ಶಿವಮೊಗ್ಗ: ನಗರದ ಉಷಾ ನರ್ಸಿಂಗ್ ಹೋಂ ಬಳಿ ಸರ್ಕಲ್‌ನಲ್ಲಿ ಇಂದು ಮಧ್ಯಾಹ್ನ ಖಾಸಗಿ ಅಂಬ್ಯುಲೆನ್ಸ್ (ambulance) ಮತ್ತು ಕಾರಿನ ನಡುವೆ ಸಂಭವಿಸಿದ ಅಪಘಾತದಲ್ಲಿ ಕಾರು ಮೂರು ಬಾರಿ ಪಲ್ಟಿ ಹೊಡೆದಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸೊರಬ ಕಡೆಯಿಂದ ಬಂದ ಖಾಸಗಿ ಅಂಬ್ಯುಲೆನ್ಸ್ ವಾಹನವು ಕಾಶೀಪುರದಿಂದ ಹನಸವಾಡಿಗೆ ಹೋಗುತ್ತಿದ್ದ ಕಾರಿಗೆ ಸರ್ಕಲ್‌ನಲ್ಲಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ರಸ್ತೆಯಲ್ಲೇ ಮೂರು ಬಾರಿ ಪಲ್ಟಿ ಹೊಡೆದು ನಿಂತಿದೆ.


ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರು
ಕಾರಿನಲ್ಲಿ ಸುರೇಶ್, ದೀಪಾ, ಕಿಶನ್ ಸೇರಿ ನಾಲ್ವರು ಇದ್ದರು. ಕಾರು ಪಲ್ಟಿ ಹೊಡೆದ ಪರಿಣಾಮ ಎಲ್ಲರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಎಲ್ಲರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತದ ತೀವ್ರತೆಗೆ ಕಾರಿನ ಹಿಂಭಾಗದ ಗಾಜು ಸಂಪೂರ್ಣ ಪುಡಿಯಾಗಿದ್ದು, ಮುಂಭಾಗ ಜಖಂಗೊಂಡಿದೆ.
ಅಂಬ್ಯುಲೆನ್ಸ್ ಚಾಲಕನಿಗೆ ಗಂಭೀರ ಗಾಯ
ಇನ್ನು, ಘಟನೆಯಲ್ಲಿ ಅಂಬ್ಯುಲೆನ್ಸ್ ಚಾಲಕ ಸಾವಂತ್ ಅವರ ಕಾಲಿಗೆ ಗಂಭೀರ ಗಾಯವಾಗಿದೆ. ಅವರನ್ನು ಹಾಗೂ ವಾಹನದಲ್ಲಿದ್ದ ಇತರೆ ಮೂವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಶಿವಮೊಗ್ಗ ಪೂರ್ವ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ಇದನ್ನೂ ಓದಿ – ಗಾಜನೂರಿನಲ್ಲಿ ಭೀಕರ ಅಪಘಾತ, ಆಟೋ ನಜ್ಜುಗುಜ್ಜು, ಶಿವಮೊಗ್ಗದ ಯುವಕ ಸಾವು, ಆಗಿದ್ದೇನು?

