ಶಿವಮೊಗ್ಗ: ನಗರದ ಫ್ರೀಡಂ ಪಾರ್ಕ್‌ನಲ್ಲಿ ಜನವರಿ 24 ರಿಂದ 27ರವರೆಗೆ ಮಲೆನಾಡ ಕರಕುಶಲ ಉತ್ಸವ, ಸಿರಿಧಾನ್ಯ ಮೇಳ ಮತ್ತು ಪುಷ್ಪಸಿರಿ ಫಲಪುಷ್ಪ ಪ್ರದರ್ಶನ (Flower Show) ಆಯೋಜಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಹೇಮಂತ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎನ್.ಹೇಮಂತ್, ಜನವರಿ 24ರಂದು ಬೆಳಗ್ಗೆ 11 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಶಾಸಕರಾದ ಬಿ.ಕೆ.ಸಂಗಮೇಶ್ವರ, ಗೋಪಾಲಕೃಷ್ಣ ಬೇಳೂರು, ಆರಗ ಜ್ಞಾನೇಂದ್ರ, ಶಾರದಾ ಪೂರ್ಯಾನಾಯ್ಕ, ಬಿ.ವೈ.ವಿಜಯೇಂದ್ರ, ಸಂಸದ ಬಿ.ವೈ.ರಾಘವೇಂದ್ರ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಶಾಸಕ ಎಸ್.ಎನ್.ಚನ್ನಬಸಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.

ಈ ಬಾರಿಯ ಪ್ರದರ್ಶನದಲ್ಲಿ ಸುಮಾರು 2 ಲಕ್ಷಕ್ಕೂ ಅಧಿಕ ವಿವಿಧ ಬಣ್ಣದ ಹೂವುಗಳನ್ನು ಬಳಸಿ ಕಲಾಕೃತಿಗಳನ್ನು ನಿರ್ಮಿಸಲಾಗುತ್ತಿದೆ.
16 ಅಡಿ ಎತ್ತರದ ಕೋಟೆ ಹಾಗೂ ಶಿವಪ್ಪ ನಾಯಕರ ಭವ್ಯ ಪ್ರತಿಮೆಯನ್ನು ವಿವಿಧ ಹೂವುಗಳಿಂದ ರಚಿಸಲಾಗುತ್ತದೆ.
ಬಳ್ಳಿಗಾವಿಯ ಐತಿಹಾಸಿಕ ಕೇದಾರೇಶ್ವರ ದೇವಸ್ಥಾನದ 15 ಅಡಿ ಎತ್ತರದ ಮಾದರಿಯನ್ನು ಹೂವುಗಳಿಂದ ನಿರ್ಮಿಸಲಾಗುತ್ತದೆ.
ಹೂವು ಮತ್ತು ಫೋಲಿಯೇಜ್ ಬಳಸಿ 60 ಅಡಿ ಅಗಲ ಹಾಗೂ 22 ಅಡಿ ಎತ್ತರದ ಜೋಗ ಜಲಪಾತದ ಸುಂದರ ನೋಟವನ್ನು ಮರುಸೃಷ್ಟಿಸಲಾಗುತ್ತದೆ.
‘I Love Shivamogga’ ಎಂಬ ವಿಶೇಷ ಸೆಲ್ಫಿ ಪಾಯಿಂಟ್ ಪ್ರವಾಸಿಗರ ಆಕರ್ಷಣೆಗೆ ಸಿದ್ಧವಾಗಲಿದೆ.
ಸಿರಿಧಾನ್ಯ ಮೇಳ, ಕರಕುಶಲ ಪ್ರದರ್ಶನ
ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಸಂಜೀವಿನಿ ಯೋಜನೆಯಡಿ ಮಹಿಳಾ ಸ್ವಸಹಾಯ ಸಂಘಗಳ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳ ಆಯೋಜಿಸಲಾಗಿದೆ. Crafts of Malnad ಎಂಬ ಬ್ರ್ಯಾಂಡ್ ಅಡಿ ಮಲೆನಾಡಿನ ವಿಶಿಷ್ಟ ಉತ್ಪನ್ನಗಳನ್ನು ಪ್ರದರ್ಶನ ಮತ್ತು ಮಾರಾಟ ಮಾಡಲಾಗುತ್ತಿದೆ. ಇದರ ಜೊತೆಗೆ ಸಿರಿಧಾನ್ಯ ಮೇಳವನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.

ಕೈಮಗ್ಗ ಮತ್ತು ಜವಳಿ ಪ್ರದರ್ಶನ
ಜವಳಿ ಮತ್ತು ಕೈಮಗ್ಗ ಇಲಾಖೆ ಹಾಗೂ ರೇಷ್ಮೆ ಇಲಾಖೆಯ ಸಹಯೋಗದಲ್ಲಿ ಪ್ರದರ್ಶನ ಆಯೋಜಿಸಲಾಗಿದೆ. ದೇಶದ 11 ರಾಜ್ಯಗಳ ಭೌಗೋಳಿಕ ಮಾನ್ಯತೆ ಹೊಂದಿರುವ ಸೀರೆಗಳು, ಶಾಲುಗಳು ಮತ್ತು ಬೆಡ್ ಶೀಟ್‌ಗಳ ಪ್ರದರ್ಶನ ಹಾಗೂ ಮಾರಾಟ ಇರಲಿದೆ. KSIC ರೇಷ್ಮೆ ಸೀರೆಗಳ ಮೇಳ ಆಯೋಜಿಸಲಾಗಿದೆ ಎಂದರು.

ಜನವರಿ 27ರಂದು ಸಂಜೆ 6 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಉದ್ಘಾಟಿಸಲಿದ್ದಾರೆ. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಅಂದು ಪ್ರಶಸ್ತಿ ನೀಡಲಾಗುತ್ತದೆ ಎಂದು ಎನ್.ಹೇಮಂತ್ ತಿಳಿಸಿದರು.
ಇದನ್ನೂ ಓದಿ – ಡಿಸಿಸಿ ಬ್ಯಾಂಕಿಗೆ ನುಗ್ಗಿದ ಜಿಂಕೆ ರಕ್ಷಣೆ, ಆಗಿದ್ದೇನು?
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕಿ ನಂದಿನಿ.ಆರ್.ಬಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ. ಕಿರಣ್ ಕುಮಾರ್.ಎಂ, ಉದ್ಯಾನ ಕಲಾ ಸಂಘದ ಉಪಾಧ್ಯಕ್ಷ ಸಿದ್ದಪ್ಪ ಹರಳೆಣ್ಣೆಯವರ್ ಕುಂಸಿ, ಜಿ.ಎಂ.ರಘು ಸೇರಿದಂತೆ ಹಲವರು ಇದ್ದರು.








