ಶಿವಮೊಗ್ಗ: ಸರ್ಕಾರಿ ನೌಕರರ ಸಂಘದ ರಾಜ್ಯಮಟ್ಟದ ಕ್ರೀಡಾಕೂಟ (Sports) ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ಮೇ 18ರಿಂದ ಮೂರು ದಿನ ಶಿವಮೊಗ್ಗದಲ್ಲಿ ನಡೆಯಲಿದೆ. ವಿವಿಧ ಜಿಲ್ಲೆಗಳ 15 ಸಾವಿರಕ್ಕಿಂತಲು ಹೆಚ್ಚಿನ ನೌಕರರು ವಿವಿಧ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ತಿಳಿಸಿದರು.
ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿ.ಎಸ್.ಷಡಾಕ್ಷರಿ, ಮೇ 18ರಂದು ಸಂಜೆ 5 ಗಂಟೆಗೆ ನೆಹರು ಕ್ರೀಡಾಂಗಣದಲ್ಲಿ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸುವರು. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕ್ರೀಡಾ ಧ್ವಜಾರೋಹಣ ನೆರವೇರಿಸಲಿದ್ದಾರೆ. ಸಚಿವ ಮಧು ಬಂಗಾರಪ್ಪ ಕ್ರೀಡಾ ಜ್ಯೋತಿ ಸ್ವೀಕರಿಸಲಿದ್ದಾರೆ ಎಂದು ತಿಳಿಸಿದರು.


ಷಡಾಕ್ಷರಿ ಏನೆಲ್ಲ ಹೇಳಿದರು? ಇಲ್ಲಿದೆ ಪ್ರಮುಖಾಂಶ
- ರಾಷ್ಟ್ರಮಟ್ಟಕ್ಕೆ ಕ್ರೀಡಾಕೂಟಕ್ಕೆ ಆಯ್ಕೆಯಾದವರಿಗೆ ಮೇ 18ರಂದು ಸಂಸದ ರಾಘವೇಂದ್ರ, ಶಾಸಕರಾದ ಬಿ.ಕೆ.ಸಂಗಮೇಶ್ವರ, ಬೇಳೂರು ಗೋಪಾಲಕೃಷ್ಣ ಸನ್ಮಾನಿಸಲಿದ್ದಾರೆ. ಶಾಸಕ ಚನ್ನಬಸಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
- ಪ್ರತಿ ಜಿಲ್ಲೆಯಲ್ಲಿ ಸುಮಾರು 400 ನೌಕರರು ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ. ಒಟ್ಟು 15 ಸಾವಿರಕ್ಕು ಹೆಚ್ಚು ನೌಕರರು ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
- ಒಟ್ಟು 144 ವಿವಿಧ ಸ್ಪರ್ಧೆಗಳು ನಡೆಯಲಿವೆ. ಈ ಪೈಕಿ ಕ್ರೀಡೆಯಲ್ಲಿ ವೈಯಕ್ತಿಕ 97, ಗುಂಪು ಕ್ರೀಡೆಗಳು 16 ಇರಲಿವೆ. ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ 15 ವೈಯಕ್ತಿಕ, 16 ಗುಂಪು ಸ್ಪರ್ಧೆಗಳು ಇರಲಿವೆ.
- ಮೇ 18ರಂದು ಸಂಜೆ 7 ಗಂಟೆಗೆ ಗಾಯಕ ರಾಜೇಶ್ ಕೃಷ್ಣನ್ ಅವರಿಂದ ಸಂಗೀತ ಸಂಜೆ ಕಾರ್ಯಕ್ರಮ ಇರಲಿದೆ. ಮೇ 19ರಂದು ಸಂಜೆ 7 ಗಂಟಗೆ ಗಾಯಕರಿಂದ ಜನಪದ ದಿಬ್ಬಣ ಕಾರ್ಯಕ್ರಮ ಇರಲಿದೆ.

- ಮೇ 20ರಂದು ಮಧ್ಯಾಹ್ನ 3 ಗಂಟೆಗೆ ಕುವೆಂಪು ರಂಗಮಂದಿರದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಟ್ರೋಫಿ ಮತ್ತು ನೆನಪಿನ ಕಾಣಿಕೆ ನೀಡಲಾಗುತ್ತದೆ.


ಸುದ್ದಿಗೋಷ್ಠಿಯಲ್ಲಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಆರ್.ಮೋಹನ್ ಕುಮಾರ್ ಸೇರಿದಂತೆ ಪದಾಧಿಕಾರಿಗಳು ಇದ್ದರು.
ಇದನ್ನೂ ಓದಿ » ಬಿಜೆಪಿಯಿಂದ ರಾಜ್ಯಾದ್ಯಂತ ತಿರಂಗ ಯಾತ್ರೆ, ಏನಿದು ಯಾತ್ರೆ? ಎಲ್ಲೆಲ್ಲಿ ಯಾವಾಗ ನಡೆಯುತ್ತೆ?

