ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIMOGA NEWS, 8 OCTOBER 2024 : ದೇಶದಲ್ಲಿ ಡಿಜಿಟಲ್ ಅರೆಸ್ಟ್ (Digital Arrest) ವಂಚನೆ ಪ್ರಕರಣ ಹೆಚ್ಚುತ್ತಿವೆ. ಕೇಂದ್ರ ಗೃಹ ಸಚಿವಾಲಯದ ವ್ಯಾಪ್ತಿಯ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ (ಐ4ಸಿ) ಎಚ್ಚರ ವಹಿಸುವಂತೆ ಜನರಿಗೆ ತಿಳಿಸಿದೆ. ಈ ಮಧ್ಯೆ ಕಳೆದ ತಿಂಗಳು ಶಿವಮೊಗ್ಗದಲ್ಲಿ ದಂಪತಿಯ ಡಿಜಿಟಲ್ ಅರೆಸ್ಟ್ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಏನಿದು ಡಿಜಿಟಲ್ ಅರೆಸ್ಟ್?
ಪೊಲೀಸ್, ಸಿಬಿಐ, ಇ.ಡಿ, ಕಸ್ಟಮ್ಸ್ ಅಧಿಕಾರಿಗಳು, ನ್ಯಾಯಾಧೀಶರು ಎಂದು ವಾಟ್ಸಪ್, ಸ್ಕೈಪ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳ ಮೂಲಕ ವಿಡಿಯೋ ಕರೆ ಮಾಡಿ, ಜನರಿಗೆ ಬೆದರಿಕೆ ಒಡ್ಡಲಾಗುತ್ತಿದೆ. ಪ್ರಕರಣ ದಾಖಲಿಸುವುದಾಗಿ ಭೀತಿ ಹುಟ್ಟಿಸಲಾಗುತ್ತಿದೆ. ಬಳಿಕ ಇದೇ ನಪವಾಗಿಸಿಕೊಂಡು ಹಣ ವಸೂಲಿ ಮಾಡಲಾಗುತ್ತಿದೆ.
ಶಿವಮೊಗ್ಗ ನಗರದಲ್ಲಿ ನೆಲೆಸಿರುವ ನಿವೃತ್ತ ಉದ್ಯೋಗಿಗೆ (ಹೆಸರು ಗೌಪ್ಯ) ಟೆಲಿಕಾಂ ಸಂಸ್ಥೆಯ ಹೆಸರು ಹೇಳಿಕೊಂಡು ವ್ಯಕ್ತಿಯೊಬ್ಬ ಕರೆ ಮಾಡಿದ್ದ. ಮುಂಬೈ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ತಮಗೆ ವಿಡಿಯೋ ಕರೆ ಮಾಡಲಿದ್ದಾರೆ ಎಂದು ತಿಳಿಸಿದ್ದ. ಕೆಲವೇ ಹೊತ್ತಿನಲ್ಲಿ ವಿಡಿಯೋ ಕರೆ ಬಂದಿದೆ. ನಿವೃತ್ತ ಉದ್ಯೋಗಿ ರಿಸೀವ್ ಮಾಡಿದಾಗ, ಪೊಲೀಸ್ ಸಮವಸ್ತ್ರ ಧರಿಸಿದ್ದ ವ್ಯಕ್ತಿಯೊಬ್ಬ ವಿಡಿಯೋ ಕಾಲ್ನಲ್ಲಿ ಮಾತನಾಡಿದ್ದ ಎಂದು ಆರೋಪಿಸಲಾಗಿದೆ.ಶಿವಮೊಗ್ಗದಲ್ಲಿ ದಂಪತಿಯ ಡಿಜಿಟಲ್ ಅರೆಸ್ಟ್
ನೀವೇ ಮೊದಲ ಆರೋಪಿ
‘ನಿಮ್ಮ ಆಧಾರ್ ಕಾರ್ಡ್ ಬಳಸಿ ಮುಂಬೈನ ಬ್ಯಾಂಕ್ ಆಫ್ ಬರೋಡದಲ್ಲಿ ಖಾತೆ ತೆರೆಯಲಾಗಿದೆ. ಅದರ ಮೂಲಕ ಸುಮಾರು 200 ಕೋಟಿ ರೂ. ಅವ್ಯವಹಾರವಾಗಿದೆ. ಈ ಸಂಬಂಧ 270 ಆರೋಪಿಗಳನ್ನು ಗುರುತಿಸಲಾಗಿದೆ. ನೀವೆ ಪ್ರಥಮ ಆರೋಪಿʼ ಎಂದು ಸಬ್ ಇನ್ಸ್ಪೆಕ್ಟರ್ ವೇಷಧಾರಿ ಬೆದರಿಸಿದ್ದ. ಕೆಲವು ಹೊತ್ತಿನ ಬಳಿಕ ಸಿಬಿಐ ಅಧಿಕಾರಿಯ ಸೋಗಿನಲ್ಲಿ ವಿಡಿಯೋ ಕಾಲ್ ಮಾಡಿದ್ದ ಮತ್ತೊಬ್ಬ ವ್ಯಕ್ತಿ, ನಿಮ್ಮ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಲಾಗುತ್ತದೆ. ನಿಮ್ಮ ಬಂಧನವಾದರೆ ಕನಿಷ್ಠ ಒಂದೂವರೆ ವರ್ಷ ಜೈಲು ಶಿಕ್ಷೆಯಾಗಲಿದೆ ಎಂದು ಬೆದರಿಸಿದ್ದ.
ಮನೆಯಲ್ಲಿ ನಿವೃತ್ತ ಉದ್ಯೋಗಿ ಮತ್ತು ಅವರ ಪತ್ನಿ ಇದ್ದರು. ಹಾಗಾಗಿ ಇಬ್ಬರೂ ವಿಡಿಯೋ ಕಾಲ್ನಲ್ಲಿ ತಮಗೆ ಕಾಣಿಸುವಂತೆ ಕೊಠಡಿಯಲ್ಲಿ ಕೂರಬೇಕು ಎಂದು ಸಬ್ ಇನ್ಸ್ಪೆಕ್ಟರ್ ವೇಷಧಾರಿ ಸೂಚಿಸಿದ್ದ. ಬಹು ಹೊತ್ತಾದರೂ ವಿಡಿಯೋ ಕರೆ ಕಡಿತಗೊಳಿಸಲಿಲ್ಲ. ನಿವೃತ್ತ ಉದ್ಯೋಗಿ ತಮ್ಮ ಸ್ನೇಹಿತರೊಬ್ಬರನ್ನು ಕರೆತರಬೇಕಿದೆ ಎಂದು ತಿಳಿಸಿದರೂ ಅನುಮತಿ ನಿರಾಕರಿಸಲಾಗಿತ್ತು. ತಮ್ಮ ಆದೇಶಕ್ಕೆ ವಿರುದ್ಧವಾಗಿ ನಡೆದುಕೊಂಡರೆ ಬಂಧಿಸುವ ಬೆದರಿಕೆ ಒಡ್ಡಲಾಗಿತ್ತು.ಕೊಠಡಿಯಲ್ಲಿ ಡಿಜಿಟಲ್ ಅರೆಸ್ಟ್
ಲಕ್ಷ ಲಕ್ಷ ಹಣಕ್ಕೆ ಬೇಡಿಕೆ
ಈ ಕೇಸಿನಿಂದ ತಮ್ಮನ್ನು ಬಿಡುಗಡೆ ಮಾಡಬೇಕಿದ್ದರೆ ಹಣ ನೀಡುವಂತೆ ಸಬ್ ಇನ್ಸ್ಪೆಕ್ಟರ್ ವೇಷಧಾರಿ ಸೂಚಿಸಿದ್ದ. ಆತಂಕಕ್ಕೀಡಾದ ನಿವೃತ್ತ ಉದ್ಯೋಗಿ ಎರಡು ಕಂತುಗಳಲ್ಲಿ 41 ಲಕ್ಷ ರೂ. ಹಣ ವರ್ಗಾಯಿಸಿದ್ದಾರೆ. ವಂಚನೆಗೊಳಗಾದ ವಿಷಯ ಗೊತ್ತಾಗುತ್ತಿದ್ದಂತೆ ಶಿವಮೊಗ್ಗದ ಸಿಇಎನ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಡಿಜಿಟಲ್ ಅರೆಸ್ಟ್ ಕುರಿತು ಎಚ್ಚರ ವಹಿಸಿ
ಡಿಜಿಟಲ್ ಅರೆಸ್ಟ್ ಕುರಿತು ಜನರು ಎಚ್ಚರ ವಹಿಸಬೇಕು ಎಂದು ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ ತಿಳಿಸಿದೆ. ಸಿಬಿಐ, ಇ.ಡಿ, ಪೊಲೀಸ್, ಕಸ್ಟಮ್ಸ್ ಅಧಿಕಾರಿಗಳು, ನ್ಯಾಯಾಧೀಶರು ವಿಡಿಯೋ ಕರೆ ಮಾಡಿ ಜನರನ್ನು ಬಂಧಿಸುವುದಿಲ್ಲ. ಹಾಗಾಗಿ ಇಂಥ ವಂಚನೆಗಳ ಕುರಿತು ಎಚ್ಚರದಿಂದ ಇರಿ ಎಂದು ತಿಳಿಸಿದೆ. ಇಂಥ ಪ್ರಕರಣಗಳನ್ನು ಸಹಾಯವಾಣಿ ಸಂಖ್ಯೆ 1930ಗೆ ಕರೆ ಮಾಡಿ ತಿಳಿಸಬಹುದು. www.cybercrime.gov.in ಮೂಲಕ ಗಮನಕ್ಕೆ ತರುವಂತೆ ತಿಳಿಸಿದೆ.
ಇದನ್ನೂ ಓದಿ » ರೌಡಿ ಶೀಟರ್ ಕಾಲಿಗೆ ಗುಂಡು ಹಾರಿಸಿದ ಪೊಲೀಸ್