ಬಿಜೆಪಿ ನಾಯಕನಿಗೆ ಸಚಿವ ದರ್ಜೆ ಸ್ಥಾನಮಾನ ನೀಡಿದ ಕಾಂಗ್ರೆಸ್‌ ಸರ್ಕಾರ, ಕೆಂಡವಾದ ಕೈ ಕಾರ್ಯಕರ್ತರು, ಏನಿದು?

ಶಿವಮೊಗ್ಗ: ನಿಗಮ, ಮಂಡಳಿ ಅಧ್ಯಕ್ಷರುಗಳಿಗೆ ರಾಜ್ಯ ಸರ್ಕಾರ ಸಚಿವ ದರ್ಜೆ ಸ್ಥಾನಮಾನ (Minister Status) ನೀಡಿ ಆದೇಶಿಸಿದೆ. ಇದರ ಬೆನ್ನಿಗೆ ಶಿಕಾರಿಪುರ ಕಾಂಗ್ರೆಸ್‌ನಲ್ಲಿ ಕಾರ್ಯಕರ್ತರು, ಮುಖಂಡರು ಆಕ್ರೋಶಗೊಂಡಿದ್ದಾರೆ. ಶಿವಮೊಗ್ಗ ಕಾಂಗ್ರೆಸ್‌ನಲ್ಲಿ ಮುಖಂಡರು ಅಚ್ಚರಿಗೊಂಡಿದ್ದು, ಜಿಲ್ಲಾಧ್ಯಕ್ಷರು ಬೆಂಗಳೂರಿಗೆ ದೌಡಾಯಿಸಿದ್ದಾರೆ.

ನಾಲ್ವರಿಗೆ ಮಿನಿಸ್ಟರ್‌ ದರ್ಜೆ ಯೋಗ

shivamogga-congress-uproar-minister-status-bjp-leader-bd-bhukanth-shikaripura-politics.

Chetan-Gowda-Youth-Congress-Shimoga.

ರಾಜ್ಯ ಸರ್ಕಾರ ಒಟ್ಟು 54 ನಿಗಮ ಮಂಡಳಿಗಳ ಅಧ್ಯಕ್ಷರಿಗೆ ಸಚಿವ ದರ್ಜೆ ಸ್ಥಾನಮಾನ ನೀಡಿದೆ. ರಾಜ್ಯಪಾಲರು ಕೂಡ ಇದಕ್ಕೆ ಒಪ್ಪಿಗೆ ಸೂಚಿಸಿದ್ದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಫೆಬ್ರವರಿ 7ರಂದು ಆದೇಶ ಹೊರಡಿಸಿದೆ. ಶಿವಮೊಗ್ಗ ಜಿಲ್ಲೆಯ ನಾಲ್ವರಿಗೆ ಸಚಿವ ದರ್ಜೆ ಸ್ಥಾನಮಾನ ಸಿಕ್ಕಿದೆ.

  1. ಆರ್.ಎಂ.ಮಂಜುನಾಥ ಗೌಡ – ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ
  2. ಚೇತನ್‌.ಕೆ – ರಾಜ್ಯ ಜವಳಿ ಮೂಲಸೌಲಭ್ಯ ವಿದ್ಯುತ್‌ ಮಗ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ
  3. ಪಲ್ಲವಿ.ಜಿ – ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ
  4. ಡಾ. ಬಿ.ಡಿ.ಭೂಕಾಂತ್‌ – ರಾಜ್ಯ ಸಹಕಾರಿ ತೋಟಗಾರಿಕೆ ಮಾರಾಟ ಮಹಾಮಂಡಳದ ಅಧ್ಯಕ್ಷ
RM-Manjunatha-Gowda-Press-meet-in-DCC-Bank

ಬಿಜೆಪಿ ಸದಸ್ಯನ ಹೆಸರು, ಆಕ್ರೋಶ

ರಾಜ್ಯ ಸಹಕಾರಿ ತೋಟಗಾರಿಕೆ ಮಾರಾಟ ಮಹಾಮಂಡಳದ ಅಧ್ಯಕ್ಷ ಡಾ. ಬಿ.ಡಿ.ಭೂಕಾಂತ್‌ ಅವರಿಗೆ ಸಚಿವ ದರ್ಜೆ ಸ್ಥಾನಮಾನ ಘೋಷಣೆ ಆಗಿರುವುದು ಕಾಂಗ್ರೆಸಿಗರ ಆಕ್ರೋಶಕ್ಕೆ ಕಾರಣವಾಗಿದೆ. ಬಿ.ಡಿ.ಭೂಕಾಂತ್‌ ಅವರು ಶಿಕಾರಿಪುರ ಬಿಜೆಪಿಯ ಪ್ರಮುಖ ನಾಯಕ. ಇವರಿಗೆ ಸಚಿವ ದರ್ಜೆ ಸ್ಥಾನಮಾನ ನೀಡಿರುವುದು ಶಿಕಾರಿಪುರ ಕಾಂಗ್ರೆಸಿಗರನ್ನು ಅಚ್ಚರಿಗೊಳಿಸುವುದರ ಜೊತೆಗೆ ಆಕ್ರೋಶಕ್ಕು ಕಾರಣವಾಗಿದೆ.

ಜಿಲ್ಲಾಧ್ಯಕ್ಷ ಬೆಂಗಳೂರಿಗೆ ದೌಡು

ಶಿಕಾರಿಪುರ ಕಾಂಗ್ರೆಸಿಗರ ಆಕ್ರೋಶದ ಬಿಸಿ ಜಿಲ್ಲಾ ಕಾಂಗ್ರೆಸ್‌ಗೆ ತಟ್ಟಿದೆ. ಇದೇ ಕಾರಣಕ್ಕೆ ಜಿಲ್ಲಾಧ್ಯಕ್ಷ ಆರ್‌.ಪ್ರಸನ್ನ ಕುಮಾರ್‌ ಅವರು ಬೆಂಗಳೂರಿಗೆ ದೌಡಾಯಿಸಿದ್ದಾರೆ. ಇನ್ನು, ಶಿಕಾರಿಪುರ ಕಾಂಗ್ರೆಸ್‌ನ ಮುಖಂಡರು ರಾಜ್ಯ ಕಾಂಗ್ರೆಸ್‌ನಲ್ಲಿ ತಮ್ಮ ಕೈಗೆಟಕುವ ನಾಯಕರಿಗೆ ವಿಷಯ ತಲುಪಿಸಿ, ಕಾರ್ಯಕರ್ತರ ಆಕ್ರೋಶ ಮತ್ತು ಪಕ್ಷಕ್ಕೆ ಆಗಿರುವು ಮುಜುಗರದ ಕುರಿತು ಮಾಹಿತಿ ಮುಟ್ಟಿಸಿದ್ದಾರೆ. ಹಾಗಾಗಿ ಸಚಿವ ದರ್ಜೆ ಸ್ಥಾನಮಾನದ ಪಟ್ಟಿಯಿಂದ ಬಿ.ಡಿ.ಭೂಕಾಂತ್‌ ಅವರ ಹೆಸರು ಕೈ ಬಿಡಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.

-Congress-Party-Office-Shimoga

ಜಿಲ್ಲಾಧ್ಯಕ್ಷರು ಹೇಳಿದ್ದೇನು?

ಈ ಬೆಳವಣಿಗೆ ಕುರಿತು ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಆರ್‌.ಪ್ರಸನ್ನ ಕುಮಾರ್‌ ಪ್ರತಿಕ್ರಿಯೆ ನೀಡಿದ್ದು, ‘ಬಿ.ಡಿ.ಭೂಕಾಂತ್‌ ಅವರು ಕಾಂಗ್ರೆಸ್‌ನವರಲ್ಲ. ಅವರಿಗೆ ಸಚಿವ ದರ್ಜೆ ಸ್ಥಾನಮಾನ ಸಿಕ್ಕಿದ್ದು ಹೇಗೆ ಎಂಬುದು ಗೊತ್ತಿಲ್ಲ. ಅವರು ಅಧ್ಯಕ್ಷರಾಗಿರುವುದು ನಿಗಮ ಮಂಡಳಿಗಳಿಗಲ್ಲ. ಅದು ಸಹಕಾರಿ ತೋಟಗಾರಿಕೆ ಮಾರಾಟ ಮಹಾಮಂಡಳ. ಈ ಕುರಿತು ಸರ್ಕಾರದ ಗಮನಕ್ಕೆ ತಂದಿದ್ದೇವೆ’ ಎಂದು ತಿಳಿಸಿದರು.

shivamogga-congress-uproar-minister-status-bjp-leader-bd-bhukanth-shikaripura-politics.

ಭೂಕಾಂತ್‌ ಏನಂದ್ರು?

ಇನ್ನೊಂದೆಡೆ ಶಿವಮೊಗ್ಗ ಲೈವ್.ಕಾಂ ಜೊತೆಗೆ ಮಾತನಾಡಿದ ರಾಜ್ಯ ಸಹಕಾರಿ ತೋಟಗಾರಿಕೆ ಮಾರಾಟ ಮಹಾಮಂಡಳದ ಅಧ್ಯಕ್ಷ ಡಾ. ಬಿ.ಡಿ.ಭೂಕಾಂತ್‌, ‘ನಾನು ಕಳೆದ ಐದು ವರ್ಷದಿಂದ ಅಧ್ಯಕ್ಷನಾಗಿ ಅಧಿಕಾರ ನಿರ್ವಹಿಸಿದ್ದೇನೆ. ಈಗ ಅಧಿಕಾರ ಅವಧಿ ಮುಕ್ತಾಯದ ಹಂತದಲ್ಲಿದೆ. ಸರ್ಕಾರ ನನಗೆ ಸಚಿವ ದರ್ಜೆ ಸ್ಥಾನಮಾನ ನೀಡಿದ್ದಕ್ಕೆ ಧನ್ಯವಾದಗಳು. ಈ ಸಂಬಂಧ ನನಗೆ ಆದೇಶ ಪ್ರತಿ ಕೂಡ ತಲುಪಿದೆʼ ಎಂದು ತಿಳಿಸಿದರು.

ರಾಜ್ಯ ಸಹಕಾರಿ ತೋಟಗಾರಿಕೆ ಮಾರಾಟ ಮಹಾಮಂಡಳದ ಆಡಳಿತ ಮಂಡಳಿಗೆ ವಿವಿಧ ಜಿಲ್ಲೆಗಳಿಂದ 19 ಮಂದಿ ಚುನಾಯಿತ ಪ್ರತಿನಿಧಿಗಳು ಇರುತ್ತಾರೆ. ಈ ಪೈಕಿ ಶಿವಮೊಗ್ಗದ ಪ್ರತಿನಿಧಿಯಾಗಿ ಬಿ.ಡಿ.ಭೂಕಾಂತ್‌ ಚುನಾಯಿತರಾಗಿದ್ದರು. ಈಗ ಶಿವಮೊಗ್ಗದಿಂದ ರಾಜ್ಯ ಸಮಿತಿ ಸದಸ್ಯರಾಗಿ ಸಂತೇಕಡೂರಿನ ವಿಜಯ್‌ ಕುಮಾರ್‌ (ದನಿ) ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ – ರಾಜ್ಯವನ್ನೇ ಬೆಚ್ಚಿಬೀಳಿಸಿದ ಶಿವಮೊಗ್ಗದ ಡ್ರೈವರ್‌, 19 ಅಕೌಂಟ್, 25 ATM ಕಾರ್ಡ್‌, ₹55 ಕೋಟಿ ನಷ್ಟ, ಏನಿದು ಕೇಸ್?

ಆದೇಶ ಬದಲಿಗೆ ಕಸರತ್ತು ಬಿ.ಡಿ.ಭೂಕಾಂತ್‌ ಅವರಿಗೆ ಸಚಿವ ದರ್ಜೆ ಸ್ಥಾನಮಾನ ನೀಡಿರುವ ಆದೇಶ ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ತೀವ್ರ ಮುಜುಗರ ಉಂಟು ಮಾಡಿದೆ. ಹಾಗಾಗಿ ಈ ಆದೇಶ ಬದಲಿಸಲು ಕಾಂಗ್ರೆಸ್‌ ಮುಖಂಡರು ಕಸರತ್ತು ನಡೆಸುತ್ತಿದ್ದಾರೆ. ಒಂದು ವೇಳೆ ಇವರ ಪ್ರಯತ್ನ ಸಫಲವಾದಲ್ಲಿ ಸದ್ಯದಲ್ಲೆ ನೂತನ ಆದೇಶ ಹೊರ ಬೀಳುವ ಸಧ್ಯತೆ ಇದೆ.

Leave a Comment