೆ ಬಂದ್ ಮಾಡಲಾಗಿದೆ. ಹಾಗಾಗಿ ಅಕ್ಕಪಕ್ಕದ ಮನೆಗಳು ಮತ್ತು ಡಿ ಬ್ಲಾಕ್‌ನ ಚರಂಡಿ ನೀರು ಇಲ್ಲಿ ಬಂದು ಸಂಗ್ರಹವಾಗಿದೆ.
ಡೆಂಗ್ಯೂ ಕಾಯಿಲೆ ಕಾರ್ಖಾನೆ..!
ಚರಂಡಿಗಾಗಿ ರಸ್ತೆ ಅಗೆದು 15 ದಿನವಾದರೂ ಅಧಿಕಾರಿಗಳು, ಗುತ್ತಿಗೆದಾರರು ಇತ್ತ ತಲೆ ಹಾಕಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಚರಂಡಿ ದಾಟಿ ಮನೆ ತಲುಪಲು ನಿವಾಸಿಗಳು ಕಷ್ಟಪಡುತ್ತಿದ್ದಾರೆ. ಮರದ ದಬ್ಬೆ, ತಗಡಿನ ಶೀಟ್ ಹಾಕಿಕೊಂಡು ಭಯದಲ್ಲಿಯೇ ದಾಟುತ್ತಿದ್ದಾರೆ. ಇವುಗಳು ಮುರಿದು ಈಗಾಗಲೇ ಹಲವರು ಬಿದ್ದು ಗಾಯಗೊಂಡಿದ್ದಾರೆ. ಮಕ್ಕಳು, ಹಿರಿಯರು ಮನೆಯಿಂದ ಹೊರ ಬರಲಾಗದ ಸ್ಥಿತಿ ಇದೆ.
ಇನ್ನು, ಇಲ್ಲಿ ನೀರು ಸಂಗ್ರಹವಾಗಿ ರಾಶಿ ರಾಶಿ ಸೊಳ್ಳೆ ಉತ್ಪತ್ತಿಯಾಗುತ್ತಿವೆ. ಡೆಂಗ್ಯು ಜ್ವರದ ಭೀತಿಯು ಉಂಟಾಗಿದೆ. ಚರಂಡಿ ಕಾಮಗಾರಿ ಹಿನ್ನೆಲೆ ಮನೆಯವರು ದುರ್ವಾಸನೆಯಲ್ಲಿ ದಿನ ದೂಡುವಂತಾಗಿದೆ.
‘ಚರಂಡಿ ನೀರು ನಿಂತಲ್ಲೆ ನಿಂತು ಸೊಳ್ಳೆ ಉತ್ಪತ್ತಿಯಾಗುತ್ತಿವೆ. ಈ ಭಾಗದಲ್ಲಿ ಡೆಂಗ್ಯು ಪ್ರಕರಣಗಳು ವರದಿಯಾಗಿವೆ. ಸಂಜೆ ವೇಳೆ ಮನೆ, ಅಂಗಡಿಗಳ ಬಾಗಿಲು ತೆರೆದು ಕೂರಲು ಸಾಧ್ಯವಾಗದಂತೆ ಸೊಳ್ಳೆಗಳು ಕಾಡುತ್ತವೆ. ಅಧಿಕಾರಿಗಳಿಗೆ ಕರೆ ಮಾಡಿದರೆ ಸರಿಪಡಿಸುತ್ತೇವೆ ಎಂದು ಸಬೂಬು ಹೇಳುತ್ತಿದ್ದಾರೆ ಹೊರತು ಯಾವುದೇ ಪ್ರಯೋಜನವಾಗಿಲ್ಲ.’ಡಾ. ರಶ್ಮಿ ಎಸ್.ಫ್ರಾನ್ಸಿಸ್, ವೈದ್ಯೆ ಮತ್ತು ಸ್ಥಳೀಯರು
ಸಂಪಾದನೆ ಕಸಿದ ಚರಂಡಿ
‘ಚರಂಡಿಗಾಗಿ ರಸ್ತೆ ಅಗೆದು 15 ರಿಂದ 20 ದಿನವಾಗಿದೆ. ಅಂದಿನಿಂದ ನಮ್ಮ ಹೊಟೇಲ್‌ಗೆ ಗ್ರಾಹಕರು ಇಲ್ಲ. ಚರಂಡಿ ದಾಟಿ ಬರುಲು ಜನ ಹಿಂದೇಟು ಹಾಕುತ್ತಾರೆ. ದುರ್ವಾಸನೆ ಇರುವುದರಿಂದ ಊಟ ಮಾಡುವುದಕ್ಕೆ ಕಷ್ಟವಾಗಲಿದೆ ಎಂದು ಗ್ರಾಹಕರು ಇತ್ತ ಮುಖ ಮಾಡುತ್ತಿಲ್ಲ. ಸಮಸ್ಯೆ ಯಾರಿಗೆ ಹೇಳುವುದು ಗೊತ್ತಾಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಹೊಟೇಲ್ ಮಾಲೀಕ ಸೋಮಶೇಖರ್.
‘ಕಾಮಗಾರಿ ಪೂರ್ಣಗೊಳಿಸದೆ ಇದ್ದ ಮೇಲೆ ಸುಮ್ಮನೆ ಅಗೆದಿದ್ದೇಕೆ. ಮಳೆಯಾದರೆ ಚರಂಡಿ ನೀರು ಸಂಪೂರ್ಣವಾಗಿ ಮನೆಗಳ ಒಳಗೆ ನುಗ್ಗುತ್ತದೆ. ಹಿರಿಯರು, ಮಕ್ಕಳು ಮನೆಯಿಂದ ಹೊರಗೆ ಬರಲು ಆಗುತ್ತಿಲ್ಲʼ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ ಸ್ಥಳೀಯರಾದ ಮಧು.
ಮಳೆಗಾಲದ ಸಮೀಪಿಸುತ್ತಿದೆ ಎಂದು ಗೊತ್ತಿದ್ದೂ ಪಾಲಿಕೆ ಅಧಿಕಾರಿಗಳು ಚರಂಡಿ ಕಾಮಗಾರಿ ನಡೆಸಲು ಮುಂದಾಗಿರುವುದು ವಿಪರ್ಯಾಸ. ಇನ್ನು, ಕಾಮಗಾರಿ ಆರಂಭಕ್ಕು 15 ದಿನ ಮೊದಲೇ ರಸ್ತೆ ಅಗೆದು ಜನರನ್ನು ಪೀಡಿಸುತ್ತಿರುವುದು ಸರಿಯಲ್ಲ. ಇನ್ನಾದರೂ ಕಾಮಗಾರಿ ಪೂರ್ಣಗೊಳಿಸಿ ಜನರನ್ನು ಸಂಕಷ್ಟದಿಂದ ದೂರ ಮಾಡುತ್ತದೆಯೆ ಕಾದು ನೋಡಬೇಕು.
ಇದನ್ನೂ ಓದಿ – ಡೆಂಗ್ಯುಗೆ ಸಾಗರದ ಆರೋಗ್ಯ ಇಲಾಖೆ ನೌಕರ ಶಿವಮೊಗ್ಗದಲ್ಲಿ ಕೊನೆಯುಸಿರು
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422