SHIMOGA TOURISM | ಶಿವಮೊಗ್ಗ ಜಿಲ್ಲೆ ಪ್ರವಾಸಿ ತಾಣಗಳ ತವರು. ಶಿವಮೊಗ್ಗ ಸಿಟಿಯ ಹತ್ತದಿನೈದು ಕಿ.ಮೀ ವ್ಯಾಪ್ತಿಯಲ್ಲೇ ಹಲವು ಟೂರಿಸಂ ಸ್ಪಾಟ್‌ಗಳಿವೆ. ಕುಟುಂಬದ ಜೊತೆಗೆ, ಸ್ನೇಹಿತರೊಟ್ಟಿಗೆ ಪಿಕ್ನಿಕ್ ಹೋಗಿ ಬರಲು ಈ ತಾಣಗಳು ಸೂಕ್ತ. ಸದ್ಯ ಶಿವಮೊಗ್ಗ ಸಿಟಿ ಮತ್ತು ಸುತ್ತಮುತ್ತ ಇರುವ ಒನ್ ಡೇ ಪಿಕ್ನಿಕ್ ಸ್ಪಾಟ್‌ಗಳ ಲಿಸ್ಟ್ ಇಲ್ಲಿದೆ.
» ಪಿಕ್ನಿಕ್ ಸ್ಪಾಟ್ 1
ಶಿವಪ್ಪನಾಯಕ ಅರಮನೆ
ತುಂಗಾ ನದಿ ದಡದಲ್ಲಿ 16ನೇ ಶತಮಾನದಲ್ಲಿ ಕೆಳದಿಯ ಅರಸು ಶಿವಪ್ಪನಾಯಕ ಕಟ್ಟಿಸಿದ ಅರಮನೆ ಇದು. ವಿಶಾಲವಾದ ಜಗುಲಿ, ಗಾರೆಯಿಂದ ನಿರ್ಮಾಣವಾದ ಭದ್ರ ಗೋಡೆಗಳು, ಸುಂದರ ಮರದ ಕೆತ್ತನೆಗಳನ್ನು ಹೊಂದಿದೆ. ನಮ್ಮೂರಿನ ಇತಿಹಾಸ ತಿಳಿಯಲು ಇದು ಸೂಕ್ತ ಸ್ಥಳ. ಸ್ಮಾರ್ಟ್ ಸಿಟಿ ಕಾಮಗಾರಿ ಹಿನ್ನೆಲೆ ಸಾರ್ವಜನಿಕರ ಪ್ರವೇಶ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ.
![]() |
» ಪಿಕ್ನಿಕ್ ಸ್ಪಾಟ್ 2
ತುಂಗಾ ರಿವರ್ ಫ್ರಂಟ್
ಸ್ಮಾರ್ಟ್ ಸಿಟಿ ವತಿಯಿಂದ ನಿರ್ಮಿಸಲಾದ ತುಂಗಾ ನದಿ ರಿವರ್ ಫ್ರೆಂಟ್ ಉತ್ತಮ ಪಿಕ್ನಿಕ್ ಸ್ಪಾಟ್. ಹಳೆ ಸೇತುವೆಯಿಂದ ಬೈಪಾಸ್ ರಸ್ತೆಯ ಸೇತುವೆವರೆಗೆ ತುಂಗಾ ನದಿ ದಂಡೆ ಮೇಲೆ ಓಡಾಡಲು, ಸೈಕ್ಲಿಂಗ್ ಮಾಡಲು, ತುಂಗಾ ನದಿಯನ್ನು ನೋಡುತ್ತ, ತಂಗಾಳಿ ಸವಿಯುತ್ತ ವಿಶ್ರಾಂತಿ ಪಡೆಯಲು ಸೂಕ್ತ ಸ್ಥಳ. ಆದರೆ ರಿವರ್ ಫ್ರಂಟ್‌ಗೆ ತೆರಳುವವರಿಗೆ ಪ್ರವೇಶ ದರ ಇರಲಿದೆ.
» ಪಿಕ್ನಿಕ್ ಸ್ಪಾಟ್ 3
ಗಾಂಧಿ ಪಾರ್ಕ್, ಸೈನಿಕ ಪಾರ್ಕ್
ನಗರದ ಮಧ್ಯದಲ್ಲಿರುವ ಗಾಂಧಿ ಪಾರ್ಕ್ ಆಹ್ಲಾದಕರವಾಗಿರಲಿದೆ. ಮರದಡಿ ಕುಳಿತು ಹರಟುವವರಿಗೆ ಉತ್ತಮ ತಾಣ. ಆಟಿಕೆಗಳು, ಪ್ರಾಣಿಗಳ ಕಲಾಕೃತಿಗಳು, ಆಕ್ವೇರಿಯಂ ಮಕ್ಕಳಿಗೆ ಇಷ್ಟವಾಗಲಿದೆ. ಇನ್ನು, ಆರ್‌ಟಿಒ ಕಚೇರಿ ರಸ್ತೆಯಲ್ಲಿರುವ ಸೈನಿಕ ಪಾರ್ಕ್ ಪ್ರವಾಸಿಗರ ಗಮನ ಸೆಳೆಯುತ್ತಿದೆ. ಸೈನಿಕರ ಸಾಹಸಗಾಥೆ ಸಾರುವ ಕಲಾಕೃತಿಗಳು ದೇಶಭಕ್ತಿ ಮೂಡಿಸುತ್ತದೆ.
» ಪಿಕ್ನಿಕ್ ಸ್ಪಾಟ್ 4
ಗಾಜನೂರು ಜಲಾಶಯ
ಶಿವಮೊಗ್ಗ – ತೀರ್ಥಹಳ್ಳಿ ರಸ್ತೆಯಲ್ಲಿ ಗಾಜನೂರಿನಲ್ಲಿ ತುಂಗಾ ಜಲಾಶಯವಿದೆ. ಸಿಟಿಯಿಂದ 10 ಕಿ.ಮೀ ದೂರದಲ್ಲಿ ಜಲಾಶಯವಿದೆ. ಸದ್ಯ ಜಲಾಶಯ ಭರ್ತಿಯಾಗಿದ್ದು ಮನಮೋಹಕ ನೋಟವಿರಲಿದೆ. ಈ ಸುದ್ದಿ ಪ್ರಕಟವಾಗುವ ಹೊತ್ತಿಗೆ ಜಲಾಶಯಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ. ಮಳೆ ಕಡಿಮೆಯಾದ ಬಳಿಕ ಪುನಃ ಸಾರ್ವಜನಿಕ ಪ್ರವೇಶಕ್ಕೆ ಅವಕಾಶ ನೀಡುವ ಸಾಧ್ಯತೆ ಇದೆ.
» ಪಿಕ್ನಿಕ್ ಸ್ಪಾಟ್ 5
ಸಕ್ರೆಬೈಲು ಆನೆ ಬಿಡಾರ
ಶಿವಮೊಗ್ಗ ತೀರ್ಥಹಳ್ಳಿ ಮಾರ್ಗದಲ್ಲಿ 12 ಕಿ.ಮಿ. ದೂರದಲ್ಲಿ ಸಕ್ರೆಬೈಲಿನಲ್ಲಿ ಆನೆ ಬಿಡಾರವಿದೆ. ಬೆಳಗ್ಗೆ ಬೇಗ ಹೋದರೆ ತುಂಗಾ ನದಿಯಲ್ಲಿ ಆನೆಗಳಿಗೆ ಸ್ನಾನ ಮಾಡಿಸಬಹುದು. ಸ್ಟಾಂಡ್‌ನಲ್ಲಿ ನಿಂತ ಆನೆಗಳನ್ನು ನೋಡಿ, ಫೋಟೊ ಕ್ಲಿಕ್ಕಿಸಿಕೊಳ್ಳಬಹುದು. ಮಧ್ಯಾಹ್ನದ ಹೊತ್ತಿಗೆ ಆನೆಗಳನ್ನು ಕಾಡಿಗೆ ಕರೆದೊಯ್ಯಲಾಗುತ್ತದೆ. ಅಷ್ಟರೊಳಗೆ ಪ್ರವಾಸಿಗರು ಬಿಡಾರಕ್ಕೆ ಭೇಟಿ ನೀಡಬೇಕು. ಪ್ರವೇಶ ದರ ಇರಲಿದೆ.
» ಪಿಕ್ನಿಕ್ ಸ್ಪಾಟ್ 6
ತ್ಯಾವರೆಕೊಪ್ಪ ಹುಲಿ – ಸಿಂಹಧಾಮ
ಶಿವಮೊಗ್ಗ – ಸಾಗರ ರಸ್ತೆಯಲ್ಲಿ 10 ಕಿ.ಮಿ. ದೂರದಲ್ಲಿದೆ ಸಿಂಹಧಾಮ. ಹುಲಿ, ಸಿಂಹ, ಚಿರತೆ, ತೋಳ, ಕರಡಿ, ಉಷ್ಟ್ರಪಕ್ಷಿ, ಕೆಂದಳಿಲು, ಹೆಬ್ಬಾವು, ಕಾಡುಕೋಣ ಮುಂತಾದ ಪ್ರಾಣಿ-ಪಕ್ಷಿಗಳನ್ನು ಇಲ್ಲಿ ನೋಡಬಹುದು. ಒಳಗೆ ಮ್ಯೂಸಿಯಂ ಇದೆ. ಪ್ರಾಣಿ, ಪಕ್ಷಿ ಪ್ರಪಂಚದ ಕುರಿತು ಅರಿಯಲು ಇದು ಸೂಕ್ತ ಸ್ಥಳ. ಪ್ರವೇಶ ದರವಿದೆ.
» ಪಿಕ್ನಿಕ್ ಸ್ಪಾಟ್ 7
ಪುರದಾಳು ಡ್ಯಾಂ
ಶಿವಮೊಗ್ಗ ನಗರ ಪಾಲಿಕೆ ವ್ಯಾಪ್ತಿಯ ಗಡಿ ಅಂಚಿನಲ್ಲಿರುವ ಪುರದಾಳು ಅಣೆಕಟ್ಟೆ ಪ್ರಮುಖ ಪ್ರವಾಸಿ ತಾಣವಾಗಿ ಬದಲಾಗಿದೆ. ಪುರದಾಳು (ಬಾರೆ ಹಳ್ಳ) ಚೆಕ್ ಡ್ಯಾಮ್ ತುಂಬಿ, ಕೋಡಿ ಬಿದ್ದ ದೃಶ್ಯ ನೋಡಲು ಮನಮೋಹಕವಾಗಿರುತ್ತದೆ. ವಿವಿಧೆಡೆಯಿಂದ ಜನರು ಇಲ್ಲಿ ಬಂದು ಫೋಟೊ ಕ್ಲಿಕ್ಕಿಸಿಕೊಂಡು ಸಂಭ್ರಮಿಸುತ್ತಾರೆ.
» ಪಿಕ್ನಿಕ್ ಸ್ಪಾಟ್ 8
ರಾಗಿಗುಡ್ಡ
ರಾಗಿಗುಡ್ಡ ಎಂದು ಪ್ರಖ್ಯಾತಿ ಪಡೆದಿರುವ ನಯನಗಿರಿ ನಗರ ಪ್ರಮುಖ ಪ್ರವಾಸಿ ತಾಣವಾಗಿದೆ. ಗುಡ್ಡದ ಮೇಲೆ ಹಲವು ದೇಗುಲಗಳಿವೆ. ಪ್ರಶಾಂತ ವಾತವರಣವಿರುವ ತಾಣ. ಗುಡ್ಡದ ಮೇಲೆ ಹತ್ತಿದರೆ ಶಿವಮೊಗ್ಗ ನಗರದ ವಿಹಂಗಮ ನೋಟ ಕಾಣಿಸಲಿದೆ.
» ಪಿಕ್ನಿಕ್ ಸ್ಪಾಟ್ 9
ಕೂಡ್ಲಿ
ರಾಜ್ಯದ ಪ್ರಮುಖ ನದಿಗಳಾದ ತುಂಗಾ ಹಾಗೂ ಭದ್ರಾ ಸೇರಿ ತುಂಗಭದ್ರ ನದಿಯಾಗಿ ಮುಂದುವರಿಯುವ ಸಂಗಮ ತಾಣ ಈ ಕೂಡ್ಲಿ. ಶಂಕರಾಚಾರ್ಯರ ಪಾದಸ್ಪರ್ಶಗಳಿಂದ ಪಾವನವಾದ ತಾಣ ಎಂಬ ನಂಬಿಕೆ ಇದೆ. ನದಿಯ ದಡದಲ್ಲಿರುವ ಶ್ರೀ ಸಂಗಮೇಶ್ವರ ಹಾಗೂ ಶ್ರೀ ಚಿಂತಾಮಣಿ ನರಸಿಂಹ ದೇವಸ್ಥಾನಗಳು ಐತಿಹಾಸಿಕ ಶಿಲ್ಪಕಲೆಗಳ ಸಾಕ್ಷಿಯಾಗಿವೆ. ಶಿವಮೊಗ್ಗದಿಂದ ಹೊಳೆಹೊನ್ನೂರು ಮಾರ್ಗದಲ್ಲಿ 16 ಕಿ.ಮಿ. ದೂರದಲ್ಲಿದೆ ಈ ತಾಣ.
» ಪಿಕ್ನಿಕ್ ಸ್ಪಾಟ್ 10
ಅಮೂಲ್ಯ ಶೋಧ
ಇದು ಖಾಸಗಿ ವಸ್ತು ಸಂಗ್ರಹಾಲಯ. ಶಿವಮೊಗ್ಗದ ಇತಿಹಾಸ ತಜ್ಞ ಹೆಚ್.ಖಂಡೋಬರಾವ್ ಅವರ ಸ್ವಂತ ಪರಿಶ್ರಮದಿಂದ ವಸ್ತು ಸಂಗ್ರಹಾಲಯ ನಿರ್ಮಿಸಿದ್ದಾರೆ. ನಾಣ್ಯಗಳು, ತಾಮ್ರ ಲಿಪಿಯಿಂದ ಹಿಡಿದು ಅನೇಕ ಪ್ರಾಚೀನ ಕಾಲದ ವಸ್ತುಗಳು, ಮಲೆನಾಡ ಸಂಸ್ಕೃತಿಯ ಚಿತ್ರಣ ಇಲ್ಲಿದೆ. ಇತಿಹಾಸ ಅಧ್ಯಯನದಲ್ಲಿ ಆಸಕ್ತಿ ಇರುವವರನ್ನು ಕೈಬೀಸಿ ಕರೆಯುತ್ತದೆ. ಶಿವಮೊಗ್ಗ ಎನ್.ಆರ್.ಪುರ ರಸ್ತೆಯಲ್ಲಿ ಲಕ್ಕಿನಕೊಪ್ಪ ಗ್ರಾಮದಲ್ಲಿ ಅಮೂಲ್ಯ ಶೋಧ ವಸ್ತು ಸಂಗ್ರಹಾಲಯವಿದೆ.
ಇದನ್ನೂ ಓದಿ ⇒ ಶಿವಮೊಗ್ಗ ಲೈವ್‌ನಲ್ಲಿ ಇನ್ಮುಂದೆ ಸುದ್ದಿಯಷ್ಟೇ ಅಲ್ಲ, ಹೊಸ ಕಾಲಂಗಳು ಆರಂಭ, ಏನೆಲ್ಲ ಹೊಸತು ಬರಲಿದೆ?
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200