ಶಿವಮೊಗ್ಗ: ಲೋಕಾಯುಕ್ತ ಇನ್ಸ್ಪೆಕ್ಟರ್ (Inspector) ಹೆಸರಿನಲ್ಲಿ ಮಹಾನಗರ ಪಾಲಿಕೆಯ ಅಧಿಕಾರಿಯೊಬ್ಬರಿಗೆ ಕರೆ ಮಾಡಿ, ಭ್ರಷ್ಟಾಚಾರದ ಆರೋಪ ಹೊರಿಸುವುದಾಗಿ ಬೆದರಿಸಿ ಹಣಕ್ಕೆ ಬೇಡಿಕೆಯಿಟ್ಟಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಶಿವಮೊಗ್ಗ ಮಹಾನಗರ ಪಾಲಿಕೆಯ ಸಹಾಯಕ ಕಂದಾಯ ಅಧಿಕಾರಿ ರಂಗಸ್ವಾಮಿ.ಎಸ್.ಕೆ ಎಂಬುವವರು ದೂರು ನೀಡಿದ್ದಾರೆ. ಫೆಬ್ರವರಿ 2 ರಂದು ರಂಗಸ್ವಾಮಿ ಅವರು ಕಚೇರಿಯಲ್ಲಿದ್ದಾಗ ಅವರ ಮೊಬೈಲ್ಗೆ ಅಪರಿಚಿತ ನಂಬರ್ನಿಂದ ವಾಟ್ಸಾಪ್ ವಾಯ್ಸ್ ಕಾಲ್ ಬಂದಿತ್ತು. ಆ ನಂಬರ್ನ ಪ್ರೊಫೈಲ್ನಲ್ಲಿ LOKAYUKTA RAVIPRAKASH C.I KSP ಎಂಬ ಹೆಸರಿತ್ತು ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ರಂಗಸ್ವಾಮಿ ಅವರು ಮರಳಿ ಕರೆ ಮಾಡಿದಾಗ, ಮಾತನಾಡಿದ ವ್ಯಕ್ತಿಯು ತಾನು ಲೋಕಾಯುಕ್ತ ಇನ್ಸ್ಪೆಕ್ಟರ್ ಎಂದು ಪರಿಚಯಿಸಿಕೊಂಡಿದ್ದ. ನಿಮ್ಮ ಮೇಲೆ ಸಾರ್ವಜನಿಕರು ಭ್ರಷ್ಟಾಚಾರ ಮತ್ತು ಕೆಲಸ ವಿಳಂಬದ ದೂರು ನೀಡಿದ್ದಾರೆ. ಈ ಪ್ರಕರಣ ಇಲ್ಲಿಗೇ ಮುಕ್ತಾಯವಾಗು ಎಂದಾದರೆ ನನಗೆ ₹50,000 ಹಣ ನೀಡಬೇಕು. ಇಲ್ಲದಿದ್ದರೆ ಟ್ರ್ಯಾಪ್ ಮಾಡಿ ಜೈಲಿಗೆ ಕಳುಹಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ. ಪುನಃ ಮೂರ್ನಾಲ್ಕು ಬಾರಿ ಕರೆ ಮಾಡಿ ಹಾಗೂ ಮೆಸೇಜ್ ಮಾಡು ಹಣಕ್ಕಾಗಿ ಒತ್ತಡ ಹೇರಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಪಾಲಿಕೆ ಅಧಿಕಾರಿ ರಂಗಸ್ವಾಮಿ ಅವರು ಲೋಕಾಯುಕ್ತ ಕಚೇರಿಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಅಲ್ಲಿನ ಅಧಿಕಾರಿಗಳ ಜೊತೆಗೆ ಚರ್ಚಿಸಿದಾಗ, ಕರೆ ಮಾಡಿದ ವ್ಯಕ್ತಿಯು ಲೋಕಾಯುಕ್ತ ಇನ್ಸ್ಪೆಕ್ಟರ್ ಅಲ್ಲ ಎಂಬುದು ದೃಢಪಟ್ಟಿದೆ. ಘಟನೆ ಸಂಬಂಧ ಕೋಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಒಂದೂವರೆ ಎಕರೆಯಲ್ಲಿ ಅಪಾರ್ಟ್ಮೆಂಟ್, 100 ಅಡಿ ರೆಸ್ತೆಯಲ್ಲಿ ದೊಡ್ಡ ಮಾಲ್
