ಭದ್ರಾವತಿ: ಖಾಸಗಿ ಸಂಸ್ಥೆಯೊಂದರ ಗೇಟ್ ರಿಪೇರಿ ಸಂದರ್ಭ ಆಕಸ್ಮಿಕವಾಗಿ ಗೇಟ್‌ನ ರಾಡ್ ಬಿದ್ದು, ಸೆಕ್ಯುರಿಟಿ ಗಾರ್ಡ್ (security guard) ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಪೇಪರ್‌ಟೌನ್ ನಿವಾಸಿ ಡಿ. ಚನ್ನಕೃಷ್ಣಯ್ಯ ಗಾಯಗೊಂಡ ವ್ಯಕ್ತಿ. ಮಾರ್ಚ್ 12ರಂದು ಬೆಳಗ್ಗೆ ಭದ್ರಾವತಿಯ ಖಾಸಗಿ ಕಂಪನಿಯೊಂದರ ಗೇಟ್ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ : ಆಯನೂರು ಬಳಿ ಕ್ರೇಟಾ ಕಾರು, ಓಮಿನಿ ಮಧ್ಯೆ ಡಿಕ್ಕಿ, ಏಳು ಮಂದಿಗೆ ಗಾಯ
ಹೇಗಾಯ್ತು ಘಟನೆ?
ಸುಮಾರು 2 ಟನ್ ತೂಕದ ಬೃಹತ್ ಗೇಟ್ ಅನ್ನು ರಿಪೇರಿಗಾಗಿ ಬಿಚ್ಚಲಾಗುತ್ತಿತ್ತು. ಈ ಸಂದರ್ಭ ಸಾರ್ವಜನಿಕರು ಅತ್ತ ಬಾರದಂತೆ ತಡೆಯಲು ಸೆಕ್ಯೂರಿಟಿ ಗಾರ್ಡ್ ಚನ್ನಕೃಷ್ಣ ನಿಂತಿದ್ದರು. ಆಗ ಗೇಟ್‌ನ ರಾಡ್ ಚನ್ನಕೃಷ್ಣಯ್ಯ ಅವರ ಮೇಲೆ ಬಿದ್ದಿದೆ. ಇದರಿಂದ ಅವರ ಬೆನ್ನುಮೂಳೆ ಮುರಿದಿದ್ದು, ತಕ್ಷಣವೇ ಅವರನ್ನು ಶಿವಮೊಗ್ಗದ ಸುಬ್ಯಯ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಚಿಕಿತ್ಸೆ ನೀಡಿದ ವೈದ್ಯರು, ಮೂಳೆ ಮುರಿದಿದ್ದು, ಅದಾಗಿಯೇ ಕೂಡಿಕೊಳ್ಳಬೇಕು. ಹಾಗಾಗಿ ಶಸ್ತ್ರಚಿಕಿತ್ಸೆ ಅಸಾಧ್ಯ. ಇನ್ನು ಮುಂದೆ ಅವರು ಕೆಲಸ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಕಂಪನಿ, ಏಜೆನ್ಸಿ ನಿರ್ಲಕ್ಷ್ಯ ಆರೋಪ
ಘಟನೆಯ ಬಳಿಕ ಖಾಸಗಿ ಕಂಪನಿ ಮತ್ತು ಸೆಕ್ಯುರಿಟಿ ಏಜೆನ್ಸಿಯವರು ಯಾವುದೇ ನೆರವು ಅಥವಾ ಪರಿಹಾರ ನೀಡದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಚನ್ನಕೃಷ್ಣ ಅವರ ಪತ್ನಿ ಲೂಸಿ ಆರೋಪಿಸಿದ್ದಾರೆ. ಈ ಸಂಬಂಧ ಭದ್ರಾವತಿ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ತಡವಾಗಿ ಪ್ರಕರಣ ದಾಖಲಾಗಿದೆ.






