ಶಿವಮೊಗ್ಗ: ಭದ್ರಾವತಿಯಲ್ಲಿ ನಿರ್ಮಾಣವಾಗಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನದ (building) ಉದ್ಘಾಟನೆಗೆ ಎರಡು ವರ್ಷಗಳಿಂದಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸದೇ ನಿರ್ಲಕ್ಷ್ಯ ತೋರಿಸುತ್ತಿದ್ದಾರೆ ಎಂದು ಅಂಬೇಡ್ಕರ್ ಭವನ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಬಿ.ಎನ್.ರಾಜು ಆರೋಪಿಸಿದರು.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಲವ್ ಲೆಟರ್ಸ್ ನಾಟಕ, ಈಗಲೇ ಕಾಯ್ದಿರಿಸಿ ಟಿಕೆಟ್, ಇಲ್ಲಿದೆ ಲಿಂಕ್
ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭದ್ರಾವತಿಯ ಕನಕ ಮಂಟಪದ ಮುಂಭಾಗ ಭವನ ನಿರ್ಮಿಸಲಾಗಿದೆ. ಉದ್ಘಾಟನೆಗೆ ಮುಖ್ಯಮಂತ್ರಿ ಆಗಮಿಸಬೇಕೆಂದು ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಸ್ಪಂದನೆ ದೊರಕಿಲ್ಲ. ಶಿವಮೊಗ್ಗಕ್ಕೆ ಮದುವೆ ಸಮಾರಂಭಗಳಿಗೆ ಬಂದು ಹೋಗಲು ಮುಖ್ಯಮಂತ್ರಿಗಳಿಗೆ ಸಮಯ ಇದೆ. ಆದರೆ ಅಂಬೇಡ್ಕರ್ ಭವನ ಉದ್ಘಾಟನೆಗೆ ಸಮಯವಿಲ್ಲವೇ ಎಂದು ಪ್ರಶ್ನಿಸಿದರು.

ಏ.14ರಂದು ಅಂಬೇಡ್ಕರ್ ಜಯಂತಿಯನ್ನು ಜ್ಞಾನದ ದಿನವಾಗಿ ಆಚರಿಸಲಾಗುತ್ತದೆ. ಅದಕ್ಕೂ ಮೊದಲು ಮುಖ್ಯಮಂತ್ರಿ ಭವನ ಉದ್ಘಾಟಿಸಬೇಕು. ಇಲ್ಲದಿದ್ದರೆ ಸಮಿತಿಯ ವತಿಯಿಂದಲೇ ಭವನವನ್ನು ಉದ್ಘಾಟಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ತೀರ್ಥೇಶ್, ಗವಿಸಿದ್ದಪ್ಪ, ಸಿದ್ದಲಿಂಗಯ್ಯ ಎಂ.ವಿ. ಚಂದ್ರಶೇಖರ್ ಇದ್ದರು.








