ಶಿವಮೊಗ್ಗದ ಜೊತೆಗೆ ಶಾಮನೂರು ನಂಟು, ಇಲ್ಲಿತ್ತು ವ್ಯಾವಹಾರಿಕ ಸಂಬಂಧ, ಶಿಷ್ಯರ ಬಳಗ, ಚಿಕ್ಕಮ್ಮನ ಮನೆ

 ಶಿವಮೊಗ್ಗ  LIVE 

ಶಿವಮೊಗ್ಗ: ಮಾಜಿ ಸಚಿವ, ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ (95) ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಉದ್ಯಮ, ಶಿಕ್ಷಣ, ರಾಜಕೀಯ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ್ದ ಶಾಮನೂರು ಶಿವಶಂಕರಪ್ಪ (Shamanur Shivashankarappa) ಅವರಿಗೆ ಶಿವಮೊಗ್ಗದ (Shivamogga) ಜೊತೆಗೆ ಉತ್ತಮ ನಂಟು ಇತ್ತು.

ಶಾಮನೂರು ಶಿವಶಂಕರಪ್ಪ ಅವರಿಗೆ ಶಿವಮೊಗ್ಗದಲ್ಲಿ ವ್ಯಾವಹಾರಿಕ ಸಂಬಂಧವಿತ್ತು. ಸ್ನೇಹಿತರ ಬಳಗವಿದೆ. ಶಿಷ್ಯವರ್ಗವು ಇದೆ. ಇದರ ಜೊತೆಗೆ ಕೌಟುಂಬಿಕ ಸಂಬಂಧವು ಇದೆ. ಹಾಗಾಗಿ ಶಿವಮೊಗ್ಗಕ್ಕೆ ಅವರು ಆಗಾಗ ಬಂದು ಹೋಗುತ್ತಿದ್ದರು. 

ಶಿವಮೊಗ್ಗದ ನಂಟು, ಇಲ್ಲಿದೆ 4 ಪ್ರಮುಖಾಂಶ

ಪದವೀಧರರ ಸಹಕಾರ ಸಂಘದ ಅಧ್ಯಕ್ಷ ಎಸ್.ಪಿ.ದಿನೇಶ್‌ ಅವರು ಶಾಮನೂರು ಶಿವಶಂಕರಪ್ಪ ಅವರ ಗರಡಿಯಲ್ಲಿದ್ದವರು. ಶಿವಮೊಗ್ಗ ಲೈವ್.‌ಕಾಂ ಜೊತೆಗೆ ಮಾತನಾಡಿದ ಎಸ್‌.ಪಿ.ದಿನೇಶ್‌, ಶಾಮನೂರು ಶಿವಶಂಕರಪ್ಪ ಅವರಿಗಿದ್ದ ಶಿವಮೊಗ್ಗದ ನಂಟು ವಿವರಿಸಿದ್ದಾರೆ. ಅದರ ಪಾಯಿಂಟ್ಸ್‌ ಇಲ್ಲಿದೆ.

SP-Dinesh-to-contest-indipendent

ಪಾಯಿಂಟ್‌ 1: ಶಾಮನೂರು ಶಿವಶಂಕರಪ್ಪ ಅವರು ರೈಸ್‌ ಮಿಲ್‌ ಮಾಲೀಕರಾಗಿದ್ದರು. ಆದ್ದರಿಂದ ಶಿವಮೊಗ್ಗದ ರೈಸ್‌ ಮಿಲ್‌ ಮಾಲೀಕರ ಜೊತೆಗೆ ವ್ಯವಹಾರವಿತ್ತು. ನಂಜಪ್ಪ ಆಸ್ಪತ್ರೆಯ ಮಾಲೀಕರಾದ ಬೆನಕಪ್ಪ, ಜಯದೇವ ರೈಸ್‌ ಮಿಲ್‌ನ ರುದ್ರಣ್ಣ ಸೇರಿದಂತೆ ಹಲವರು ಅವರ ಆತ್ಮೀಯರಾಗಿದ್ದರು.

ಪಾಯಿಂಟ್‌ 2: ಶಿವಮೊಗ್ಗದಲ್ಲಿ ಹಲವು ಒಡನಾಡಿಗಳಿದ್ದರು. ಹಲವು ಶಿಷ್ಯರನ್ನು ಹೊಂದಿದ್ದರು. ಎಸ್‌.ಪಿ.ಜಗನ್ನಾಥ್‌ ಅವರು ಶಾಮನೂರು ಶಿವಶಂಕರಪ್ಪ ಅವರ ಪರಮ ಶಿಷ್ಯರಾಗಿದ್ದರು. ಅವರ ಒಡನಾಡಿಗಳು, ಶಿಷ್ಯರ ಪೈಕಿ ನಾನು ಅತ್ಯಂತ ಕಿರಿಯ ವಯಸ್ಸಿನವನು ಎಂದು ಎಸ್‌.ಪಿ.ದಿನೇಶ್‌ ಸ್ಮರಿಸಿಕೊಂಡರು.

ಪಾಯಿಂಟ್‌ 3: ಸಚಿವರಾಗಿದ್ದ ಸಂದರ್ಭ ಶಿವಮೊಗ್ಗದಿಂದ ಯಾರೆ ಅವರ ಬಳಿ ಹೋದರು ಇಲ್ಲ ಎನ್ನದೆ ಕೆಲಸ ಮಾಡಿಕೊಡುತ್ತಿದ್ದರು. ಪಕ್ಷಾತೀತ ಮತ್ತು ಜಾತ್ಯತೀತವಾಗಿ ಕೆಲಸ ಮಾಡುತ್ತಿದ್ದರು. ಸಮಾಜದ ವಿಚಾರವಾಗಿ ನಾವು ದೇಣಿಗೆ ಕೇಳಿದಾಗ ಎಂದಿಗೂ ಇಲ್ಲ ಎಂದಿರಲಿಲ್ಲ.

ಪಾಯಿಂಟ್‌ 4: ಶಾಮನೂರು ಶಿವಶಂಕರಪ್ಪ ಅವರ ತಾಯಿಯ ಸಹೋದರಿಯನ್ನು ಶಿವಮೊಗ್ಗ ತಾಲೂಕು ಬಿಲ್ಗುಣಿ ಗ್ರಾಮಕ್ಕೆ ಮದುವೆ ಮಾಡಿಕೊಡಲಾಗಿತ್ತು. ಹಾಗಾಗಿ ಚಿಕ್ಕಮ್ಮನ ಮನೆಗೆ ಆಗಾಗ ಬಂದು ಹೋಗುತ್ತಿದ್ದರು ಎಂದು ದಿನೇಶ್‌ ತಿಳಿಸಿದರು.

ಅವರ ಜೊತೆಗಿನ ಒಡನಾಟ ದೊಡ್ಡ ಭಾಗ್ಯ. ಒಮ್ಮೆ ಶಿವಮೊಗ್ಗಕ್ಕೆ ಬಂದಾಗ, ನಮ್ಮ ಮನೆಗೆ ಬನ್ನಿ ಎಂದು ಸುಮ್ಮನೆ ಕರೆದೆ. ಇಲ್ಲ ಅನ್ನಲಿಲ್ಲ. ಮನೆಗೆ ಬಂದರು. ಸುಮಾರು ಎರಡು ಗಂಟೆ ಕುಳಿತು ಮಂಡಕ್ಕಿ, ಕಾಫಿ ಸೇವಿಸಿ ಮಾತನಾಡಿದರು.ಎಸ್‌.ಪಿ.ದಿನೇಶ್‌, ಪದವೀಧರರ ಸಹಕಾರ ಸಂಘದ ಅಧ್ಯಕ್ಷ

ಶಿವಮೊಗ್ಗದಲ್ಲಿ ಶಾಮನೂರು ಪವರ್‌

ಶಿವಮೊಗ್ಗದ ರಾಜಕಾರಣದಲ್ಲು ಶಾಮನೂರು ಶಿವಶಂಕರಪ್ಪ ಅವರ ಹೆಸರು ಆಗಾಗ ಪ್ರತ್ಯಕ್ಷವಾಗುತ್ತಿತ್ತು. ಶಿವಮೊಗ್ಗದಲ್ಲಿ  ಕಾಂಗ್ರೆಸ್‌ ಪಕ್ಷ ಸಂಘಟಿಸುವಲ್ಲಿ ನೆರವಾಗಿದ್ದರು. ಅದೇ ರೀತಿ ಬಂಗಾರಪ್ಪ, ಯಡಿಯೂರಪ್ಪ ಕುಟುಂಬದೊಂದಿಗೆ ಒಡನಾಟವಿತ್ತು.

ಚರ್ಚೆ ಹೊಟ್ಟಿಸಿದ್ದ ‘ಶಹಬ್ಬಾಸ್‌ʼ

shamanuru shivashankarappa in Shimoga with by raghavendra

ಕಳೆದ ಲೋಕಸಭೆ ಚುನಾವಣೆಗು ಮುನ್ನ ಶಾಮನೂರು ಶಿವಶಂಕರಪ್ಪ ಶಿವಮೊಗ್ಗಕ್ಕೆ ಭೇಟಿ ನೀಡಿದ್ದರು. ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ, ‘ಸಂಸದ ರಾಘವೇಂದ್ರ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಅವರನ್ನು ಪುನರಾಯ್ಕೆ ಮಾಡಿʼ ಎಂದು ಹೇಳಿಕೆ ನೀಡಿದ್ದರು. ಇದು ಕಾಂಗ್ರೆಸ್‌ ಮತ್ತು ಬಿಜೆಪಿಯಲ್ಲಿ ತೀವ್ರ ಚರ್ಚೆಗೆ ಕಾರಣವಾಗಿತ್ತು.

ಮಠಗಳು, ಮಠಾಧೀಶರ ಜೊತೆಗೆ ನಂಟು

ಶಾಮನೂರು ಶಿವಶಂಕರಪ್ಪ ಅವರು ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರಾಗಿದ್ದರು. ಹಾಗಾಗಿ ಶಿವಮೊಗ್ಗದ ವೀರಶೈವ ಲಿಂಗಾಯತ ಮಠಗಳು, ಮಠಾಧೀಶರ ಜೊತೆಗೆ ಅವರು ನಂಟು ಹೊಂದಿದ್ದರು. ಮಠಗಳಲ್ಲಿನ ಕಾರ್ಯಕ್ರಮಗಳಲ್ಲು ಭಾಗವಹಿಸಿದ್ದರು.

ಇದನ್ನೂ ಓದಿ » ಸಿಗಂದೂರು ಸೇತುವೆ ಮೇಲೆ ಆತ್ಮಹತ್ಯೆಗೆ ಯತ್ನಿಸಿದ ಮೈಸೂರಿನ ವ್ಯಕ್ತಿ

ಶಾಮನೂರು ನಿಧನಕ್ಕೆ ಸಂತಾಪ

ಇನ್ನು, ಶಾಮನೂರು ಶಿವಶಂಕರಪ್ಪ ನಿಧನಕ್ಕೆ ಶಿವಮೊಗ್ಗ ಜಿಲ್ಲೆಯ ಜನಪ್ರತಿನಿಧಿಗಳು ಸಂತಾಪ ಸೂಚಿಸಿದ್ದಾರೆ. ಯಾರೆಲ್ಲ ಏನೆಲ್ಲ ಹೇಳಿದ್ದಾರೆ. ಇಲ್ಲಿದೆ ಡಿಟೇಲ್ಸ್‌

ಮಾಜಿ ಶಾಸಕನಾಗಿದ್ದಾಗ ಒಮ್ಮೆ ದಾವಣಗೆರೆಯಲ್ಲಿ  ಶಾಮನೂರು ಶಿವಶಂಕರಪ್ಪ ಅವರನ್ನು ಭೇಟಿಯಾಗಿದ್ದೆ. ನಾನು ಕೇಳಿದ ಒಂದೇ ಮಾತಿಗೆ ತೀರ್ಥಹಳ್ಳಿಯ ಆತ್ಮೀಯರ ಪುತ್ರಿ ದಂತ ವೈದ್ಯೆಗೆ ತಮ್ಮ ಮೆಡಿಕಲ್ ಕಾಲೇಜಿನಲ್ಲಿ ಉನ್ನತ ಹುದ್ದೆಯಲ್ಲಿ ಕಾರ್ಯನಿರ್ವಹಿಸಲು ಅವಕಾಶ ಕೊಟ್ಟರು. ತಮಗಿದ್ದ ಅಘಾದ ಶ್ರೀಮಂತಿಕೆ ಮತ್ತು ಅಧಿಕಾರದ ಯಾವುದೇ ಸಣ್ಣ ಸುಳಿವನ್ನು ತೋರಿಸದೇ ತಮ್ಮ ಮನೆಗೆ ಕರೆದುಕೊಂಡು ಹೋಗಿ ಉಪಚರಿಸಿದ್ದರು. ಇದು ಅವರ ತುಂಬಿದ ವ್ಯಕ್ತಿತ್ವಕ್ಕೆ ಸಾಕ್ಷಿಯಾಗಿ ಕಂಡಿತ್ತು.ಆರಗ ಜ್ಞಾನೇಂದ್ರ, ತೀರ್ಥಹಳ್ಳಿ ಶಾಸಕ


ಮಾಜಿ ಸಚಿವರು, ಶಾಸಕರು, ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರು ಹಿರಿಯ ನಾಯಕರಾದ ಶ್ರೀ ಶಾಮನೂರು ಶಿವಶಂಕರಪ್ಪ ಅವರ ನಿಧನದ ಸುದ್ದಿ ಕೇಳಿ ಅತೀವ ದುಃಖವಾಯಿತು. ಸಮಾಜ ಸೇವೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಶಿವಶಂಕರಪ್ಪನವರು ಶೈಕ್ಷಣಿಕ ಕ್ಷೇತ್ರಕ್ಕೆ ವಿಶೇಷ ಕೊಡುಗೆ ನೀಡಿದ್ದರು. ಅವರ ಅಗಲಿಕೆಯು ನಾಡಿಗೆ ತುಂಬಲಾರದ ನಷ್ಟವುಂಟು ಮಾಡಿದೆ. ಭಗವಂತ ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಹಾಗೂ ಅವರ ಕುಟುಂಬ ವರ್ಗಕ್ಕೆ, ಬೆಂಬಲಿಗರಿಗೆ ಈ ದುಃಖ ಭರಿಸುವ ಶಕ್ತಿ ನೀಡಲೆಂದು ಪ್ರಾರ್ಥಿಸುತ್ತೇನೆ.ಶಾರದಾ ಪೂರ್ಯಾನಾಯ್ಕ್‌, ಶಿವಮೊಗ್ಗ ಗ್ರಾಮಾಂತರ ಶಾಸಕಿ
ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು, ದಾವಣಗೆರೆ ಜಿಲ್ಲೆಯ ಮುತ್ಸದ್ದಿ ರಾಜಕಾರಣಿ, ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕರು, ಮಾಜಿ ಮಂತ್ರಿಗಳು ಆದ ಶಾಮನೂರು ಶಿವಶಂಕರಪ್ಪನವರ ನಿಧನ ಸುದ್ದಿ ತಿಳಿದು ಅತ್ಯಂತ ಬೇಸರವಾಯಿತು. ಕಾಂಗ್ರೆಸ್ ಪಕ್ಷಕ್ಕೆ ಅಪಾರ ಸೇವೆ ಸಲ್ಲಿಸಿ, 6 ಬಾರಿ ಶಾಸಕರಾಗಿ, ಮಂತ್ರಿಯಾಗಿ ಸೇವೆ ಸಲ್ಲಿಸಿದ್ದ ಶಾಮನೂರು ಶಿವಶಂಕರಪ್ಪನವರಿಗೆ ಹೃದಯಾಂತರಾಳದಿಂದ ಶ್ರದ್ಧಾಂಜಲಿ ಸಲ್ಲಿಸುತ್ತೇನೆ. ಮೃತರ ಆತ್ಮಕ್ಕೆ ಶಾಂತಿ ದೊರೆಯಲಿ, ಅವರ ಬಂದು ಬಳಗ ಹಾಗೂ ಅಭಿಮಾನಿಗಳಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.ಬೇಳೂರು ಗೋಪಾಲಕೃಷ್ಣ, ಸಾಗರ ಶಾಸಕ

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment