ಶಿಕಾರಿಪುರ: ಗುತ್ತಿಗೆದಾರನಿಗೆ ಬಿಲ್ ಪಾವತಿಸಲು ಬಿಲ್ ಮೊತ್ತದ ಶೇ.3ರಷ್ಟು ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಸೆಕ್ಷನ್ ಆಫೀಸರ್ ಪರಶುರಾಮ್.ಹೆಚ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ (Raid) ಎಂದು ಲೋಕಾಯುಕ್ತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಲೋಕೋಪಯೋಗಿ ಇಲಾಖೆ ಗುತ್ತಿಗೆದಾರ ಲಿಂಗರಾಜ್ ಶಿವಪ್ಪ ಉಳ್ಳಾಗಡ್ಡಿ ಎಂಬುವವರು ಸೊರಬ ತಾಲೂಕಿನ ವಿವಿಧ ರಸ್ತೆ, ಶಾಲೆ ಕಾಮಗಾರಿ ನಡೆಸಿದ್ದರು. ಇದರ ಬಿಲ್ ಮೊತ್ತ ₹77.59 ಲಕ್ಷ ಪಾವತಿಗೆ ಬಾಕಿ ಇತ್ತು. ಬಿಲ್ ಪಾವತಿಗೆ ಇಂಜಿನಿಯರಿಂಗ್ ವಿಭಾಗದ ಸೆಕ್ಷನ್ ಆಫೀಸರ್ ಪರಶುರಾಮ್.ಹೆಚ್ ಬಿಲ್ ಮೊತ್ತದ ಶೇ.3ರಷ್ಟು ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಅಲ್ಲದೆ ₹1.63 ಲಕ್ಷ ಹಣ ಪಡೆದಿದ್ದರು ಎಂದು ಆರೋಪಿಸಲಾಗಿದೆ.
ಮತ್ತೆ ₹70 ಸಾವಿರಕ್ಕೆ ಬೇಡಿಕೆ
ಇಂಜಿನಿಯರಿಂಗ್ ವಿಭಾಗದ ಸೆಕ್ಷನ್ ಆಫೀಸರ್ ಪರಶುರಾಮ್.ಹೆಚ್ ಮತ್ತೆ ₹70 ಸಾವಿರಕ್ಕೆ ಬೇಡಿಕೆ ಇಟ್ಟಿದ್ದರು. ಇಂದು ಶಿರಾಳಕೊಪ್ಪದ ಶಿಕಾರಿಪುರ ರಸ್ತೆಯ ಲಕ್ಷ್ಮಿ ಮೆಡಿಕಲ್ ಸ್ಟೋರ್ ಎದುರು ಲಿಂಗರಾಜ ಶಿವಪ್ಪ ಉಳ್ಳಾಗಡ್ಡಿ ಅವರಿಂದ ₹30 ಸಾವಿರ ಲಂಚ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಪರಿಶುರಾಮ್.ಹೆಚ್ ಅವರನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಹಣವನ್ನು ಕೂಡ ವಶಪಡಿಸಿಕೊಳ್ಳಲಾಗಿದೆ.
ಲೋಕಾಯುಕ್ತ ಎಸ್.ಪಿ ಮಂಜುನಾಥ ಚೌಧರಿ ಮಾರ್ಗದರ್ಶನದಲ್ಲಿ ಉಪಾಧೀಕ್ಷಕ ಬಿ.ಪಿ.ಚಂದ್ರಶೇಖರ್ ನೇತೃತ್ವದಲ್ಲಿ ಟ್ರ್ಯಾಪ್ ಕಾರ್ಯ ನಡೆಯಿತು. ಇನ್ಸ್‌ಪೆಕ್ಟರ್ ರುದ್ರೇಶ್.ಕೆ.ಪಿ, ಗುರುರಾಜ್ ಎನ್.ಮೈಲಾರ್, ವೀರಬಸಪ್ಪ ಎಲ್.ಕುಸಲಾಪುರ, ಸಿಬ್ಬಂದಿ ಯೋಗೇಶ್.ಜಿ.ಸಿ, ಮಂಜುನಾಥ.ಎಂ, ಟೀಕಪ್ಪ, ಸುರೇಂದ್ರ, ಬಿ.ಟಿ.ಚನ್ನೇಶ, ದೇವರಾಜ.ವಿ, ಪ್ರಕಾಶ ಬಾರಿಮರದ, ಚಂದ್ರಿಬಾಯಿ, ಪ್ರದೀಪ, ಜಯಂತ, ಗಂಗಾಧರ, ಆನಂದ ಅವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಇದನ್ನೂ ಓದಿ » ಹೊಸನಗರದಲ್ಲಿ ಕುಸಿದ ಭೂಮಿ, ಒಂದು ಅಡಿಯಷ್ಟು ಕಳೆಗಿಳಿದ ರಸ್ತೆ



