ಸಾಗರ: ನಗರಸಭೆಯಲ್ಲಿ ಚುನಾಯಿತ ಪ್ರತಿನಿಧಿಗಳ ಅಡಳಿತ ಅವಧಿ ಮುಗಿದು ಆರು ತಿಂಗಳಾಗಿವೆ. ಇದರಿಂದ ಸ್ವಚ್ಛತೆ, ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದೆ. ನಗರಸಭೆ (Municipal) ಆಡಳಿತಾಧಿಕಾರಿಯೂ ಆಗಿರುವ ಜಿಲಾಧಿಕಾರಿ ಈವರೆಗೆ ಒಂದೇ ಒಂದು ಸಭೆ ನಡೆಸಿಲ್ಲ ಎಂದು ಪುರಸಭೆ ಮಾಜಿ ಅಧ್ಯಕ್ಷ ತೀ.ನ. ಶ್ರೀನಿವಾಸ್ ದೂರಿದರು.
ಪತ್ರಿಕಾ ಹೇಳಿಕೆ ಬಿಡುಗೆ ಮಾಡಿರುವ ಅವರು, ಪಟ್ಟಣಕ್ಕೆ ದಿನದ 24 ತಾಸು ನೀರು ಕೊಡುತ್ತೇವೆ ಎಂದು ಜನಪ್ರತಿನಿಧಿಗಳು ನೀಡಿದ್ದ ಭರವಸೆ ಹುಸಿಯಾಗಿದೆ. ಜನರು ಕುಡಿಯುವ ನೀರಿಗಾಗಿ ಪರಿತಪಿಸುತ್ತಿದ್ದಾರೆ. ವಾರ್ಡ್‌ಗಳಲ್ಲಿ ಸ್ವಚ್ಛತೆ ಮಾಯವಾಗಿದೆ. ಪರಿಸರ ಇಂಜಿನಿಯರ್‌ಗಳು, ಆರೋಗ್ಯ ನಿರೀಕ್ಷಕರು ಸಂಪೂರ್ಣ ವಿಫಲವಾಗಿದ್ದಾರೆ. ಮಾರ್ಕೇಟ್ ರಸ್ತೆ ಅಗಲೀಕರಣ ನನೆಗುದಿಗೆ ಬಿದ್ದಿದೆ. ಹೈಕೋರ್ಟ್ 2014ರ ಭೂಸ್ವಾಧೀನ ಆದೇಶ ಪಾಲನೆ ಮಾಡಲು ಆದೇಶಿಸಿದರೂ ಉಪವಿಭಾಗಾಧಿಕಾರಿ ಸುಮ್ಮನಿದ್ದಾರೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ : ಶಿವಮೊಗ್ಗ ಪಾಲಿಕೆ ಅಧಿಕಾರಿಗಳು, ಗುತ್ತಿಗೆದಾರರಿಗೆ ಗಡುವು ನೀಡಿದ ಶಾಸಕ
ಬಿ.ಹೆಚ್.ರಸ್ತೆಯನ್ನು ₹100 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಆದರೆ ಅಗಲೀಕರಣ ಕಾಮಗಾರಿ ಅವೈಜ್ಞಾನಿಕವಾಗಿದೆ. ಒಂದು ವರ್ಷದಲ್ಲಿ ಮುಗಿಯಬೇಕಿದ್ದ ಕಾಮಗಾರಿ ಐದು ವರ್ಷವಾದರೂ ಮುಗಿದಿಲ್ಲ. ಶಾಸಕರು, ಸಂಸದರ ವೈಫಲ್ಯವೇ ಇದಕ್ಕೆ ಕಾರಣ. ನಗರ ವ್ಯಾಪ್ತಿಯಲ್ಲಿ ಒಳಚರಂಡಿ ಕಾಮಗಾರಿ ಆರಂಭವಾಗಿ 15 ವರ್ಷಗಳಾಗಿವೆ. ಸೀಪೇಜ್ ಟ್ರಿಟ್‌ಮೆಂಟ್ ಪ್ಲಾಂಟ್ ಗೆ ಭೂಸ್ವಾಧೀನ ಮಾಡಿಕೊಳ್ಳುತ್ತಿಲ್ಲ ಎಂಬ ಕಾರಣಕ್ಕೆ ಕಾಮಗಾರಿ ವಿಳಂಬವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಳಚರಂಡಿ ಯೋಜನೆಗೆ ₹20 ಕೋಟಿ ಮಂಜೂರು ಮಾಡಿಸಿದ್ದೇನೆ ಎಂದು ಶಾಸಕರು ಹೇಳುತ್ತಿದ್ದಾರೆ. ಹಾಗಾದರೆ ಹಣದ ಲೆಕ್ಕ ಕೊಡಿ. ಸುಮಾರು ₹100 ಕೋಟಿ ಒಳಚರಂಡಿ ಕಾಮಗಾರಿಗೆ ಮಂಜೂರಾಗಿದ್ದು, ಈ ಬಗ್ಗೆ ಜಿಲ್ಲಾಧಿಕಾರಿ ಸೂಕ್ತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.






